ಅಕ್ಕಾ ಹೇಳೇ ಟೈಮ್ ಆಯಿತು ಆಫೀಸ್ಗೆ ಓಗಲ್ವಾ… ನನ್ ತಂಗಿ ಅನ್ನಿಸಿಕೊಂಡಿರೋ ಸುಧ್ಧ ಕನ್ನಡತಿ ಬೆಳಿಗ್ಗೆ ಬೆಳಿಗ್ಗೇನೇ ನನ್ನ ಜೀವದ ಭಾಷೆಯನ್ನು ಹೀಗೆ ಕೊಲೆ ಮಾಡ್ತಾ ಇದ್ರೆ ಅವಳನ್ನು ಸಾಯಿಸಿಬಿಡೋಣ ಅನ್ನೋವಷ್ಟು ಕೋಪ ಬರುತ್ತೆ ನನಗೆ. ಆದರೂ ಸುಧಾರಿಸಿಕೊಂಡು ಅದು ಹೇಳೇ ಅಲ್ವೇ ಏಳೇ ಅಂತ ಹೇಳೇ ಮಾರಾಯ್ತಿ, ಆಫೀಸ್ಗೆ ಓಗೋದಲ್ಲಾ ಹೋಗೋದು ಅಂತ ಅವಳ ಭಾಷೆ ತಿದ್ದಿ ನನ್ನ ಪಾಡಿಗೆ ನಾನು ನೆಮ್ಮದಿಯಾಗಿ ಇರೋ ಕೆಲಸ ಮುಗಿಸಿಕೊಂಡು ಹೊರಡೋಣ ಅಂದ್ರೆ ಮತ್ತೆ ಹಿಂದೇನೆ ಬಂದು ನನ್ನ ತಲೆ ತಿಂದಿರ್ತಾಳೆ.
ಮೊನ್ನೆ ಹಾಗೇ ಪಲಾವ್ ಮಾಡ್ತೀನಿ ನೀನ್ ಸ್ವಲ್ಪ ಪಾತ್ರೆ ಎಲ್ಲಾ ತೊಳೆದುಬಿಡು ಅಂತ ಅಡುಗೆ ಮನೆಗೆ ಬಿಟ್ಟುಕೊಂಡ್ರೆ (ಬೆಂಗಳೂರಿನ ಅಡುಗೆ ಮನೆಯಲ್ಲಿ ಒಬ್ಬರಿಗೆ ಮಾತ್ರ ಎಂಟ್ರಿ… ನೆರಳು ಕೂಡ ಪಕ್ಕದ ರೂಮಲ್ಲಿ ಇರುತ್ತೆ ಅಲ್ಲಿ ಜಾಗ ಕಡಿಮೆ ಅಂತ) ಅಲ್ಲೂ ಶುರುವಾಗಿತ್ತು ಕನ್ನಡದ ಕೊಲೆ. ಅಕ್ಕಾ… ಪಲಾವ್ಗೆ ಹೇನೇನ್ ಆಕ್ತೀಯ ನೀನು ಅಂತ ಕೇಳಿದ್ದಳು. ನಾನು ತಡ ಆಗಿತ್ತು ಅಂತ ಕನ್ನಡ ತಿದ್ದೋ ಕೆಲಸ ಬಿಟ್ಟು ಚಕ್ಕೆ, ಲವಂಗ, ಸೊಪ್ಪು ಸದೆ, ಇನ್ನೊಂದು ಮತ್ತೊಂದು ಅಂತ ಹೇಳ್ತಾ ಹೋದ್ರೆ ಮತ್ತೆ ಅಯ್ಯೋ ಹೇಲಕ್ಕಿ ಆಕೋಲ್ವಾ ನೀನು…? ನಮ್ ಮಮ್ಮಿ ಹೇಲಕ್ಕಿ ಆಕಿ ಪಲಾವ್ ಮಾಡ್ತಾರೆ… ಹೇನ್ ಚೆನ್ನಾಗಿರುತ್ತೆ ಗೊತ್ತಾ ಅಕ್ಕಾ… ನೀನೂ ಅಂಗೇ ಮಾಡು ಅಂದುಬಿಟ್ಲು.
ಎಷ್ಟು ಏಳಿಸಿದ್ರೂ ಏಳದೇ ಗಟ್ಟಿ ನಿದ್ದೆ ಬಂದವರ ಹಾಗೆ ಬಿದ್ದುಕೊಂಡಿದ್ದ ನನ್ನ ಅಣ್ಣ ಕಿಸಕ್ಕನೆ ನಕ್ಕಿದ್ದ. ನನಗೋ ಯಾರ ಮೇಲೆ ಕೋಪ ಮಾಡಿಕೊಳ್ಳಬೇಕು ಅಂತ ತಿಳೀದೇ ಅವಳ ಸಮಾಧಾನಕ್ಕೊಂದು ಏಲಕ್ಕಿ ಹಾಕಿ ನನ್ನ ತಿಂಡಿ ಮಾಡೋ ಕೆಲಸ ಮುಂದುವರಿಸಿದ್ದೆ. ಇಂಥಾ ಸುದ್ಧ ಕನ್ನಡತಿ ನನ್ನ ಚಿಕ್ಕಪ್ಪನ ಮಗಳು… ಆಗಾಗ ಮನೆಗೆ ಬಂದು “ಇಂಗೆಲ್ಲ” ಮಾತಾಡಿ “ಓಗ್ತಾಳೆ”.
ಆದರೆ ತಮಾಷೆಯ ಹೊರತಾಗಿ ಹೀಗೆಲ್ಲಾ ಕನ್ನಡ ಮಾತಾಡೋರನ್ನ ನೋಡಿದ್ರೆ ನಂಗೆ ದುಃಖ ಆಗುತ್ತೆ. ಯಾರಿಗಾದರೂ ದುಃಖ ಆಗೇ ಆಗುತ್ತೆ ಅದು ಬೇರೆ ಮಾತು. ತಾವು ತಪ್ಪು ಮಾತಾಡ್ತಾ ಇದ್ದೇವೆ ಅಂತ ತಿಳಿದ ಮೇಲಾದರೂ ಬದಲಾಗಬಹುದಲ್ವಾ? ಒಮ್ಮೊಮ್ಮೆ ಹಳ್ಳಿಗಳ ಕಡೆ ಮಾತಿನ ಧಾಟಿಯೇ ಹಾಗಿರಬಹುದು ಅಂತ ಸುಮ್ಮನಾಗಿಬಿಡಬಹುದು… ಆದರೆ ಬರೆಯುವಾಗ ಕೂಡಾ ಹೀಗೆ ತಪ್ಪು ಮಾಡಿದರೆ…? ನಮ್ಮದೇ ತಾಯಿಭಾಷೆಯನ್ನು ಕಲಿಯಲು, ಕಲಿಸಲು ಯಾಕಿಷ್ಟು ಜಿಪುಣತನ… ನಾವೆಷ್ಟೇ ದೊಡ್ಡವರಾದರೂ ನಮ್ಮ ಬರವಣಿಗೆಯಲ್ಲಿ ತಪ್ಪಿದೆ ಅನ್ನಿಸಿದರೆ ಮತ್ತೊಮ್ಮೆ ಅಕ್ಷರಮಾಲೆ, ಕಾಗುಣಿತ ಎಲ್ಲವನ್ನೂ ಕಲಿಯಲು ಹಿಂಜರಿಕೆ ಬೇಡ ಅನ್ನೋದು ನನ್ನ ಭಾವನೆ…? ತೇಯ್ದಷ್ಟೂ ಪರಿಮಳಿಸುವ ಕನ್ನಡ ಶ್ರೀಗಂಧವನ್ನು ಇನ್ನಷ್ಟು ಮತ್ತಷ್ಟು ಚಂದವಾಗಿ ಬಳಸಿಕೊಂಡರೆ ಅದರ ಕಂಪು ಜಗತ್ತಿನ ಎಲ್ಲಾ ಮೂಲೆಗಳಿಗೂ ಪಸರಿಸಬಹುದು. ನೀವ್ ಏನಂತೀರಿ ಶುದ್ಧ ಕನ್ನಡಿಗರೇ…!?
ಆಕಾಶ ಮಲ್ಲಿಗೆ