ಪ್ರತಿಯೊಬ್ಬ ವ್ಯಕ್ತಿಗೂ ದೇವರು ಒಂದಲ್ಲಾ ಒಂದು ಸೂಪ್ತ ಪ್ರತಿಭೆಯನ್ನು ಹುಟ್ಟುವಾಗಲೇ ನೀಡಿರುತ್ತಾನೆ. ಅವರವರ ಆಸಕ್ತಿ ಮನೋಭಿಲಾಷೆಗೆ ಅನುಗುಣವಾಗಿ ಆ ಪ್ರತಿಭೆಗಳು ಸುಂದರ ಆಕ್ರತಿಯನ್ನು ಪಡೆದುಕೊಳ್ಳುತ್ತಾ ಹೋಗುತ್ತದೆ. ತನ್ನ ಪ್ರತಿಭೆ ಅನಾವರಣಗೊಳ್ಳಬೇಕಾದರೆ ಆ ವ್ಯಕ್ತಿ ಪ್ರತಿಭೆಗೆ ತಕ್ಕುದಾದ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳ ಬೇಕು ಮತ್ತು ನಿರಂತರ ಪ್ರಯತ್ನದಲ್ಲಿ ತೊಡಗಿಸಿಕೊಳ್ಳ ಬೇಕು. ಹಾಗಿದ್ದಾಗ ಮಾತ್ರ ಗುರಿ ಸಾಧಿಸಲು ಸಾಧ್ಯ. ಶಿಕ್ಷಣ, ಸಂಗೀತ, ಸಾಹಿತ್ಯ, ವಿಜ್ಞಾನ, ಕ್ರೀಡೆ, ವೈದ್ಯಕೀಯ, ತಂತ್ರಜ್ಞಾನ ಹೀಗೆ ಹೆಸರಿಸುತ್ತಾ ಹೋದರೆ ಹತ್ತು ಹಲವು ಕ್ಷೇತ್ರಗಳು ನಮ್ಮ ಪ್ರತಿಭೆಗೆ ವೇದಿಕೆಗಳನ್ನು ರೂಪಿಸಿ ಕೊಡುತ್ತದೆ. ಇವುಗಳಲ್ಲಿ ನಮ್ಮ ಪ್ರತಿಭೆಗೆ ಸೂಕ್ತವಾದ ವೇದಿಕೆ ಯಾವುದೆಂದು ನಾವೇ ಆಯ್ಕೆ ಮಾಡಿಕೊಳ್ಳಬೇಕಷ್ಟೆ? ಇತ್ತೀಚಿನ ದಿನಗಳಲ್ಲಿ ಇತರೆ ಕ್ಷೇತ್ರಗಳಂತೆ ಸಂಗೀತ ಕ್ಷೇತ್ರದಲ್ಲೂ ಯುವ ಪ್ರತಿಭೆಗಳು ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ. ಹಲವು ಸಂಗೀತ ದಿಗ್ಗಜರ ನಡುವೆಯೂ ತಮ್ಮ ಪ್ರತಿಭೆಯನ್ನು ತೊರ್ಪಡಿಸಿ ತಮ್ಮ ಅಸ್ಮೀತೆಯನ್ನು ಕಾಪಾಡಿಕೊಂಡು ಜನಮನ್ನಣೆಗೆ ಪಾತ್ರರಾಗ ಬೇಕೆನ್ನುವ ಬಯಕೆ ಪ್ರತಿಯೊಬ್ಬ ಸಂಗೀತ ಲೋಕದ ಪ್ರತಿಭೆಯದ್ದಾಗಿರುತ್ತದೆ. ಅ ಸಾಲಿನಲ್ಲಿ ನಮ್ಮೂರಿನ ಉದಯೋನ್ಮುಖ ಸಂಗೀತ ಪ್ರತಿಭೆ ಅಕ್ಷಯ್ ಬಡಾಮನೆ ಕೂಡ ಓರ್ವರು.ಇತ್ತೀಚಿನ ದಿನಗಳಲ್ಲಿ ನಮ್ಮ ಕನ್ನಡ ಕರಾವಳಿ ಭಾಗದ ಸಂಗೀತ ಕ್ಷೇತ್ರದಲ್ಲಿ ಅಕ್ಷಯ್ ಬಡಾಮನೆ ಎನ್ನುವ ಗ್ರಾಮೀಣ ಪ್ರತಿಭೆ ಹೆಸರು ಚಿರಪರಿಚಿತಗೊಳ್ಳುತ್ತಿದೆ.
ನಂದನವನ ಗ್ರಾಮದ ಮಂಜುನಾಥ ಪೂಜಾರಿ ಹಾಗೂ ಅಕ್ಕಯ್ಯ ದಂಪತಿಗಳ ಪುತ್ರ ಅಕ್ಷಯ್ ಬಡಾಮನೆ. ಇವರಿಗೆ ಬಾಲ್ಯದಿಂದಲೂ ಸಂಗೀತದ ಬಗ್ಗೆ ಆಸಕ್ತಿ ಜೊತೆಗೆ ಭಜನೆಗಳನ್ನು ಹೇಳುವುದರ ಮುಖೇನ ಎಲ್ಲರ ಪ್ರೀತಿ ಪಾತ್ರರಾಗಿದ್ದಾರೆ. ವೃತ್ತಿಯಲ್ಲಿ ಕೆಮಿಕಲ್ ಇಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ತಮ್ಮ ಸಂಗೀತ ಪ್ರವೃತ್ತಿಯನ್ನು ಮುಂದುವರೆಸಿಕೊಂಡು ಬಂದಿರುವುದು ಇವರಿಗೆ ಸಂಗೀತದ ಮೇಲಿರುವ ಒಲವನ್ನು ತೋರಿಸುತ್ತದೆ.
ಗೋಪಿನಾಥ ನಾಕೋಡು ಅವರಲ್ಲಿ 2014 ರಲ್ಲಿ ತಮ್ಮ ಸಂಗೀತದ ಅಭ್ಯಾಸವನ್ನು ಪ್ರಾರಂಭಿಸಿ, ಅದರೊಂದಿಗೆ ಕೊಳಲು ಹಾಗೂ ಗಿಟಾರ್ ರನ್ನು ಅಭ್ಯಾಸಿಸಿದರು. 2015 ರಲ್ಲಿ ದೇಶದ ಪ್ರಧಾನಿಯವರಾದ ಮೋದಿಯವರ ಬಗ್ಗೆ ಹಾಡು ಬರೆದು ಅವರೆ ಹಾಡಿದ Modi the Changer ಎಂಬ ಪ್ರಥಮ ಆಲ್ಬಮ್ ಹಾಡಿಗೆ ಜನಮೆಚ್ಚುಗೆಯ ಜೊತೆಗೆ ಅನೇಕ ರಾಜಕಾರಣಿಗಳ ಮೆಚ್ಚುಗೆ ಸಹ ದೊರೆಯಿತು. 2016 ರಲ್ಲಿ ಇವರು ರಚಿಸಿದ ಸಾಹಿತ್ಯ ‘ಕಣ್ಣೀರಿನ ಕೊನೆಹನಿ’ ಮರಳಿನ ದೋಣಿ ಎಂಬ ಚಿತ್ರಕ್ಕೆ ಆಯ್ಕೆಯಾಯಿತು. ಇದರ ಜೊತೆಗೆ Bangalore Got Talent ನಲ್ಲೂ ಭಾಗವಹಿಸಿದರು. 2018 ರಲ್ಲಿ ಸುಹಾಸ್ ಸೋನು ಮೊಯ್ಲಿರವರು ನಿರ್ದೇಶಿಸಿದ ಪ್ರೀತಿಸುವ ಮುನ್ನ ಕಿರುಚಿತ್ರದ “ಕಾದು ಸೋತಿಹೆನು” ಎಂಬ ಹಾಡಿಗೆ ಧ್ವನಿಕೊಟ್ಟು ಅನೇಕ ಅಭಿಮಾನಿಗಳನ್ನು ಸಂಪಾದಿಸಿದರು. ಕಲರ್ ಸೂಪರ್ ನಲ್ಲಿ ಪ್ರಸಾರವಾಗುವ ಕನ್ನಡ ಕೋಗಿಲೆ ಮೆಗಾ ಆಡಿಷನ್ ವರೆಗೂ ಹೋಗಿದ್ದು, ಚಂದನ್ ಶೆಟ್ಟಿಯವರೇ ಇವರ ಹಾಡಿಗೆ ಮೈಮರೆತು ಹೋಗಿದ್ದರು. ಅದೇ ಸಮಯಕ್ಕೆ ಇವರ ಕಂಠದಿಂದ ಹೊರಬಂದ ಕುಂದಾಪ್ರ ಕನ್ನಡ ಹಾಡು ಶ್ವೇತಾ ಹೆಣೆ ಶ್ವೇತಾ ಹಾಗೂ ನಾಳಿಂದ ನಾ ಕುಡುವುದಿಲ್ಲ ಹಾಡು ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರ್ ರವರ ಮೆಚ್ಚುಗೆಗೂ ಪಾತ್ರವಾಯಿತು. ಮದುವೆ, ಮೆಹಂದಿ ಕಾರ್ಯಕ್ರಮದಲ್ಲೂ ಅಲ್ಲದೆ ಎಲ್ಲಾ ಯುವ ಹೃದಯಗಳ ಗುಣುಗುವ ಹಾಡಾಯಿತು.
ಸುಮಾರು 20 ಕಿರುಚಿತ್ರ ಹಾಗೂ ಆಲ್ಬಮ್ ಹಾಡುಗಳಿಗೆ ಧ್ವನಿಯಾಗಿರುವ ಇವರಿಗೆ ಸ್ಯಾಂಡಲ್ ವುಡ್ ನಲ್ಲೂ ಹಾಡಲು ಅವಕಾಶ ದೊರೆಯಿತು. ಕುಂದಾಪುರದ ಪರಿಸರವನ್ನು ವರ್ಣಿಸುವ ಹಾಡುಗಳಾದ ನನ್ನೂರು ಕುಂದಾಪ್ರದ ಅಂದ ಚೆಂದ, ಎಷ್ಟು ಚೆಂದ ನಮ್ಮೂರು ಹಾಗೂ ಜುಲೈ 20 ವಿಶ್ವ ಕುಂದಾಪ್ರ ಕನ್ನಡ ದಿನದಂದು ಬಿಡುಗಡೆಯಾದ ನಮ್ ಭಾಷಿ ಹಾಡು ಸಹ ಅನೇಕರ ಮೆಚ್ಚುಗೆಗೆ ಪಾತ್ರವಾಯಿತು. 2020 ರಲ್ಲಿ ಬಿಡುಗೊಡೆಗೊಂಡ ಆವರಿಸಿದೆ ಹಾಗೂ ಪರಿವರ್ತನೆ ಮ್ಯೂಸಿಕಲ್ ವಿಡಿಯೋ ಇನ್ನಷ್ಟು ಜನಮನ್ನಣೆಗೆ ಪಾತ್ರವಾಯಿತು. ಇವರಿಗೆ ಅಶ್ನಿಗ್ಧ ಕ್ರಿಯೇಷನ್ಸ್ ತಂಡ ಬೆಂಗಾವಲಾಗಿ ನಿಂತಿದ್ದು ಅನೇಕ ಅವಕಾಶವನ್ನು ಮಾಡಿಕೊಟ್ಟಿತು.
ಮುಕ್ತ ಟಿವಿಯ ಪ್ರತಿಭಾನ್ವೇಷಣೆ ಕಾರ್ಯಕ್ರಮ, ಪ್ಲಬಿಕ್ ಮ್ಯೂಸಿಕ್ ಕಾರ್ಯಕ್ರಮ ಹಾಗೂ RJ NAYANA ಅವರ ಜೊತೆ ನಡೆದ ಸಂದರ್ಶನ ಇವರ ಪ್ರತಿಭೆಗೆ ಸಾಕ್ಷಿಯಾಗಿದೆ. ಇವರ ಮುಂದಿನ ಆಲ್ಬಮ್ ಹಾಡುಗಳಾದ ಹೇಳ್ವರಿಲ್ಲ ಕೇಂಬರಿಲ್ಲ, ಅಘೋರ, ಮಳೆ ಮಳೆ, Smile ಮಾಡು, ಅಮ್ಮ, ಚಿಕ್ಕಣ್ಣ ಇನ್ನಿತರ ಹಲವು ಹಾಡಿಗೆ ಧ್ವನಿಯಾಗಲಿದ್ದಾರೆ. ಇದರಲ್ಲಿ ಕೆಲವು ಹಾಡುಗಳು ಪ್ರತಿಷ್ಟಿತ ಆಡಿಯೋ ಸಂಸ್ಥೆ ಆನಂದ್ ಆಡಿಯೋ ದಲ್ಲಿ ಬಿಡುಗಡೆಗೆ ಸಜ್ಜಾಗಿದೆ.
ಇವರಿಗೆ ಕುಟುಂಬ, ಸ್ನೇಹಿತರು ಹಾಗೂ ಅನೇಕ ಅಭಿಮಾನಿಗಳು ಪ್ರೋತ್ಸಾಹ ನೀಡುತ್ತಿದ್ದಾರೆ.
ಇವರಿಗೆ ಅನೇಕ ಅವಕಾಶಗಳು ದೊರೆತು ಮುಂದೆ ಸಂಗೀತ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಲಿ ಎಂದು ಶುಭಕಾಮನೆಯನ್ನು ಹಾರೈಸೋಣ.
ಲೇಖನ : ಅಭಿಷೇಕ ಪೂಜಾರಿ ಬಡಾಮನೆ.