ತಾಯಿ ಮಡಿಲಿನಲ್ಲಿ ಹಸುಗೂಸು ಕಣ್ತೆರೆದರೂ, ಒಳಗಣ್ಣು ತೆರೆಯುವುದು ಗುರುವಿನ ಸಮಕ್ಷಮದಲ್ಲಿ. ಶಿಕ್ಷಕ ವೃತ್ತಿ ಶ್ರೇಷ್ಠ ವೃತ್ತಿ, ಉತ್ತಮ ಸಮಾಜದ ನಿರ್ಮಾಣದಲ್ಲಿ ಶಿಕ್ಷಕರ ಮಹತ್ವವನ್ನರಿತು ಶಿಕ್ಷಕಿಯಾಗಬೇಕೆಂಬ ಹಂಬಲದಿಂದ ಶಿಕ್ಷಣವನ್ನು ಮುಗಿಸಿ ಶಿಕ್ಷಕರ ವ್ರತ್ತಿಗೆ ಕಾಲಿಟ್ಟಾಗ ಕಾಲೇಜಿನ ಮೊದಲನೇ ದಿನದ ಅನುಭವ ಒಂಥರಾ ಚೆಂದ. ಮನಸ್ಸಲ್ಲಿ ಒಂಥರಾ ಖುಷಿ, ಒಂದಿಷ್ಟು ಭಯ, ಒಂದಿಷ್ಟು ಗೊಂದಲಗಳ ಗೂಡಾಗಿತ್ತು. ಪ್ರತಿಯೊಬ್ಬ ಶಿಕ್ಷಕರಿಗೂ ತಮ್ಮ ಮೊದಲ ಬ್ಯಾಚ್ ಸ್ಟೂಡೆಂಟ್ ಗಳ ನೆನಪು ಅಮರ. ಏಕೆಂದರೆ ಶಿಕ್ಷಕ ವೃತ್ತಿಯ ಮೇಲೆ ಆಸಕ್ತಿ ಅಥವಾ ನಿರಾಸಕ್ತಿ ಬರಲು ವಿದ್ಯಾರ್ಥಿಗಳ ನಡವಳಿಕೆಯೇ ಕಾರಣವಾಗಿರುತ್ತದೆ. ಶಿಕ್ಷಕಿಯಾಗಿ ಮೊದಲ ದಿನ ವಿದ್ಯಾರ್ಥಿಗಳ ಮುಂದೆ ನಿಂತಾಗ ಖುಷಿ ಮತ್ತು ಭಯ ಎರಡು ಇದ್ದಿತ್ತು.
ಆ ದಿನ ತುಂಬಾ ಗಂಭೀರವಾಗಿ ಪಾಠ ಮಾಡಿದ್ದೆ. ನಾನು ಏಕೆಂದರೆ ವಿದ್ಯಾರ್ಥಿಗಳನ್ನು ನಿಯಂತ್ರಣದಲ್ಲಿಟ್ಟು ಕೊಳ್ಳದಿದ್ದರೆ ತರಗತಿಗಳನ್ನು ನಿಭಾಯಿಸಲು ತುಂಬಾ ಕಷ್ಟ ಎಂಬ ನನ್ನ ಸೀನಿಯರ್ ಗಳ ಮಾತು ನೆನಪಿನಲ್ಲಿ ಇದ್ದಿತ್ತು. ಇದರ ಪ್ರತಿಫಲವಾಗಿ ವಿದ್ಯಾರ್ಥಿಗಳು ಮೇಡಂ ತುಂಬಾ ಜೋರಿದ್ದಾರೆ ಅಂದುಕೊಂಡರು. ದಿನಕಳೆದಂತೆ ವಿದ್ಯಾರ್ಥಿಗಳ ಜೊತೆ ನಾನು ಸ್ನೇಹಿತೆಯಾಗಿ ಬೆರೆತೆ. ಇದಕ್ಕೆ ಕಾರಣ ಅವರು ನನಗೆ ಕೊಡುತ್ತಿದ್ದ ಗೌರವ. ಶಿಕ್ಷಕ ವೃತ್ತಿಯನ್ನು ಹೇಗೆ ನಿಭಾಯಿಸಬಲ್ಲೆ ಎಂಬ ಭಯ, ಇಂದಿನ ವಿದ್ಯಾರ್ಥಿಗಳು ಶಿಕ್ಷಕರಿಗೆ ಗೌರವ ಕೊಡುವುದಿಲ್ಲ ಎಂಬುದು ನನ್ನ ಮನಸ್ಸಲ್ಲಿತ್ತು. ಆದರೆ ಆ ಮಾತನ್ನು ನನ್ನ ವಿದ್ಯಾರ್ಥಿಗಳು ಸುಳ್ಳು ಮಾಡಿದರು. ನಾನು ಏನೇ ಕೆಲಸ ಹೇಳಿದರು ಅದನ್ನು ಅಚ್ಚುಕಟ್ಟಾಗಿ, ಇಷ್ಟಪಟ್ಟು ಮಾಡುತ್ತಿದ್ದರು. ಸ್ಫೋರ್ಟ್ಸ್ ಡೇ, ಕಾಲೇಜ್ ಡೇ, ಮತ್ತು ಟೀಚರ್ಸ್ ಡೇ, ಎಲ್ಲ ಸಂದರ್ಭಗಳಲ್ಲೂ ಅವರೊಡನೆ ಕಳೆದ ಕ್ಷಣಗಳನ್ನು ನೆನಪಿಸಿಕೊಂಡು ಕಣ್ಣೀರು ಜಾರಿದ್ದುಂಟು. ನನ್ನ ಮತ್ತು ಅವರ ನಡುವಿನ ಸಂಬಂಧ ಪದಗಳಲ್ಲಿ ವರ್ಣಿಸಲಾಗದಷ್ಟು ಭಾವನಾತ್ಮಕ. ಶಿಕ್ಷಕಿಯಾಗಿ ಎಷ್ಟೋ ಸಾರಿ ಅವರಿಗೆ ಬೈದಿದ್ದು ಇದೆ, ತರಗತಿಯಿಂದ ಹೊರಗೆ ಹಾಕಿ ನೋಟ್ಸ್ ಬರೆಸಿದ ಸಂದರ್ಭಗಳು ಇವೆ.
ಉತ್ತರ ತಪ್ಪಾಗಿ ಹೇಳಿದ್ದಕ್ಕೆ ಹತ್ತು ಬಾರಿ ಬರೆಯಲು ಹೇಳಿದ್ದೂ ಇದೆ. ಆದರೆ ಮರುದಿನ ತಮ್ಮ ತಪ್ಪನ್ನು ಅರ್ಥೈಸಿಕೊಂಡು ನಗುಮುಖದಿಂದ “ನಮಸ್ತೆ ಮೇಡಂ” ಎನ್ನುವ ಮಾತು ಕೇಳಿ ಮನಸ್ಸು ನಿರಾಳವಾಗುತ್ತಿತ್ತು. ನನ್ನ ಮಾತು ಮೊದಲು ಕಹಿಯಾಗಿ ನಂತರ ಸಿಹಿಯಾದ ಸಂದರ್ಭಗಳೇ ಹೆಚ್ಚು. ನನ್ನ ಅಂತರಂಗವನ್ನು ಬಲಗೊಳಿಸುತ್ತಾ ಬಂದವರು ನನ್ನ ವಿದ್ಯಾರ್ಥಿಗಳು. ನನ್ನನ್ನು ಸರಿಯಾಗಿ ಅರ್ಥೈಸಿಕೊಂಡ ವಿದ್ಯಾರ್ಥಿಗಳು ಎಂದಿಗೂ ನನ್ನನ್ನು ಅಲುಗಲು ಬಿಡಲಿಲ್ಲ. ಇಂದಿಗೂ ಅವರು ಕೊಟ್ಟ ಉಡುಗೊರೆಗಳು, ಭಾವನಾತ್ಮಕ ಫೀಡ್ ಬ್ಯಾಕ್ ಗಳು ಮತ್ತು ಅವರೊಡನೆ ಪಡೆದ ಮರೆಯಲಾಗದ ನೆನಪಿನ ಕ್ಷಣಗಳಿವೆ.
ನನ್ನ ವಿದ್ಯಾರ್ಥಿಗಳ ಪ್ರೀತಿ, ವಿಶ್ವಾಸ, ಮತ್ತು ಗೌರವ ನನ್ನ ಮೊದಲ ವರ್ಷದ ಶಿಕ್ಷಕ ವೃತ್ತಿಯನ್ನು ಖುಷಿಯಿಂದ ಮತ್ತು ತೃಪ್ತಿಯಿಂದ ಅನುಭವಿಸುವಂತೆ ಮಾಡಿದೆ. ಇಂದಿಗೂ ನನ್ನ ಮತ್ತು ಅವರ ನಡುವಿನ ಸಂಬಂಧ ಹಾಗೆಯೇ ಇದೆ. ನನ್ನ ಫಸ್ಟ್ ಬ್ಯಾಚ್ ಸ್ಟೂಡೆಂಟ್ ಗಳು ಯಾವಾಗಲೂ “ನನ್ನ ಸ್ನೇಹಿತರು”. ಅವರೆಲ್ಲರ ಬದುಕು ಸದಾ ಖುಷಿಯಿಂದ, ಸಂತೃಪ್ತಿಯೆಡೆ ಸಾಗಲಿ ಎಂದು ಮನಃಸ್ಪೂರ್ತಿಯಾಗಿ ಹರಸುತ್ತೇನೆ.
ಲೇಖನ : ಸುಮಂಗಲ ದೇವಾಡಿಗ ಉಪ್ಪುಂದ
ಉಪನ್ಯಾಸಕರು