ಉಡುಪಿ (ಜು, 6): ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಗಣಕ ಯಂತ್ರವಿಭಾಗದ ಕೋಡ್ ಟ್ರೂಪರ್ಸ್ ಸಂಘ ಮತ್ತು ಐಇಇಇ ವಿದ್ಯಾರ್ಥಿ ಘಟಕಗಳ ಸಂಯುಕ್ತ ಆಶ್ರಯದಲ್ಲಿ 48ಘಂಟೆಗಳ ರಾಷ್ಟ್ರಮಟ್ಟದ ಹ್ಯಾಕಥಾನ್ “ಹ್ಯಾಕೋತ್ಸವ”ವನ್ನು ಜುಲೈ 9ರಿಂದ 11ರವರೆಗೆ ಆಯೋಜಿಸಲಾಗಿದೆ. ಇದರ ಉದ್ಘಾಟನೆಯನ್ನು ಬೆಂಗಳೂರಿನ ವೋಲ್ವೋ ಸಮೂಹದ ಸುಧೀಂದ್ರ ಕೌಶಿಕ್ ನೆರವೇರಿಸಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ರತ್ನಕುಮಾರ್ ವಹಿಸಲಿದ್ದಾರೆ.
ದೇಶದ ವಿವಿಧ ಭಾಗಗಳಿಂದ ಸುಮಾರು 280ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದು “ಸಾಮಾಜಿಕ ಬದ್ಧತೆ ಮತ್ತು ವ್ಯವಹಾರ ಆಧಾರಿತ” ಈ ವಿಷಯಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಲಿದ್ದಾರೆ. ದೇಶದ ಖ್ಯಾತ ಮಾಹಿತಿ ತಂತ್ರಜ್ಞಾನ ಕಂಪೆನಿಗಳ 25ಕ್ಕೂ ಹೆಚ್ಚಿನ ಪರಿಣತರು ಮೌಲ್ಯಮಾಪನವನ್ನು ನಡೆಸಲಿದ್ದಾರೆ. ಸುಮಾರು 70,000 ರೂ. ಮೌಲ್ಯದ ನಗದು ಬಹುಮಾನಗಳನ್ನು ವಿಜೇತರು ಪಡೆಯಲಿದ್ದು, ಬಹುಮಾನಗಳನ್ನು ಟೆಥರ್ಫಿ, ರೋಬೋಸಾಫ್ಟ್, ಪೂಬಾ ಕಂಪನಿಗಳು ಮತ್ತು ಐಇಇಇ ಮಂಗಳೂರು ಘಟಕಗಳು ಪ್ರಾಯೋಜಿಸಿವೆ.
ಹ್ಯಾಕೋತ್ಸವದ ಸಮಾರೋಪ ಸಮಾರಂಭವು ಜುಲೈ 11ರಂದು ಅಪರಾಹ್ನ 3ಘಂಟೆಗೆ ನಡೆಯಲಿದ್ದು, ಉಡುಪಿ ಸೋದೆ ಶ್ರೀ ವಾದಿರಾಜ ಮಠದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ಞಾನಿಗಳಾದ ಶ್ರೀ ಪುನೀತ್ ಕುಮಾರ್ ಮಿಶ್ರಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.