ಕರಾವಳಿಯ ಸಾಂಸ್ಕ್ರತಿಕ ಹಿರಿಮೆಯ ಕಲೆಯಾದ ಯಕ್ಷಗಾನದ ಪ್ರಮುಖ ಕಲಾವಿದರುಗಳ ಪಟ್ಟಿ ಮಾಡುತ್ತ ಹೋದರೆ ಅಭಿಮಾನ್ಯು -ಅಭಿಮಾನ್ಯು -ಅಭಿಮಾನ್ಯು ಈ ಪ್ರಸಂಗದ ಅಭಿಮಾನಿಗಳ ಅಭಿಮನ್ಯು ಪಾತ್ರಕ್ಕೆ ಹೇಳಿ ಮಾಡಿಸಿದಂತಹ ಕಲಾವಿದರೆಂದರೆ ಅದು ಕೊಳಲಿ ಕೃಷ್ಣ ಶೆಟ್ಟಿಎಂದರೆ ಯಾರೂ ಅಲ್ಲಗಳೆಯುವಂತಿಲ್ಲ.
ಹಿರಿಯ ಕಲಾವಿದ ಕೊಳಲಿ ಕೃಷ್ಣ ಶೆಟ್ಟಿಯವರಪರಿಚಯವನ್ನು ಸಂಗ್ರಹಿಸುವಾಗ ಮಾರಣಕಟ್ಟೆ ಮೇಳದ ಮೇರು ಭಾಗವತರಾದ ತಿಮ್ಮಪ್ಪ ದೇವಾಡಿಗ ಹೇರಂಜಾಲು ಈ ಪರಿಚಯ ಲೇಖನಕ್ಕೆ ಸಹಕರಿಸಿದ ಇವರನ್ನು ಸಹಕಾರವನ್ನು ಸ್ಮರಿಸಿಕೊಳ್ಳುತ್ತಾ ಕುಂದ ವಾಹಿನಿ ಮೂಲಕ ಕೊಳಲಿ ಕೃಷ್ಣ ಶೆಟ್ಟಿಯವರ ಪರಿಚಯವನ್ನು ನಿಮ್ಮ ಮುಂದೆ ತೆರೆದಿಡುತ್ತಿದ್ದೇನೆ.
ಕುಂದಾಪುರ ತಾಲೂಕಿನ ಯಡಮೋಗೆ ಗ್ರಾಮದ ಕೊಳಲಿ ಗೋವಿಂದ ಶೆಟ್ಟಿ ಹಾಗೂ ಶ್ರೀಮತಿ ಸದಿಯಮ್ಮ ಶೆಟ್ಟಿ ಯವರ ಕಿರಿಯ ಪುತ್ರನಾಗಿ ಕೃಷ್ಣ ಶೆಟ್ಟಿ ದಿನಾಂಕ 09-08-1967ರಂದು ಜನಿಸಿದರು.ಇವರು ತಂದೆಯಂತೆ ಸಭ್ಯತೆ, ವಿನಯತೆ, ಶಿಸ್ತನ್ನು ಪಾಲಿಸಿಕೊಂಡು ಬಂದವರು. ಹುಟ್ಟೂರಿನಲ್ಲಿಯೇ ಶಿಕ್ಷಣ ಪಡೆದು ಪಾರ್ಥೇಶ್ವರ ಯಡಿಯಾಳರ ಮನೆಯಲ್ಲಿ ಕೆಲಸ ಮಾಡುತ್ತ 5ನೇ ತರಗತಿ ವಿದ್ಯಾಭ್ಯಾಸ ಪೂರ್ಣಗೊಳಿಸಿದರು. ನಂತರ ಮನೆಯ ಕಷ್ಟವನ್ನು ನೋಡಲಾರದೆ ಶಿಕ್ಷಣವನ್ನು ಮೊಟಕುಗೊಳಿಸಿ ಮನೆಯ ಜವಾಬ್ದಾರಿಯನ್ನು ಹೊರಲು ಮುಂದಾಗುತ್ತಾರೆ.
ಒಂದು ಕಡೆ ಮೂಲಭೂತ ಅವಶ್ಯಕತೆಗಳ ಕೊರತೆ ,ಇನ್ನೊಂದೆಡೆ ಮನೆಯ ಜವಾಬ್ದಾರಿ ಇವರನ್ನು ಯಾವುದಾದರು ಒಂದು ಕೆಲಸ ನಿರ್ವಹಿಸಲು ಪ್ರೆರೇಪಿಸಿತು. 5ನೇ ತರಗತಿಯಲ್ಲಿಯೇ ಮನೆಯ ಆರ್ಥಿಕ ತೆಯ ತೊಂದರೆಗೆ ಸಿಲುಕಿ ಯಕ್ಷಗಾನಕ್ಕೆ ಸೇರುವುದು ಪ್ರಮುಖ ಕಾರಣವಾಗಿರಬಹುದು. ಅವರು ಶಾಲೆಗೆ ಹೋದಾಗಲು ಆಟ ಆಡಲು ಬಿಟ್ಟಾಗ ಆಟವಾಡದೆ ಯಕ್ಷಗಾನ ಕುಣಿತ ಕುಣಿದು ಸಂತೋಷ ಪಡುತಿದ್ದರು. ಇದನ್ನು ಗಮನಿಸಿದ ಪಾರ್ಥೇಶ್ವರ ಯಡಿಯಾಳರ ಮಗ ಶಿವರಾಮ ಯಾಡಿಯಳರು ಇವರನ್ನು ಯಕ್ಷಗಾನಕ್ಕೆ ಸೇರಿಸುದಕ್ಕೆ ಮುಂದಾಗುತ್ತಾರೆ.
ಕಲಿಕಾ ಕೇಂದ್ರದಲ್ಲಿ ತರಬೇತಿ ಪಡೆಯದೇ 1982ರಲ್ಲಿ ನೇರವಾಗಿ ಕಮಲಶಿಲೆ ಮೇಳವನ್ನು ಸೇರುತ್ತಾರೆ. ಅಲ್ಲಿ ಶ್ರೀಯುತ ಆಲೂರು ಸುರೇಂದ್ರ ಹಾಗೂ ಶ್ರೀಯುತ ವಿಶ್ವೇಶ್ವರ ಸೋಮಯಾಜಿ ಇವರಲ್ಲಿ ಯಕ್ಷಗಾನ ಕಲೆಯನ್ನು ಕರಗತ ಮಾಡಿಕೊಂಡು ಮೊದಲು ಬಾಲಗೋಪಾಲ ಮಾಡುವ ಮೂಲಕ ರಂಗ ಪ್ರವೇಶ ಮಾಡುತ್ತಾರೆ. ತದನಂತರ ಸ್ತ್ರೀವೇಷವನ್ನು ಮಾಡಿದ ಇವರು ಮುಂದೆ ಪುಂಡು ವೇಶದತ್ತ ಹೆಚ್ಚಿನ ಒಲವನ್ನು ತೋರಿಸುತ್ತಾರೆ. ಹೀಗೆ ಒಂದೆಡೆ ಮೇಳದದಲ್ಲಿ ತೊಡಗಿದರೆ ಮಳೆಗಾಲದಲ್ಲಿ ತನ್ನನ್ನು ಮೇಳಕ್ಕೆ ಸೇರಿಸಿದ ಶಿವರಾಮ ಯಾಡಿಯಳರ ಮನೆಯಲ್ಲಿ ಕೆಲಸ ಮಾಡುತ್ತಾರೆ. ಹೀಗೆ ಇವರಿಗೆ ಯಕ್ಷಗಾನಕ್ಕೆ ಸೇರಿದ 10ವರ್ಷದಲ್ಲಿ “ಕೊಳಲಿ” ಎಂದೇ ಪ್ರಸಿದ್ದಿಯಾಗಿದ್ದಾರೆ.
ಹಾಗೆಯೇ ಪುಂಡು ವೇಷದಾರಿಯಾಗಿ ರೂಪುಗೊಂಡ ಇವರು ಅಭಿಮನ್ಯು, ಕುಶ -ಲವ, ಬಬ್ರುವಾಹನ, ಸುಧನ್ವ, ಕೃಷ್ಣ, ವಿಷ್ಣು ಮೊದಲಾದ ಪಾತ್ರಗಳು ಇವರನ್ನು ಕೈ ಬೀಸಿ ಕರೆಯತೋಡಗಿತು. ಸುಮಾರು 5ವರ್ಷಗಳ ಕಾಲ ಕಮಲಶಿಲೆ ಮೇಳದಲ್ಲಿ ಸೇವೆ ಸಲ್ಲಿಸಿದ ಇವರು ನಂತರ ನಾರಾಯಣ ಶೆಟ್ಟಿಯವರ ಯಜಮಾನಿಕೆಯ ಸೌಕೂರು ಮೇಳದಲ್ಲಿ 2ವರ್ಷ ಸೇವೆ ಸಲ್ಲಿಸಿ ನಂತರ ಎಮ್ .ಎಮ್ . ಹೆಗ್ಡೆ ಯವರ ಮಾರಣಕಟ್ಟೆ ಮೇಳದಲ್ಲಿ 14ವರ್ಷ ಸುದೀರ್ಘ ಕಲಾಸೇವೆ ಮಾಡಿದ್ದಾರೆ. ಮಾರಣಕಟ್ಟೆ ಮೇಳದಲ್ಲಿ ಜೋಡಾಟದಲ್ಲಿ ಜನರಿಂದ ಗುರುತಿಸಿಕೊಂಡ ಒಬ್ಬ ಪ್ರತಿಭನ್ವಿತ ಕಲಾವಿದ. ಮಾರಣಕಟ್ಟೆ ಮೇಳವೆ ಅವರಿಗೆ ದಾರಿದೀಪವಾಯ್ತು ಎಂದರೆ ಅತಿಶಯೋಕ್ತಿಯಾಗಲಾರದು. ಅಲ್ಲಿಂದ ಮಂದಾರ್ತಿ ಮೇಳದಲ್ಲಿ ಒಂದು ವರ್ಷ ತಿರುಗಾಟ ಪೂರೈಸಿ ಕಮಲಶಿಲೆ ಮೇಳದಲ್ಲಿ ಮೂರು ವರ್ಷ ಸೇವೆ ಸಲ್ಲಿಸಿ ನಂತರ ಪೆರ್ಡೂರು ಮೇಳದಲ್ಲಿಯೂ ಕೂಡ ಮೂರು ವರ್ಷ ತಿರುಗಾಟ ಮಾಡಿ ತನ್ನ ಪ್ರತಿಭೆಯನ್ನು ರಂಗದ ಮೂಲಕ ತೋರ್ಪಡಿಸಿದ ವ್ಯಕ್ತಿಯಾಗಿದ್ದಾರೆ.
ನೀಲಾವರ ಮೇಳದಲ್ಲಿ 2ವರ್ಷ ಕಾಲಸೇವೆ ಮಾಡಿರುತ್ತಾರೆ.ಇಷ್ಟೊಂದು ಸುದೀರ್ಘವಾಗಿ ಯಕ್ಷಗಾನ ಸೇವೆ ನಿರತರದ ಇವರು ಸದ್ಯ ಮಾರಣಕಟ್ಟೆ ಮೇಳದಲ್ಲಿ ಸೇವೆಯನ್ನು ಮಾಡುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಹಂತ ಹಂತವಾಗಿ ಬೆಳೆದು ಬಡಗು ತಿಟ್ಟಿನ ಅಗ್ರಪಂಕ್ತಿಯ ಪುರುಷವೇಶದರಿಯಾಗಿ ರೂಪುಗೊಂಡಿದ್ದಾರೆ. ತನ್ನ ಬಣ್ಣದ ಬದುಕು ಒಂದೆಡೆಯಾದರೆ ತನ್ನ ನೈಜ ಬದುಕಿನೊಂದಿಗೆ ಬದುಕುತ್ತಿದ್ದಾರೆ. ಶೀಲಾವತಿ ಎಂಬವರೊಡನೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ ಇವರು ಪವಿತ್ರ ಮತ್ತು ಪ್ರಸಾದ್ ಎಂಬ ಇಬ್ಬರು ಮಕ್ಕಳನ್ನು ಪಡೆದು ಸುಖ ಜೀವನವನ್ನು ನೆಡೆಸುತ್ತಿದ್ದಾರೆ.
ಇವರ ಕಲಾ ಸೇವೆಯನ್ನು ಗುರುತಿಸಿ ಸಿದ್ದಾಪುರ, ಕುಂದಾಪುರ, ಉಡುಪಿ, ಮಂಗಳೂರು, ಬೆಂಗಳೂರು, ಇನ್ನು ಹಲವು ಕಡೆ ಸನ್ಮಾನ, ಗೌರವವನ್ನು ಪಡೆದಿದ್ದಾರೆ. ಹೊರ ರಾಜ್ಯದ ಮುಂಬೈ, ಹೈದ್ರಾಬಾದ್ ನಲ್ಲಿ ಯಕ್ಷಗಾನ ಪ್ರದರ್ಶನ ನೀಡಿ ಜನ ಮನ್ನಣೆಗೆ ಪಾತ್ರರಾದವರಿವರು. “ಅತೀ ಪ್ರಾಮುಖ್ಯವಾಗಿ ಇವರಿಗೆ “ಕಲ್ಕೂರ ಪ್ರಶಸ್ತಿ”, “ಗಾನ ಸೌರಭ” ಪ್ರಶಸ್ತಿಗಳು ದೊರಕಿದೆ. ಕೆಲವು ವರ್ಷಗಳ ಹಿಂದೆ ಯಕ್ಷ ವಾಮನ ಎಂಬ ಬಿರುದು ದೊರೆತಿದೆ. ರಾಜ್ಯ ಹೊರ ರಾಜ್ಯ ವಿದೇಶಗಳಲ್ಲಿಯೂ ಕೊಳಲಿ ಅಭಿಮಾನಿ ಬಳಗ ಹುಟ್ಟಿಕೊಂಡಿದೆ. ಇವರಿಗೆ ಅಭಿಮಾನಿಗಳು ಬಹಳಷ್ಟು ಮಂದಿಗಳು ಇದ್ದರೂ ಕೂಡ ಆರ್ಥಿಕತೆಯಲ್ಲಿ ಸ್ವಾವಲಂಭನೆ ಸಾಧಿಸಲಾಗಲಿಲ್ಲ. ಇದು ಇವರಂತಹ ಅನೇಕ ಕಲಾವಿದನ ಬಣ್ಣದ ಬದುಕಿನೊಳಗಿನ ವಾಸ್ತವತೆ. ಅವರ ಮುಂದಿನ ಬದುಕು ಸುಖಮಯವಾಗಿರಲಿ ಎಂದು ನಮ್ಮ ಪತ್ರಿಕೆ ವತಿಯಿಂದ ಹಾರೈಸುತ್ತೇವೆ.
ಈಶ್ವರ್ ಸಿ ನಾವುಂದ.
ಚಿಂತಕ -ಬರಹಗಾರ.