ಮಾನವ ಸಂಬಂಧಗಳ ನಿರ್ವಹಣೆ ಇದು ಅತ್ಯಂತ ಕಷ್ಟಕರ ಹಾಗೂ ನಿರಂತರ ಪ್ರಕ್ರಿಯೆಯಾಗಿದೆ. ಏಕೆಂದರೆ ಆಧುನಿಕತೆಯ ಬದುಕಿನಲ್ಲಿ ಸಂಬಂಧಗಳು ವಿಮುಖ ಗೊಳ್ಳುವ ಕಾಲಘಟ್ಟದಲ್ಲಿ ಇಂದು ನಾವಿದ್ದೇವೆ. ಜಾಗತೀಕರಣದ ನಾಗಾಲೋಟಕ್ಕೆ ಸಿಲುಕಿ ಸಂಬಂಧಗಳು ಮೌಲ್ಯವನ್ನು ಕಳೆದುಕೊಳ್ಳುತ್ತಿದೆ ಎನ್ನುವ ಆತಂಕ ನಮ್ಮೆಲ್ಲರನ್ನು ಕಾಡತೊಡಗಿದೆ. ಭಾರತೀಯ ಸಂಸ್ಕೃತಿಯಲ್ಲಿನ ಮಾನವ ಸಂಬಂಧಗಳ ಮೌಲ್ಯತೆಗೆ ಮತ್ತು ಪಾವಿತ್ರ್ಯತೆಗೆ ಇದ್ದ ಬೆಲೆ ಇವತ್ತು ಪಾಶ್ಚಾತೀಕರಣ ಜೀವನ ಶೈಲಿಯಿಂದಾಗಿ ಪ್ರವಾಹದ ಹರಿದು ಹೋಗುತ್ತಿರುವ ಕೊಳಕು ನೀರಿನಂತಾಗಿದೆ.
ವಾಸ್ತವವಾಗಿ ಇಂದಿನ ದಿನಗಳಲ್ಲಿ ನೆನಪಿಗೆ ಮಾತ್ರ ನಾವು- ನಮ್ಮ ಸಂಬಂಧ, ಸಂಬಂಧಿಕರು ಎಂದು ಬೇರೆಯವರ ಮುಂದೆ ಹೆಮ್ಮೆಯಿಂದ ಹೇಳುತ್ತಾ ಕುಳಿತಿದ್ದೇವೆ. ನಿಜವಾಗಿಯೂ ಅವರ ಮನದೊಳಗಿರುವ ಆಲೋಚನೆ ಮಾತ್ರ ಬೇರೆಯದ್ದೆ! ಸಂಬಂಧಗಳು ಇಂದಿನ ಬದುಕಿನಲ್ಲಿ ಕೇವಲ ಕಾಲ್ಪನಿಕವಷ್ಟೇ ಎಂದು ಅನ್ನಿಸುತ್ತಿದೆ.
ಸಂಬಂಧದ ನಿಜವಾದ ಮೌಲ್ಯ ತಿಳಿಯಲು ಒಂದೇ ಕಷ್ಟದ ಅನುಭವಿರಬೇಕು ಅಥವಾ ಕಷ್ಟದ ಕಾಲದಲ್ಲಿ ಇನ್ನೊಬ್ಬ ಸಂಬಂಧಿಕರಿಗೆ ಸಹಾಯ ಮಾಡಿದವರಾಗಿರಬೇಕು. ಮೂರು ದಿನದ ಬಾಳಿನಲ್ಲಿ ಇಲ್ಲಿ ಯಾರೂ ಕೂಡಾ ಶಾಶ್ವತರಲ್ಲ, ಆದರೂ ಅವರ ಪ್ರೀತಿ, ವಿಶ್ವಾಸದ ಭಾವನೆ ಮಾತ್ರ ನೆನಪಿನಲ್ಲಿ ಅಮರವಾಗಿ ಉಳಿಯುವುದು. ಈ ದಿನ, ಈ ಕ್ಷಣ ನಾವು ಯಾರೊಂದಿಗೆ ನಗುನಗುತ್ತ ಮಾತನಾಡುತ್ತಿದ್ದೆವೆ,ಹೇಗೆ ಮಾತನಾಡುತ್ತೇವೆ, ನಾವಾಡುವ ಮಾತುಗಳು ಮತ್ತು ನಮ್ಮ ವರ್ತನೆ ಬೇರೆಯವರೊಂದಿಗಿನ ಮಾನವೀಯ ಸಂಬಂಧಗಳ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎನ್ನುವ ಅರಿವು ನಮಗಿರಬೇಕು.
ಎಂತಹ ವಿಪರ್ಯಾಸವೆಂದರೆ ಅದೆಷ್ಟೋ ಮಂದಿ ಹಣಕ್ಕಾಗಿ, ಆಸ್ತಿಗಾಗಿ ಸಂಬಂಧದ ಕೊಂಡಿಯನ್ನು ಕಳಚಿಕೊಂಡು ಜೀವನ ನಡೆಸುತ್ತಿರುವುದನ್ನು ನಾವು ಇಂದು ಕಣ್ಣೆದುರು ನೋಡುತ್ತಿರುವುದು.ಇಂದಿನ ಹುಡುಗ ಹುಡುಗಿಯರ ಪ್ರೀತಿ, ಪ್ರೇಮದ ಭಾವನೆಗಳು ಮನೋ ಕಾಮನೆಯ ಬಲೆಯೊಳಗೆ ಸಿಲುಕಿಕೊಂಡಂತಿದೆ.
ಕಪಟ ಪ್ರೀತಿಯೆಂಬ ಸಂಬಂಧಕ್ಕೆ ಮರುಳಾಗಿ ತನ್ನ ಜೀವನವನ್ನೇ ಹಾಳುಮಾಡಿಕೊಂಡು ತಂದೆ ತಾಯಿಯಿಂದ ದೂರ ಸರಿದವರಿದ್ದಾರೆ. ತಾಯಿಯ ಪ್ರೀತಿಯ ಕಡೆಗಣಿಸಿ ತಂದೆಯ ಮನಸ್ಸಿಗೆ ಅಗಾಧವಾದ ನೋವು ಕೊಡುತ್ತಿದ್ದಾರೆ.ತನ್ನ ಮಕ್ಕಳನ್ನು ಸಾಕಿ ಸಲಹಿ ಬೆಳೆಸುವಲ್ಲಿ ತಂದೆ ತಾಯಿಯ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಇಂತಹ ಅಮೂಲ್ಯವಾದ ಸಂಬಂಧವನ್ನು ಕೇವಲ ಒಂದೇ ಕ್ಷಣದಲ್ಲಿ ತೆಗೆದುಕೊಂಡ ದೃಢ ನಿರ್ಧಾರವು ಬದುಕಿನುದ್ದಕ್ಕೂ ಸಂಬಂಧಿಕರನ್ನು ಕಡೆಗಣಿಸಿ ಬಿಡುತ್ತದೆ. ಮನುಷ್ಯನ ಉಸಿರು ನಿಂತ ಮೇಲೆ ಆ ಜೀವಕ್ಕೆ ಬೆಲೆ ಇಲ್ಲ. ಜೀವಿತಾವಧಿಯಲ್ಲಿಯಾದರು ಉತ್ತಮ ಸಂಬಂಧ ಹೊಂದಿ ಒಳ್ಳೆಯ ವ್ಯಕ್ತಿಯಾಗಿ ಸಮಾಜದಲ್ಲಿ ಮೂರು ದಿನ ಬದುಕಿದರು ನೂರಾರು ದಿನ ನಿಮ್ಮ ಸಂಬಂಧ ಹಾಗೆ ಅವರ ನೆನಪಿನಲ್ಲಿರಲಿ.
ಮಾನವ ಸಂಬಂಧಗಳು ಯಾವಾಗಲೂ ಪ್ರೀತಿ, ವಿಶ್ವಾಸ, ಸಹಕಾರ ಹಾಗೂ ಸಹಬಾಳ್ವೆಗೆ ಪೂರಕವಾಗಿರಬೇಕು ಹೊರತು ಸಾಂಸ್ಕೃತಿಕ ಪಲ್ಲಟಕ್ಕೆ ಸಿಲುಕಿ ವಿಮುಖರಾಗುವಂತದಲ್ಲ…
ಲೇಖನ: ಜಗ್ಗು ದೇವಾಡಿಗ
ಮೇಲ್ಮನೆ ಉಪ್ಪುಂದ
Jaggudj73@gmail.com.