ಉಡುಪಿ(ಸೆ.23): ಕರ್ನಾಟಕ ರಾಜ್ಯದ ಉದ್ದಗಲಕ್ಕೂ ನಾಡೋಜ ಡಾ.ಜಿ.ಶಂಕರ್ ರವರ ಹೆಸರು ಚಿರಪರಿಚಿತ. ಬೃಹತ್ ರಕ್ತದಾನ ಶಿಬಿರ, ಶಿಕ್ಷಣ, ಆರೋಗ್ಯ ಸುರಕ್ಷಾ, ಅಶಕ್ತ ಕಲಾವಿದರಿಗೆ ನೆರವು, ಬಡ ಹಾಗೂ ದುರ್ಬಲ ವರ್ಗದವರಿಗೆ ಆರ್ಥಿಕ ನೆರವು ಹೀಗೆ ಬಹುಬಗೆಯ ಸಮಾಜಮುಖಿ ಕಾರ್ಯಗಳಲ್ಲಿ ನಿರಂತರವಾಗಿ ತನ್ನನ್ನು ತೊಡಗಿಸಿಕೊಂಡು ಹಲವು ಜನತೆಯ ಬದುಕಿಗೆ ಬೆಳಕಾದವರು ನಾಡೋಜ ಡಾ.ಜಿ.ಶಂಕರ್.
ನಮ್ಮ ಕರಾವಳಿ ಭಾಗದಲ್ಲಿ ರಕ್ತದಾನ ಶಿಬಿರದ ಕ್ರಾಂತಿಯನ್ನು ಕೈಗೊಂಡು “ಕ್ರಾಂತಿ ಪುರುಷ” ಎಂದು ಗುರುತಿಸಲ್ಪಡುವ ನಾಡೋಜ ಡಾ. ಜಿ. ಶಂಕರ್ ರವರ ಹುಟ್ಟುಹಬ್ಬದ ಪ್ರಯುಕ್ತ ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ ಹಾಗೂ ಅಭಯ ಹಸ್ತ ಚಾರಿಟೇಬಲ್ ಟ್ರಸ್ಟ್ (ರಿ.) ಉಡುಪಿ ಇವರ ಆಯೋಜನೆಯಲ್ಲಿ ರಕ್ತನಿಧಿ ವಿಭಾಗ, ಕೆ.ಎಂ.ಸಿ. ಮಣಿಪಾಲ ಮತ್ತು ರೆಡ್ ಕ್ರಾಸ್ ಸೊಸೈಟಿ, ಕುಂದಾಪುರ ಇವರ ಸಹಭಾಗಿತ್ವದಲ್ಲಿ ಅಕ್ಟೋಬರ್ ,05 ರಂದು ಬ್ರಹ್ಮಾವರದ ಶ್ಯಾಮಿಲಿ ಶನಾಯ ಸಭಾ ಭನನದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ.
“ರಕ್ತದಾನ ಶ್ರೇಷ್ಠ ದಾನ”ವಾಗಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಪ್ರೇರಣೆಯಿಂದ ರಕ್ತದಾನ ಶಿಬಿರದಲ್ಲಿ ಪಾಲ್ಗೊಳ್ಳುವಂತೆ ಸಂಘಟಕರು ತಿಳಿಸಿದ್ದಾರೆ.