ಚಂದಿರನ ಬೆಳಕಿನಲಿ ತಾರೆಗಳ ನಡುವಿನಲಿ
ಸುಂದರಿಯ ಹಾಗೆ ಬಂದೆ ನನ್ನೆದೆ ಬಾಂದಳದಲಿ
ಒಲವಿನ ಉಡುಗೊರೆಯ ಮುತ್ತಿನಮಾಲಿಕೆಯು
ನುಣುಪಾಗಿ ಪೋಣಿಸಿ ಕೊರಳಲಿ ಜಾರಿಸಿ
ಬೆಳದಿಂಗಳಿಗೊಂದು ಹೆಣ್ಣಾಗಿ ಬಂದಂತೆ ಕಂಡೆ
ಧರೆಗಿಳಿದ ದೇವತೆಯಾಗಿ ನನ್ನ ಎದುರಲಿ ನಿಂದೆ
ನಕ್ಷತ್ರ ಲೋಕದ ಪಾರಿಜಾತದ ಸುಮವು
ಹುಣ್ಣಿಮೆಯ ಬೆಳಕಿನಲಿ ಬಾನಿಗೆ ಜಾರಿರುವೆ
ಅಮೃತ ಸುಧೆಯ ಜರಿಯಾರೆಯ ನಾರಿ
ಎಂದಿಗೂ ನೀ ಸರಿಯದಿರು ನನ್ನ ಕೈ ಜಾರಿ
ತೂಗುಯ್ಯಾಲೆಯಲಿ ಜೋಕಾಲಿಯಾಡುತಾ
ನಿನ್ನಲ್ಲಿ ಪವಡಿಸುವೆ ತಾರೆಗಳ ಜೊತೆಯಾಡುತಾ
ಸೌಭಾಗ್ಯ ಲಕ್ಷ್ಮಿಯ ಅವತಾರದ ಪ್ರತೀಕ ಹೆಣ್ಣು
ಹೃದಯಂಗಳಕೆ ಜಾರಿರುವೆ ಹೊತ್ತು ನೀ ಹೊನ್ನು
ಪ್ರೀತಿಯ ಮಹಲಿನಲಿ ನಿನಗಾಗಿ ಮೀಸಲಾಗಿದೆ
ನನ್ನ ಮನದಲಿ ನಿನ್ನ ಹೆಸರು ರಾರಾಜಿಸುತಿದೆ
ಜೊತೆಯಾಗುವೆ ಜೀವದ ಕೊನೆ ಉಸಿರವರೆಗೂ
ಜೊತೆನೀಡುವೆ ನಿನ್ನೆಲ್ಲ ನೋವು ನಲಿವಿನಲ್ಲೂ
ದೂರಮಾಡುವೆನೆಂಬ ಕೊರಗನೆಂದು ಪಡದಿರು
ಎಂದಿಗೂ ಕಾಯುವೆ ಮನದಂಗಳದ ಕಣ್ಣಾಗಿ.


✍️ ಅಮಿತಾ ಅಶೋಕ್ ಪ್ರಸಾದ್










