ಕುಂದಾಪುರ (ಮಾ.20): ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ಆವಿಷ್ಕಾರ ಮತ್ತು ಉದ್ಯಮಶೀಲತೆ ಘಟಕ (Innovation & Entrepreneurship Development Cell) ಇದರ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಕೃಷ್ಣ ಪ್ರಸಾದ್ ಕ್ಯಾಶ್ಯೂ ಇಂಡಸ್ಟ್ರೀಸ್, ವಂಡಾರು ಇದರ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಸಂಪತ್ ಶೆಟ್ಟಿ, ಆವಿಷ್ಕಾರ ಆಧಾರಿತ ಉದ್ಯಮಶೀಲತೆ ದೇಶದ ಇಂದಿನ ತುರ್ತು, ಸ್ವಾವಲಂಬಿ ಭಾರತವನ್ನಾಗಿಸುವ ಕನಸಿನೊಂದಿಗೆ ಹೊಸ ಅನ್ವೇಷಣೆಗಳಿಗೆ ಯುವಜನತೆ ತೆರೆದುಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ IED Cell ವಿದ್ಯಾರ್ಥಿಗಳು ತಯಾರಿಸಿದ ‘ಪಿಕ್ಚರ್’ ಎನ್ನುವ ಮಾರ್ಕರ್ ಪೆನ್ನು ಹಾಗೂ ‘ವಿಂಗ್ಸ್’ ಎನ್ನುವ ವಿದ್ಯಾರ್ಥಿ ಸ್ನೇಹಿ ಕಾಲೇಜು ಆ್ಯಪ್ ಶ್ಲಾಘನೀಯ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿ ಪ್ರಮುಖವಾಗಿ ಗ್ರಾಮೀಣ ಪರಿಸರದಲ್ಲಿ ಉದ್ಯಮಶೀಲತೆಯನ್ನು ಅಭಿವೃದ್ಧಿ ಪಡಿಸುವುದರಿಂದ ಯುವ ಜನತೆ ನಗರಕ್ಕೆ ವಲಸೆ ಹೋಗುವುದನ್ನು ತಡೆಯಬಹುದು. ಈ ನಿಟ್ಟಿನಲ್ಲಿ IED Cellನ್ನು ಕಾಲೇಜಿನ ಪ್ರಮುಖ ಘಟಕವಾಗಿ ನಿರ್ಮಿಸುವ ಪ್ರಯತ್ನ ಮುಂದುವರೆಯಲಿ ಎಂದರು. ಇದೇ ಸಂದರ್ಭದಲ್ಲಿ ನಿಟ್ಟೆಯಲ್ಲಿ ನಡೆದ ಕೃಷಿ ಮೇಳದಲ್ಲಿ ನೃತ್ಯ ಹಾಗೂ ಪೋಟೋಗ್ರಾಫಿಯಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಗುರುತಿಸಲಾಯಿತು.
ಘಟಕದ ವಿದ್ಯಾರ್ಥಿಗಳಿಂದಲೇ ವಿನ್ಯಾಸಗೊಂಡ ‘ಪಿಕ್ಚರ್’ಮಾರ್ಕರ್ ಪೆನ್ನು ಎಲ್ಲರ ಗಮನ ಸೆಳೆಯಿತು. ಘಟಕದ ಸಂಯೋಜಕರು ಹಾಗೂ ವಾಣಿಜ್ಯ ಪ್ರಾಧ್ಯಾಪಕರಾದ ಶ್ರೀ ಶರತ್ ಕುಮಾರ್ ಹಾಗೂ ಶ್ರೀ ಅಕ್ಷಯ್ ಕುಮಾರ್ ಇವರು ಬರೆದ NEP ಪಠ್ಯಕ್ರಮ ಆಧಾರಿತ Entrepreneurship Skills ಪುಸ್ತಕ ಬಿಡುಗಡೆ ಮಾಡಲಾಯಿತು.
ಕಾಲೇಜಿನ ಉಪಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿ, ವಿಭಾಗದ ಮುಖ್ಯಸ್ಥೆ ಶ್ರೀಮತಿ ವೀಣಾ ವಿ. ಭಟ್ ಪ್ರಾಸ್ತಾವಿಸಿ, ವಾಣಿಜ್ಯ ಪ್ರಾಧ್ಯಾಪಕರಾದ ಶ್ರೀ ಶರತ್ ಕುಮಾರ್ ಅತಿಥಿಗಳನ್ನು ಪರಿಚಯಿಸಿ, ಶ್ರೀ ಅಕ್ಷಯ್ ಕುಮಾರ್ ವಂದಿಸಿದರು. ವಿದ್ಯಾರ್ಥಿಗಳಾದ ಶ್ರೇಯಾ ಖಾರ್ವಿ ಪ್ರಾರ್ಥಿಸಿ, ವಿನಿಟಾ ನಿರೂಪಿಸಿದರು.