ಉಡುಪಿ (ಎ,27): ಕ್ರಿಯೇಟಿವ್ ಪದವಿಪೂರ್ವ ಕಾಲೇಜ್ ಉಡುಪಿಯಲ್ಲಿ ಸಾಹಿತ್ಯಸಾಂಗತ್ಯ-6 ಕಾರ್ಯಕ್ರಮದಡಿ ಹಮ್ಮಿಕೊಂಡಿರುವ ಸಾಹಿತ್ಯದೆಡೆಗೆ ಯುವಜನತೆ ಎಂಬ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ನೀಲಾವರ ಸುರೇಂದ್ರ ಅಡಿಗರ ಕಾಲೇಜಿನ ವಿದ್ಯಾರ್ಥಿಗಳನ್ನು ಕುರಿತು ಮಾತುಗಳನ್ನಾಡಿದರು.
ಪ್ರತಿಭೆ, ಸಮಯ, ಸ್ಪೂರ್ತಿ ಇದ್ದರೆ ಸಾಹಿತ್ಯ ಬೆಳವಣಿಗೆಯಾಗುತ್ತದೆ. ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಸಾಹಿತ್ಯವನ್ನು ಮೈಗೂಡಿಸಿಕೊಳ್ಳುವುದರಿಂದ ಅವರ ಸಂಪೂರ್ಣ ವ್ಯಕ್ತಿತ್ವ ವಿಕಾಸಗೊಳ್ಳುತ್ತದೆ.ಮತ್ತು ಧನಾತ್ಮಕವಾಗಿ ಚಿಂತಿಸುವುದರಿಂದ ವ್ಯಕ್ತಿ ಯಶಸ್ಸನ್ನು ಗಳಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಸಂಸ್ಥೆಯ ಸಂಸ್ಥಾಪಕರಲ್ಲಿ ಓರ್ವರಾದ ಅಶ್ವತ್ ಎಸ್. ಎಲ್. ರವರು, “ಸಾಹಿತ್ಯವನ್ನು ಓದುವುದರಿಂದ ಪ್ರತಿಸ್ಪರ್ಧಿಯನ್ನು ಎದುರಿಸುವಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಸಾಹಿತ್ಯ ಮನುಷ್ಯ ಜೀವನದ ಅವಿಭಾಜ್ಯ ಅಂಗವಾಗಬೇಕು” ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಂಶುಪಾಲರಾದ ಸ್ಟ್ಯಾನಿ ಲೋಬೋ ರವರು “ಸಾಹಿತ್ಯ ಕೇವಲ ಪುಸ್ತಕಕ್ಕೆ ಸೀಮಿತವಾಗಿರದೆ ಯುವಜನತೆ ಅದನ್ನು ಮೈಗೂಡಿಸಿಕೊಂಡು ಕಾರ್ಯಪ್ರವೃತ್ತರಾಗಬೇಕು” ಎಂದು ತಮ್ಮ ಅಧ್ಯಕ್ಷೀಯ ನುಡಿಗಳನ್ನು ಆಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕರಲ್ಲಿ ಓರ್ವರಾದ ಆದರ್ಶ ಎಂ.ಕೆ. ಉಪಸ್ಥಿತರಿದ್ದರು. ಉಪನ್ಯಾಸಕ ವರ್ಗದವರು ,ಬೋಧಕೇತರ ಸಿಬ್ಬಂದಿಗಳು ಸಂಸ್ಥೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು ಉಡುಪಿಯ ಕನ್ನಡ ಉಪನ್ಯಾಸಕರಾದ ಶ್ರೀ ಸಂತೋಷ್ ರವರು ನಿರೂಪಿಸಿ ವಂದಿಸಿದರು.