ಒಂದು.. ಎರಡು… ಮೂರು…
ನೂರಾ ಎಪ್ಪತ್ತೈದು…. ಅಲ್ಲಲ್ಲ…. ಎಪ್ಪತ್ತಾರು…
ಛೇ.. ಲೆಕ್ಕ ತಪ್ಪಿತು…
ಇರುಳಲ್ಲಿ ನಕ್ಷತ್ರಗಳನ್ನು ಎಣಿಸುತ್ತಿದ್ದೇನೆ
ಮತ್ತೆ ಮತ್ತೆ ನನಗೆ ಲೆಕ್ಕತಪ್ಪುತ್ತಿದೆ
ಬುಟ್ಟಿಯಲ್ಲಿದ್ದ ಮಲ್ಲಿಗೆ ಹೂಗಳು ಚೆಲ್ಲಿದಂತೆ
ಬಾನಿನ ತುಂಬಾ ಹರಡಿ ಬಿದ್ದಿವೆ
ಒಂದು ಕ್ರಮವೆಂಬುದೇ ಇಲ್ಲ, ಅಥವಾ ನನಗೆ ತಿಳಿದಿಲ್ಲ
ಅದೆಷ್ಟೋ ದಿನಗಳಿಂದ ಲೆಕ್ಕಹಾಕುತ್ತಿದ್ದರೂ ಎಣಿಕೆ ತಪ್ಪಿ
ಮೊದಲಿನಿಂದಲೇ ಶುರುಮಾಡುತ್ತಿದ್ದೇನೆ
ಎಷ್ಟನೇ ಸಲ? ಅದರ ಲೆಕ್ಕವೂ ನನಗಿಲ್ಲ
ಲೆಕ್ಕ ಹಾಕುತ್ತಿರುವುದಾದರೂ ಯಾಕೆ?
ನನಗೂ ತಿಳಿದಿಲ್ಲ. ಆದರೂ ಬೇಕು, ಎಣಿಸಲೇ ಬೇಕು
ಕಪ್ಪನೆ ಮೋಡದೊಳಗೆ ಅವಿತುಕುಳಿತ ನಕ್ಷತ್ರಗಳನ್ನೂ
ಹೊರಗೆಳೆದು ತೊಳೆದು ಎಣಿಸಬೇಕು
ಎಂದಾದರೊಂದು ದಿನ ನನಗೆ ಪಕ್ಕಾ ಲೆಕ್ಕ ಸಿಕ್ಕೀತು
ಎರಡು ಸಾವಿರದ ಇಪ್ಪತ್ತು… ಇಪ್ಪತ್ತೊಂದು….
ಹಾ… ಸರಿಯಾಗಿ ಎಣಿಸುತ್ತಿದ್ದೇನೆ
ಛೇ…. ಅಷ್ಟರಲ್ಲಿ ಬೆಳಗಾಗುತ್ತಿದೆ
ಬದುಕು ಮುಗಿದೇ ಹೋಗುತ್ತಿದೆ.
ಕಿಗ್ಗಾಲು ಜಿ. ಹರೀಶ್