ಕುಂದಾಪುರ (ಮೇ, 30) : ಜೀವನದಲ್ಲಿ ನಾನೊಬ್ಬ ಶ್ರೇಷ್ಠ ವೈದ್ಯ ನಾಗಬೇಕು, ಒಳ್ಳೆಯ ಐಐಟಿ ಕಾಲೇಜಿನಲ್ಲಿ ಇಂಜಿನಿಯರ್ ಆಗಬೇಕು ಇಲ್ಲ ಲೆಕ್ಕಪರಿಶೋಧಕನಾಗಬೇಕು,ಕಂಪನಿ ಸೆಕ್ರೆಟರಿ ಆಗಬೇಕು ಎನ್ನುವ ಕನಸನ್ನು ಕಾಣುತ್ತಿರುವ ಅದೆಷ್ಟು ವಿದ್ಯಾರ್ಥಿಗಳಿಗೆ ಡಾ. ರಮೇಶ್ ಶೆಟ್ಟಿ ನೇತೃತ್ವದ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ತಂಡ ಕುಂದಾಪುರದ ಎಕ್ಸಲೆಂಟ್ ಕಾಲೇಜಿನ ಸಂಪೂರ್ಣ ಆಡಳಿತ ವಹಿಸಿಕೊಂಡಿರುವುದು ಸುವರ್ಣ ಅವಕಾಶವಾಗಲಿದೆ. ಪ್ರತಿಭಾನ್ವಿತ ವಿದ್ಯಾರ್ಥಿಗಳ ಉಜ್ವಲ ಭವಿಷ್ಯದ ಕನಸು ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ಮೂಡುಬಿದಿರೆಯ ಮೂಲಕ ನನಸಾಗುವುದರಲ್ಲಿ ಎರಡು ಮಾತಿಲ್ಲ ಎಂದು ಕಟೀಲು ದುರ್ಗಾಪರಮೇಶ್ವರಿ ಪದವಿ ಕಾಲೇಜಿನ ಮಾಜಿ ಪ್ರಾಂಶುಪಾಲರು ಪ್ರಸ್ತುತ ರಾಮಕೃಷ್ಣ ಪದವಿ ಕಾಲೇಜಿನ ನಿರ್ದೇಶಕರಾಗಿರುವ ಪ್ರೊ. ಬಾಲಕೃಷ್ಣ ಶೆಟ್ಟಿ ಅವರು ಮೇ 24ರಂದು ಪಿಯುಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಆನ್ ಲೈನ್ ಮಾಹಿತಿ ಕಾರ್ಯಗಾರವನ್ನು ಉದ್ಘಾಟಿಸಿ ಹೇಳಿದರು.
ಶೈಕ್ಷಣಿಕವಾಗಿ ಅಪಾರ ಅನುಭವವನ್ನು ಹೊಂದಿರುವ ಡಾ. ರಮೇಶ್ ಶೆಟ್ಟಿ ಅವರು ಸಾವಿರಾರು ವಿದ್ಯಾರ್ಥಿಗಳ ಜೀವನವನ್ನು ರೂಪಿಸಿರುತ್ತಾರೆ. ಅವರೊಂದಿಗೆ ಶಿಕ್ಷ ಪ್ರಭ ಶಿಕ್ಷಣ ಸಂಸ್ಥೆಯ ಮೂಲಕ ಸಿಎ ಸಿಎಸ್ ತರಬೇತಿಯಲ್ಲಿ ವಿಶಿಷ್ಟ ಸಾಧನೆಗೈದಿರುವ ಪ್ರತಾಪ್ ಚಂದ್ರ ಶೆಟ್ಟಿ ಮತ್ತು ಭರತ್ ಶೆಟ್ಟಿಯವರು ಜೊತೆಗೂಡಿ ವಿಜ್ಞಾನ ವಿದ್ಯಾರ್ಥಿಗಳು ಮತ್ತು ವಾಣಿಜ್ಯ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಪ್ರಾಮುಖ್ಯತೆ ನೀಡಿ ವಿದ್ಯಾರ್ಜನೆ ನೀಡಲು ಹೊರಟಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷರು, ಎಕ್ಸಲೆಂಟ್ ಕಾಲೇಜಿನ ಪ್ರಾಂಶುಪಾಲರು ಆಗಿರುವ ಡಾ. ರಮೇಶ್ ಶೆಟ್ಟಿಯವರು ಇಂದಿನ ಕರೋನಾ ಕಾಲಘಟ್ಟದಲ್ಲಿ ಜೀವ ಜೀವನ ಜೀವನಾಂಶ ಬಹುಮುಖ್ಯವಾದದ್ದು. ನಮ್ಮ ಶೈಕ್ಷಣಿಕ ಚಟುವಟಿಕೆಗೆ ಬಲವಾದ ಪೆಟ್ಟು ಬಿದ್ದಿರುವ ಇಂತಹ ಸಂದರ್ಭದಲ್ಲಿ ನಾವು ಒಂದು ಮಾದರಿ ಶಿಕ್ಷಣ ಸಂಸ್ಥೆಯನ್ನು ರೂಪಿಸಲು ಹೊರಟಿದ್ದೇವೆ. ಈಗಾಗಲೇ ದೇಶದ ನಾನಾ ಭಾಗಗಳಿಂದ ಅನುಭವಿ ಶಿಕ್ಷಕರ ತಂಡ ನಮ್ಮೊಂದಿಗೆ ಸಿದ್ಧವಾಗಿ ನಿಂತಿದೆ. ಕುಂದಾಪುರದಲ್ಲಿ ಒಂದು ಗುಣಮಟ್ಟದ ನೀಟ್/ಜೆಇಇ/ಐಐಟಿ/ಸಿಇಟಿ/ ಸಿಎ/ ಸಿಎಸ್ ಫೌಂಡೇಶನ್ ಇನ್ನಿತರ ಸ್ಪರ್ಧಾತ್ಮಕ ತರಬೇತಿಯನ್ನು ಪಿಯುಸಿ ವಿದ್ಯಾರ್ಥಿಗಳಿಗೆ ನೀಡಿ ಅತ್ಯುತ್ತಮ ಫಲಿತಾಂಶ ಪಡೆಯಬೇಕು ಎನ್ನುವುದು ನಮ್ಮ ಕನಸಾಗಿದೆ. ಕರೋನ ಸಮಯದಲ್ಲಿ ಎಲ್ಲರೂ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಎಲ್ಲಾ ವರ್ಗದವರಿಗೂ ಕೈಗೆಟುಕುವ ಶುಲ್ಕದಲ್ಲಿ ಶಿಕ್ಷಣವನ್ನು ನೀಡಲು ಬಯಸಿದ್ದೇವೆ. ಇದಕ್ಕೆ ನಿಮ್ಮೆಲ್ಲರ ಸಹಕಾರವನ್ನು ಬಯಸುತ್ತೇವೆ ಎಂದರು.
ಎಂ. ಎಂ. ಹೆಗಡೆ ಚಾರಿಟೇಬಲ್ ಅಂಡ್ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷರಾಗಿರುವ ಎಂ. ಮಹೇಶ್ ಹೆಗಡೆ ಅವರು ಮಾತನಾಡಿ ಶುಭ ಹಾರೈಸಿದರು.ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ಸೆಕ್ರೆಟರಿ ಪ್ರತಾಪ್ ಚಂದ್ರಶೆಟ್ಟಿ , ಟ್ರಜರರ್ ಭರತ್ ಶೆಟ್ಟಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಆನ್ ಲೈನ್ ಕಾರ್ಯಕ್ರಮದಲ್ಲಿ ದೂರದ ಗುಜರಾತ್ ಮುಂಬೈ ಸೇರಿದಂತೆ ಹುಬ್ಬಳ್ಳಿ-ಧಾರವಾಡ ಬಾಗಲಕೋಟೆ ಮೈಸೂರು ಶಿವಮೊಗ್ಗ ಶಿರಸಿ ಸಿದ್ದಾಪುರ ಹೊನ್ನಾವರ ಭಟ್ಕಳ ಮತ್ತು ಉಡುಪಿ ಜಿಲ್ಲೆಯ ಮುನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದರು. ಅಂಕಿತ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿದರು. ಶ್ರೀಮಾ ಎನ್ ಶೆಟ್ಟಿ ವಂದಿಸಿದರು.
ಆನ್ ಲೈನ್ ಮಾಹಿತಿ ಕಾರ್ಯಾಗಾರವನ್ನು https://youtu.be/._PQIYPa4iM0 ಲಿಂಕ್ ನ ಮೂಲಕ ಸಂಸ್ಥೆಯ ಯುಟ್ಯೂಬ್ ಚಾನೆಲ್ ನಲ್ಲಿ ವಿದ್ಯಾರ್ಥಿಗಳು ವೀಕ್ಷಿಸಬಹುದು. ಯಾವುದೇ ತರಗತಿಯ ಶೈಕ್ಷಣಿಕ ಮಾಹಿತಿಗಾಗಿ ವಿದ್ಯಾರ್ಥಿಗಳು ಮತ್ತು ಪೋಷಕರು ಕುಂದಾಪುರದ ಎಕ್ಸಲೆಂಟ್ ಕಾಲೇಜಿನ ಕಚೇರಿ ಅಥವಾ ಶಿಕ್ಷ ಪ್ರಭ ಅಕಾಡೆಮಿಯ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.