ಕೊರೋನಾ ಎಂಬ ವಿಚಿತ್ರ ಸಂಕಟದ ಸಂದರ್ಭದಲ್ಲಿ ಆಧುನಿಕ ರಂಗಭೂಮಿಯ ಹೊಸ ಸಾಧ್ಯತೆ ಮತ್ತು ದಾರಿಗಳನ್ನು ಕಂಡುಕೊಳ್ಳುತ್ತಿರುವಾಗ ಈ ಹಿನ್ನೆಲೆಯಲ್ಲಿ ನಮ್ಮದು ಈ ಪ್ರಯತ್ನ ಎನ್ನುತ್ತಾ ಆರಂಭಿಸಿದರು ಸಂಕಥನ ಎನ್ನುವ ರಂಗ ಓದನ್ನು ಮಂದಾರ ಕಲಾವಿದರು ಈ ಸಂಜೆ ಕುಂದಾಪುರ ಜೇಸಿ ಭವನದಲ್ಲಿ.
ಪುಟ್ಟ, ಪುಟ್ಟ ಒಂದೈದು ಕತೆ-ಲೇಖನ-ಕವಿತೆಗಳ ಎಳೆಗಳನ್ನು ಬಿಡಿಬಿಡಿಯಾಗಿ ರೋಹಿತ್ ಬೈಕಾಡಿ ವಿನ್ಯಾಸಗೊಳಿಸಿದ್ದರು. ವಿಶಿಷ್ಟ ತೀರ್ಪು ಇದರಲ್ಲಿ ಬ್ರೆಡ್ ಮತ್ತು ಜಾಮ್ ಕದ್ದ ಕಾರಣಕ್ಕಾಗಿ ಹದಿನೈದರ ಹುಡುಗನೊಬ್ಬನನ್ನು ಕಟಕಟೆಯಲ್ಲಿ ಪ್ರಶ್ನಿಸಲಾಗುತ್ತದೆ. ಕಳವಿಗೆ ಕಾರಣ ಹೇಳುತ್ತಾ ಹೋಗುವ ಹುಡುಗ ಎದೆಯನ್ನು ತೇವಗೊಳಿಸುತ್ತಾನೆ. ನ್ಯಾಯಮೂರ್ತಿಗಳು ಕನಲಿ ಕಂಗೆಟ್ಟು ಹುಡುಗನ ಹಸಿವೆಗೆ ಸ್ವತಃ ತಾವೂ ಕಾರಣ ಎಂದು ತಮಗೇ ದಂಡವಿಧಿಸಿಕೊಳ್ಳುತ್ತಾರೆ. ನಿನ್ನ ತಟ್ಟೆಯಲ್ಲಿ ಮಿಕ್ಕಿದ ಒಂದು ಅಗುಳು ಅನ್ನವೂ ನಿನ್ನದಲ್ಲ ಎನ್ನುತ್ತದೆ ಕಥೆ.
ಗಡಿಬಿಡಿಯ ಬೆಳಗಲ್ಲಿ ಗೃಹಿಣಿ ಗಂಡ, ಅತ್ತೆ, ಮಕ್ಕಳನ್ನು ಸಂಭಾಳಿಸಿ ತಾನೂ ಆಫೀಸಿಗೆ ತಯಾರಾಗಿ ನಡುಮನೆಗೆ ಬರುವಷ್ಟರಲ್ಲಿ ಗಂಡನೆಂಬ ಪ್ರಾಣಿ ಬಿಟ್ಟು ಹೊರಟು ಹೋಗಿರುತ್ತಾನೆ. ಶತಮಾನಗಳು ಕಳೆದರೂ ಹೆಣ್ಣನ್ನು ಗೌರವಿಸುವ ಪ್ರಜ್ಞೆ ಮೂಡಿದಂತೆ ಕಾಣುತ್ತಿಲ್ಲ. ಶೋಷಣೆ ಇಂದೂ ಜಾರಿಯಲ್ಲಿದೆ ಬದಲಾದ ಸ್ವರೂಪದಲ್ಲಿ. ತಂದೆ ಮಗುವ ತಬ್ಬಿದಾಕೆ ನಿನಗೆ ಬೇರೆ ಹೆಸರು ಬೇಕೆ? ಹಿನ್ನೆಲೆ ಹಾಡುತ್ತದೆ! ಇದು ಎರಡನೆಯ ಕಥೆ. ಮುಂದುವರಿಯುತ್ತಾ ಊರಿನ ನಾಡಹಬ್ಬಕ್ಕೆ ಖ್ಯಾತ ಸಾಹಿತಿಯನ್ನು ಭಾಷಣಕ್ಕೆ ಆಹ್ವಾನಿಸಲಾಗಿ ಭಾಷಣಕಾರ ತನ್ನ ಬಹುಬೇಡಿಕೆಯ ಪಟ್ಟಿಯ ಜೊತೆಗೆ ಆರ್ಥಿಕ ದುಸ್ಥಿತಿಯ ಬಗ್ಗೆ ಮಾತನಾಡುತ್ತೇನೆ ಎನ್ನುತ್ತಾನೆ. ಸಂಘಟಕರು ತಮ್ಮ ಆರ್ಥಿಕ ದುಸ್ಥಿತಿಯ ಕಾರಣವನ್ನು ಮುಂದಿಟ್ಟು ಭಾಷಣವನ್ನು ರದ್ದುಗೊಳಿಸುತ್ತಾರೆ. ಇದು ಬೀchi ಕಥೆ. ಸೈನಿಕ ಆಗು ಅಂತ ಯಾಕೆ ಹೇಳಲ್ಲ ಕಾಯ್ಕಿಣಿಯವರ ಕವಿತೆ ರಂಗದಲ್ಲಿ ಚಲಿಸುತ್ತದೆ. ಯುದ್ಧದ ಕುರಿತಾದ ಮಕ್ಕಳ ಪ್ರಶ್ನೆಗಳಿಗೆ ಅಪ್ಪ ಬೆಪ್ಪನಂತಾಡುತ್ತಾನೆ! ಗಡಿರೇಖೆ ಮಳೆ ಬಂದರೆ ಅಳಿಸಿ ಹೋಗೋದಿಲ್ಲ ಅಪ್ಪ? ಯುದ್ಧದಲ್ಲಿ ಇಳುಕಲಲ್ಲಿ ಓಡುವಾಗ ಜಾರಿಬಿದ್ದ ರೆ ಬಿದ್ದವ ಏಳುವವರೆಗೆ ಕಾಯುತ್ತಾರ ಅಥವಾ ಬಿದ್ದಾಗಲೆ ಗುಂಡು ಹೊಡೆಯುತ್ತಾರ? ಇಂತಹ ಹತ್ತೆಂಟು ಎದೆ ಕಲುಕುವ ಪ್ರಶ್ನೆಗಳಿಗೆ ಯಾವ ಅಪ್ಪನಾದರೂ ಹೇಗೆ ಉತ್ತರಿಸಿಯಾನು? ಕೊನೆಯಲ್ಲಿ ಸೀತಾರಾಮಯ್ಯನವರದ್ದೊಂದು ಕಥೆ. ಬೂಟ್ ಪಾಲಿಶ್ ಹುಡುಗನದ್ದು. ಹುಡುಗನ ಎಣ್ಣೆ ಕಾಣದ ತಲೆಯನ್ನು ನೋಡುತ್ತಾ ಗ್ರಹಸ್ಥ ಹೇಳುತ್ತಾನೆ:ಈತನ ತಲೆಯ ಮೇಲಿನ ಧೂಳು ನಮ್ಮೆಲ್ಲರ ಬೂಟುಗಳದ್ದೇ . ಮಂದಾರದ ಎಳೆಯ ಗೆಳೆಯರು ಕಡು ವಿಷಾದವನ್ನು, ತಣ್ಣನೆಯ ನೋವನ್ನು, ದುಃಖವನ್ನು, ಬೀಚಿಯವರ ತಿಳಿಹಾಸ್ಯ ನನ್ನು ಪ್ರೇಕ್ಷಕರಿಗೆ ದಾಟಿಸುವಲ್ಲಿ ಯಶ ಕಂಡಿದ್ದಾರೆ. ಈ ಶ್ರೇಯ ನಿರ್ದೇಶಕ ರೋಹಿತ್ ಬೈಕಾಡಿಯವರಿಗೆ ಸೇರಬೇಕೆಂದು ಅವರೆಲ್ಲ ಅಂದರೆ ಅದಕ್ಕೆ ನನ್ನ ತಕರಾರಿಲ್ಲ. ಸಮುದಾಯ ಕುಂದಾಪುರ ಮತ್ತೆ ಕಥಾ ಓದು ಪ್ರಾರಂಭ ಮಾಡಿದೆ…
ಸಮುದಾಯ ಕುಂದಾಪುರ