ಕುಂದಾಪುರ (ಏ, 6): ರಾಜ್ಯದ ಪ್ರತಿಷ್ಠಿತ ಸ್ಪೋರ್ಟ್ ಕ್ಲಬ್ ಗಳಲ್ಲಿ ಒಂದಾದ ಟಾರ್ಪಡೋಸ್ ಸ್ಪೋರ್ಟ್ಸ್ ಕ್ಲಬ್ ಆಯೋಜನೆಯಲ್ಲಿ ಮೇ 01 ರಿಂದ 10ರ ವರೆಗೆ ಕುಂದಾಪುರ ಹಾಗೂ ಮಂಗಳೂರಿನ ವಿವಿಧೆಡೆಗಳಲ್ಲಿ ಟಾರ್ಪಡೋಸ್ ಕ್ರೀಡಾ (ಸ್ಪೋರ್ಟ್ಸ್ ಕಾರ್ನಿವಲ್) ಹಬ್ಬ ನಡೆಯಲಿದೆ ಎಂದು ಪ್ರತಿಷ್ಠಿತ ಟಾರ್ಪಡೋಸ್ ಕ್ಲಬ್ನ ಗೌತಮ್ ಶೆಟ್ಟಿ ತಿಳಿಸಿದ್ದಾರೆ.
ಸರಿ ಸುಮಾರು 1 ಕೋ. ರೂ. ವೆಚ್ಚದಲ್ಲಿ ಈ ಕ್ರೀಡಾ ಹಬ್ಬವನ್ನು ಆಯೋಜಿಸಲಾಗಿತ್ತಿದ್ದು, ಟೆನಿಸ್ ಹಾಗೂ ಲೆದರ್ ಬಾಲ್ ಕ್ರಿಕೆಟ್ ಪಂದ್ಯಕೂಟ, 40 ವರ್ಷ ಮೇಲ್ಪಟ್ಟವರಿಗೆ ಪ್ರತ್ಯೇಕ ಟೆನ್ನಿಸ್ ಬಾಲ್ ಕ್ರಿಕೆಟ್ ಲೆಜೆಂಡ್ಸ್ ಟ್ರೋಫಿ, ಬಾಕ್ಸ್ ಕ್ರಿಕೆಟ್, ಫಿಡೆ ರೇಟಿಂಗ್ ಚೆಸ್, ಬ್ಯಾಡ್ಮಿಂಟನ್, ಟೆಬಲ್ ಟೆನ್ನಿಸ್ ಮಿನಿಫುಟ್ಬಾಲ್ ಕ್ರೀಡೆಗಳು ಕುಂದಾಪುರ ಮಂಗಳೂರು ಸುರತ್ಕಲ್ ಹಾಗೂ ಹಳೆಯಂಗಡಿಯಲ್ಲಿ ನಡೆಯಲಿದೆ .
ಕ್ರಿಕೆಟ್ ಪಂದ್ಯಗಳು ಕುಂದಾಪುರದ ಗಾಂಧಿ ಮೈದಾನ ಮತ್ತು ಮಂಗಳೂರಿನಲ್ಲಿ ನಡೆಯಲಿವೆ. ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಹಾಗೂ ಟೇಬಲ್ ಟೆನ್ನಿಸ್ ಚಾಂಪಿಯನ್ ಶಿಪ್ ಹಳೆಯಂಗಡಿಯ ಟಾರ್ಪಡೋಸ್ ಕ್ಲಬ್ ನಲ್ಲಿ ನಡೆಯಲಿದ್ದು, ಫುಟ್ಬಾಲ್ ಚಾಂಪಿಯನ್ ಶಿಪ್ ಹಾಗೂ ಬಾಕ್ಸ್ ಕ್ರಿಕೆಟ್ ಕೋಟೇಶ್ವರದ ಯುವ ಮೆರಿಡಿಯನ್ನಲ್ಲಿ, ಚೆಸ್ ಕುಂಭಾಶಿ ಸಮೀಪದ ಕೊರವಡಿಯ ಕಡಲ ಕಿನಾರೆಯಲ್ಲಿ ನಡೆಯಲಿದೆ.
ಕರಾವಳಿ ಸೇರಿದಂತೆ ರಾಜ್ಯ ಹಾಗೂ ದೇಶಗಳಿಂದಲೂ ಸ್ಪರ್ಧಿಗಳು ಆಗಮಿಸುವ ನಿರೀಕ್ಷೆಯಿದೆ. ಈ ಕ್ರೀಡಾ ಕೂಟದಲ್ಲಿ ಪಾಲ್ಗೊಳ್ಳುವವರಿಗೆ ವಸತಿ ಹಾಗೂ ಆಹಾರ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಪ್ರತಿ ಕ್ರೀಡಾಪಟುವಿಗೆ ಪ್ರವೇಶ ಶುಲ್ಕ 1ಸಾವಿರ ರೂ. ನಿಗದಿಪಡಿಸಲಾಗಿದೆ. ನೋಂದಾಯಿಸಲ್ಪಟ್ಟ ಆಟಗಾರರ ದಾಖಲೆಗಳನ್ನು ಗಮನಿಸಿ ತಂಡಗಳಿಗೆ ಆಯ್ಕೆ ಮಾಡಲಾಗುತ್ತಿದೆ. ಇದೊಂದು ವಿಶಿಷ್ಟ ಹಾಗೂ ವಿಶೇಷ ನಿಯಮಗಳನ್ನು ಒಳಗೊಂಡಿರುವ ಟೂರ್ನಿಯಾಗಿದ್ದು, ಪ್ರತಿಯೊಬ್ಬ ಆಟಗಾರರಿಗೂ ಪ್ರಾಮುಖ್ಯತೆ ನೀಡಲಾಗುತ್ತದೆ. ಹಾಗೆಯೇ ಈ ಐತಿಹಾಸಿಕ ಕ್ರೀಡಾ ಹಬ್ಬಕ್ಕೆ ಈಗಾಗಲೇ ಸಿದ್ಧತೆಗಳು ಪ್ರಾರಂಭಗೊಂಡಿದೆ ಎಂದು ಗೌತಮ್ ಶೆಟ್ಟಿ ತಿಳಿಸಿದ್ದಾರೆ.