ನದಿಯ ಮೇಲೆ ತೇಲುವ ನಾವೆಯ ಗಾನಕೆ
ಹರಿವ ನೀರಿನ ನಾದವಿಲ್ಲಿ ಹಿನ್ನಲೆ ಸಂಗೀತ
ಅಂಬಿಗನೀಗ ಮೈಮರೆತಿದ್ದಾನೆ
ಆ ಶಿಖರದ ಮೈಸವರಿ ಸಾಗುತ್ತಿದೆ ತಂಗಾಳಿ
ಕುಣಿವ ಸಸ್ಯಶ್ಯಾಮಲೆಯ ನೋಡುತ್ತಲೀಗ
ನನ್ನೂರು ಹಾಗೇ ಮೈಮರೆತಿದೆ
ಗದ್ದೆಯೊಳಗಿನ ರೈತನ ಹಾಡನ್ನು ಪೈರುಗಳು ಆಲಿಸಿವೆ
ಅವನ ಪ್ರತಿಹೆಜ್ಜೆಗಳೂ ನಾಟ್ಯದಂತೆಯೇ
ಧರಿತ್ರಿಗೂ ಏನೋ ರೋಮಾಂಚನವಾಗುತ್ತಿದೆ
ಪತಂಗಗಳೂ ಜೇನ್ನೊಳಗಳೂ ಹುಡುಕಾಡಿವೆ ಮಧುವಿಗಾಗಿ
ಹೂವೊಂದು ಸುಖಿಸುತ್ತಿರಲೀಗ ಗೋವಿನ ಕೊರಳ ಗಂಟೆಗಳು
ಹಿಮ್ಮೇಳ ನುಡಿಸುತ್ತೀವೆ
ಮೂಡಣದಲ್ಲೀಗ ನೇಸರನಾಗಮನದ ಸಮಯ
ಪಕ್ಷಿಗಳೀಗ ಆಲಾಪನೆ ಶುರುಹಚ್ಚಿಕೊಂಡಿವೆ
ಮರದೆಲೆಗಳಿಂದ ಬೀಳುವ ಮುತ್ತಿನ ಹನಿಗಳೂ ಏನೋ
ವಿಶೇಷ ಪರಿಣಾಮವನ್ನುಂಟುಮಾಡಿವೆ ಸಂಗೀತಕ್ಕೆ
ನಡುವಲ್ಲಿ ಕೊಡವ ಹೊತ್ತು ಸಾಗಿದ ನೀರೆಯದ್ದೊಂದು ಕಾವ್ಯ
ಹಟ್ಟಿಯನ್ನು ಬಿಟ್ಟ ಹೊರಟ ಗೋವುಗಳದ್ದೊಂದು ಕಾವ್ಯ
ಬೆಳಗನ್ನು ಸೂಚಿಸುವ ಕುಕ್ಕುಟಗಳದ್ದೊಂದು ಕಾವ್ಯ
ಓ ರಸಿಕ ತೆರೆದಿಟ್ಟುಬಿಡು ಕಿವಿಗಳನ್ನು ಹೃದಯವನ್ನೂ
ಸುತ್ತಲೂ ಕೇಳಿಸದೇ ನೂರಾರು ಕಾವ್ಯಗಾಯನ….

ಕಿಗ್ಗಾಲು. ಜಿ. ಹರೀಶ್










