ಹೊಸಂಗಡಿ( ಆ ,13): ಸರ್ಕಾರಿ ನೌಕರಿಯಲ್ಲಿದ್ದು, ಹೊಸಂಗಡಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸರಿಸುಮಾರು 12 ವರ್ಷಗಳ ಕಾಲ ತಮ್ಮ ಸೇವೆಯನ್ನು ಸಲ್ಲಿಸಿ, ಬೇರೆ ಕಾಲೇಜಿಗೆ ವರ್ಗಾವಣೆಗೊಂಡ ಜೀವಶಾಸ್ತ್ರ ಉಪನ್ಯಾಸಕ ಡಾ. ಅರುಣ್ ಕುಮಾರ್ ಶೆಟ್ಟಿ ಮತ್ತುಗಣಿತಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಅರ್ಚನಾ ಇವರ ಬೀಳ್ಕೊಡುಗೆ ಸಮಾರಂಭ ಇತ್ತೀಚೆಗೆ ಜರುಗಿತು.

ಸ. ಪ. ಪೂ. ಕಾ. ಹೊಸಂಗಡಿಯ ಪ್ರಾಂಶುಪಾಲರಾದ ರಂಜಿತ್ ಕುಮಾರ್ ಶೆಟ್ಟಿ, ಇವರ ಘನ ಅಧ್ಯಕ್ಷತೆಯಲ್ಲಿ, ಶ್ರೀಯುತ ಗೋಪಾಲ್ ಭಟ್ ಇವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಸಾಂಗವಾಗಿ ನೆರವೇರಿತು. ಮುಖ್ಯ ಅತಿಥಿಗಳಾಗಿ, ಶ್ರೀ ಗುರುಪ್ರಸಾದ್ ಶೆಟ್ಟಿ, ಮುಖ್ಯೋಪಾಧ್ಯಾಯರು ಸ.ಪ. ಪೂ.ಕಾಲೇಜು, ಪ್ರೌಢಶಾಲಾ ವಿಭಾಗ ಹೊಸಂಗಡಿ, ಶ್ರೀ ಭಾಸ್ಕರ್ ಶೆಟ್ಟಿ ಕಾರ್ಯಾಧ್ಯಕ್ಷರು, ಸ. ಪ. ಪೂ.ಕಾಲೇಜು ಹೊಸಂಗಡಿ,, ಶ್ರೀ ಉದಯ ನಾಯಕ್ ಅಧ್ಯಕ್ಷರು, ಹಳೆ ವಿದ್ಯಾರ್ಥಿ ಸಂಘ ಸ. ಪ. ಪೂ.ಕಾಲೇಜು ಹೊಸಂಗಡಿ, ಶ್ರೀ ಚಂದ್ರ ಜೋಗಿ, ಕಾರ್ಯದರ್ಶಿ ಸ. ಪ. ಪೂ.ಕಾಲೇಜು ಹೊಸಂಗಡಿ ಉಪಸ್ಥಿತರಿದ್ದರು.

ಸರ್ಕಾರಿ ನೌಕರಿಯಲ್ಲಿ ಅನಿವಾರ್ಯ ಎನ್ನುವಂತೆ ,ಒಂದು ಕಡೆಯಿಂದ ಇನ್ನೊಂದು ಕಡೆಗೆ ವರ್ಗಾವಣೆ ಹೊಂದುವುದು ಸಹಜ ಪ್ರಕ್ರಿಯೆ. ಹೊಸಂಗಡಿ ಕಾಲೇಜು ಹಲವಾರು ಸಿಹಿ ನೆನಪುಗಳ ಬುತ್ತಿಯನ್ನು ನನಗೆ ನೀಡಿದೆ.. ಇಲ್ಲಿಯ ಸಹೋದ್ಯೋಗಿಗಳೊಂದಿಗೆ ಅವಿನಾಭಾವ ಭಾಂದವ್ಯವಿದೆ. ತನಗೆ ಸಕಲವೂ ನೀಡಿರುವ ಹೊಸಂಗಡಿ ಕಾಲೇಜನ್ನು ಬಿಟ್ಟುಹೋಗುವುದು ನಿಜಕ್ಕೂ ಬೇಸರದ ಸಂಗತಿ ಎಂದು ತಮ್ಮ ಮನದಾಳದ ಮಾತನ್ನು ಡಾ. ಅರುಣ್ ಕುಮಾರ್ ಶೆಟ್ಟಿ ಜೀವಶಾಸ್ತ್ರ ಉಪನ್ಯಾಸಕರು, ಬೀಳ್ಕೊಡುಗೆ ಸಮಯದಲ್ಲಿ ಕಾಲೇಜನ್ನು ಉದ್ದೇಶಿಸಿ ಮಾತನಾಡಿದರು.

ತನ್ನ ಸೇವೆಯ ಅರ್ಧ ಭಾಗವನ್ನು ನಾನು ಪ್ರಯಾಣದಲ್ಲೇ ಕಳೆಯ ಬೇಕಾಗಿರುವ ಅನಿವಾರ್ಯತೆಯಿರುವುದರಿಂದ ಇಂದು ವರ್ಗಾವಣೆ ಬಯಸಿದ್ದು, ಆದರೆ ಹೋಗುವ ಈ ಕ್ಷಣ ತವರನ್ನು ತೊರೆಯುವ ಹೆಣ್ಣಿನಂತಾಗಿದೆ. ಸೇವೆಯ ಮೊದಲ ದಿನದಿಂದ ಇಲ್ಲಿಯತನಕ ಒಂದೇ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ್ದು ಇಂದು ಅರೆ ಮನಸ್ಸಿನಿಂದ ಹೋಗಬೇಕಾಗಿದೆ. ಇಲ್ಲಿ ಅವಿಸ್ಮರಣೀಯ ಗಳಿಗೆಗಳನ್ನು ಎಂದಿಗೂ ಮರೆಯಲಾರೆ ಎನ್ನುತ್ತಾ ಗಣಿತಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಅರ್ಚನಾ ರವರು ಭಾವುಕರಾದರು.
ವರ್ಷದ ಆದಿಯಲ್ಲಿ ತಮ್ಮ ವಯೋ ಸಹಜ ನಿವೃತ್ತಿಯನ್ನು ಪಡೆದುಕೊಂಡಂತಹ ಗೋಪಾಲ್ ಭಟ್ ಸರ್ ಅವರು, ನಿಮ್ಮ ಸೇವೆಯನ್ನು ಎಂದಿಗೂ ಮರೆಯುವುದಿಲ್ಲ ಕಾಲೇಜಿಗೆ ಉತ್ತಮ ಫಲಿತಾಂಶವನ್ನು ನೀಡಿ ಕಾಲೇಜಿಗೆ ಉತ್ತಮ ಕಾಣಿಕೆಯನ್ನು ನೀಡಿದ್ದೀರಿ ಎಂದು ಶುಭ ಹಾರೈಸಿದರು.
ಪ್ರಾಂಶುಪಾಲರ ನುಡಿ : ಶ್ರೀಯುತ ರಣಜಿತ್ ಕುಮಾರ್ ಶೆಟ್ಟಿ ಅವರು ಸಹೋದ್ಯೋಗಿಯಾಗಿ ತಾವು ಕಂಡ ಅರುಣ್ ಸರ್ ಮತ್ತು ಅರ್ಚನ ಮೇಡಂ ರವರ ಜೊತೆಗಿನ ಬಾವುಕ ಕ್ಷಣಗಳನ್ನು, ಉಪನ್ಯಾಸಕರ ಕೊಠಡಿಯೊಳಗಿನ ಸಿಹಿ ಕ್ಷಣಗಳನ್ನು, ಚರ್ಚಿಸಿದ ಅಗಾಧ ಜ್ಞಾನಗಳನ್ನು ಸ್ಮರಿಸಿಕೊಳ್ಳುತ್ತಾ ತಮ್ಮ ಒಡನಾಟವನ್ನ ನೆನೆದು ಭಾವುಕರಾದರು.

ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ವೈಶಾಲಿ ಹೆಬ್ಬಾರ್ ಕನ್ನಡ ಉಪನ್ಯಾಸಕಿ ಇವರು ನಿರ್ವಹಿಸಿದರೆ, ಶ್ರೀಯುತ ವೆಂಕಟೇಶ್ ರಸಾಯನಶಾಸ್ತ್ರ ಉಪನ್ಯಾಸಕರು ಸ್ವಾಗತಿಸಿ, ಶ್ರೀಯುತ ರಾಜಶಾಸ್ತ್ರ ಉಪನ್ಯಾಸಕರು ವಂದಿಸಿದರು.









