ಕನ್ನಡ ಇದು ಕನ್ನಡಿಗರ ಆಡುಭಾಷೆ. ಭಾಷಾ ಸೊಗಡಿನಲ್ಲಿ ಹಲವು ಕವಲುಗಳಿದ್ದರೂ ಕೊನೆಗೆ ಸ್ವಾಭಿಮಾನದ ಸಾಗರಕ್ಕೆ ಸೇರುವ ವಿಶಾಲವಾಗಿ ಹರಿಯುವ ನದಿ ನಮ್ಮ ಕನ್ನಡ . ಇಲ್ಲಿ ಊರಿಗೊಂದು ರೀತಿಯಲ್ಲಿ ಕನ್ನಡ ,ಹೊಸ ಅರ್ಥದ ಹೊಸ ಭಾವಗಳ ಪುಸ್ತಕ. ಈಗ ಈ ಪುಸ್ತಕ ನನ್ನದೂ ನಮ್ಮದು ಅನ್ನೋ ಹೆಮ್ಮೆಯಾಗಲಿ ಕಲಿಯುವ ಆಸೆಯಾಗಲಿ ಕಲಿತದ್ದನ್ನು ಬಳಸುವ ಔದಾರ್ಯವಾಗಲಿ ಎಲ್ಲವೂ ಬತ್ತಿ ಹೊಗುತ್ತಿರುವ ಸಾಗರದಂತೆನಿಸಿ ಬಿಟ್ಟಿದೆ.
ಕನ್ನಡ ಬಳಸಬೇಕಾದ ನಾವು ಯಾರಿಗೋ ಕನ್ನಡ ಕಲಿಸೋ ಉಸಾಬರಿಗೆ ಬಿದ್ದು ನಮ್ಮ ಭಾಷೆಗೆ ಆಂಗ್ಲ- ಹಿಂದಿ ಪದಗಳ ಟೇಸ್ಟಿಂಗ್ ಪೌಡರ್ ಸೇರಿಸಿಕೊಳ್ಳುತ್ತಿದ್ದೇವೆ. ನವೆಂಬರ್ ಒಂದಕ್ಕೆ ಜೀವ ಪಡೆಯುವ ಕನ್ನಡತನ ಎರಡನೇ ದಿನವೇ ಬಾವುಟದ ಜೊತೆ ಮಡಚಿಟ್ಟು ಮತ್ತದೇ ಇಂಗ್ಲೀಷಿನ ದುಬಾರಿತನದಲ್ಲಿ ನಿಮ್ಮನ್ನೇ ಮರೆಯುದಾಗಿದೆ. ಇಲ್ಲಿನ ನೃಪತುಂಗ, ಇಲ್ಲಿನ ಕೃಷ್ಣದೇವರಾಯತಹ ಮಹಾನ್ ನಾಯಕರ ಕೀರ್ತಿಯನ್ನು ನಾವೇ ಮರೆತು ಇನ್ಯಾರದೋ ಸೀಮಂತಕ್ಕೆ ಯಾರೋ ಬಾಣಂತಿಯಾದಂತಿದೆ ಇಂದಿನ ಪರಿಸ್ಥಿತಿ.
ಈಗಿನ ಕನ್ನಡಿಗರಿಗೆ ಕನ್ನಡ ಅಲ್ಪ ಸ್ವಲ್ಪ ಮಾತಾಡೋಕೆ ಗೊತ್ತಿದ್ರೆ ಬರಿಯೋಕೆ ಬರಲ್ಲ, ದೊಡ್ಡ ದೊಡ್ಡ ಪದ ತಲೆಗೂ ಹೋಗಲ್ಲ ಅವರಿಗೆ ಕಲಿಯುವ ಆಸೆಯೂ ಇಲ್ಲ. ಕಲಿಸೋ ಆಸೆ ಸರ್ಕಾರಕ್ಕಾಗಲಿ ಹೆತ್ತವರಿಗಾಗಲಿ ಮೊದಲೇ ಇಲ್ಲ. ಇದು ಇಂದಿನ ವಾಸ್ತವದ ಸಂಗತಿ .
ಹಾಗಾದ್ರೇ ಕನ್ನಡ ಕೊನೆಯಾದರೆ ಕಾರಣ ಯಾರು? ಮಲಯಾಳಂ ಭಾಷೆ ತುಳುವಿನಿಂದ ಹುಟ್ಟಿಕೊಂಡದ್ದು ಎಂದು ಕೇಳುವ ನಮ್ಮ ತುಳುನಾಡಿನ ಜನರಿಗೀಗ ತುಳು ಲಿಪಿ ಗೊತ್ತಿಲ್ಲ. ಇದೇ ಪರಿಸ್ಥಿತಿ ನಮಗೂ ಬರಬಹುದು. ನಮ್ಮದೇ ಸರ್ಕಾರಿ ಶಾಲೆಗಳೀಗ ಕನ್ನಡ ಕಲಿಸುವ ಜಿದ್ದಿಗೆ ಬಿದ್ದು ಬಾಗಿಲು ಹಾಕಿಸಿಕೊಳ್ಳುತಿದ್ದರೆ ಸರ್ಕಾರ ಸಿಬಿಎಸ್ ಸಿ ಶಾಲೆಗಳಿಗೆ ಅವಕಾಶ ನೀಡಿ ಅಲ್ಲಿನ ಮಕ್ಕಳಿಗೆ ಕನ್ನಡ ಆಯ್ಕೆಯಾಗಿ ಕಲಿಯುವ ಅವಕಾಶ ಕೊಟ್ಟು ಕನ್ನಡವೇ ಗೊತ್ತಿರದ ಕನ್ನಡಿಗರ ಸೃಷ್ಟಿಗೆ ಅಡಿಪಾಯ ಹಾಕಿದಂತಿದೆ
ಈಗ ಎಚ್ಚೆತ್ತು ಕೊಂಡು ಹೊಸ ಶಿಕ್ಷಣ ನೀತಿ ತಂದರೂ ಅದು ಪ್ರಾಥಮಿಕ ಹಂತದಲ್ಲೇ ಬದಲಾವಣೆಯಾಗಬೇಕೇ ಹೊರತು ಕಾಲೇಜು ಹಂತದಲ್ಲಿ ಕನ್ನಡವೇ ತಿಳಿಯದವರಿಗೆ ಕನ್ನಡ ಕಲಿಯಿರಿ ಎನ್ನುವ ಹಾಸ್ಯಾಸ್ಟದ ರೀತಿಯ ಕಾನೂನು ಅರ್ಥವೇ ಆಗದ್ದು. ಕೇರಳ ,ತಮಿಳುನಾಡುಗಳಲ್ಲಿ ಪ್ರಾದೇಶಿಕ ಭಾಷೆ ಕಡ್ಡಾಯವಾದರೆ ಇಲ್ಲಿ ಕನ್ನಡ ಆಯ್ಕೆಯಾಗಿ ಸಹ ತೆಗೆದುಕೊಳ್ಳಲಾಗದಂತಹ ಯುವಜನತೆಯ ನಿರ್ಧಾರಕ್ಕೆ ಸರ್ಕಾರ ಕನ್ನಡ ಕಡ್ಡಾಯ ಮಾಡಿ ನಿಯಂತ್ರಣ ಹೇರುವ ಪ್ರಯತ್ನಕ್ಕೆ ಕನ್ನಡಿಗರೇ ಅಡ್ಡಗಾಲು ಹಾಕಿದ ಮೇಲೆ ಇದು ಕೇವಲ ಸರ್ಕಾರದ ತಪ್ಪೆಂದು ಬೊಟ್ಟು ಮಾಡಿ ತೋರಿಸುವ ಅಧಿಕಾರ ಸಹ ನಮಗಿಲ್ಲ.
ಕನ್ನಡ ಉಳಿಸುದಾದರೆ ಹೇಗೆ? ಮೊದಲು ನಮ್ಮ ಸ್ಥಳಿಯ ಕನ್ನಡವನ್ನು ಬಳಸುದನ್ನು ಎಂದಿಗೂ ಬಿಡಬಾರದು. ಏಕೆಂದರೆ ಯಾವ ನದಿಗೆ ಉಪನದಿಗಳಿರುವುದಿಲ್ಲವೋ ಅದು ಬೇಗನೇ ಖಾಲಿಯಾಗಿ ಬಿಡುತ್ತದೆ . ಹಾಗಾಗಿ ಕನ್ನಡದ ಪ್ರತಿ ಮಜಲುಗಳಿಗೂ ಪ್ರಾಮುಖ್ಯತೆಯ ಜೊತೆಗೆ ಅದನ್ನು ರಕ್ಷಿಸುವ ಕುರಿತು ಪ್ರತಿಯೊಬ್ಬ ಕನ್ನಡಿಗನು ಯೋಚಿಸಬೇಕು. ಕನ್ನಡವನ್ನು ಪ್ರಾಥಮಿಕ ಹಂತದಿಂದ ಕಡ್ಡಾಯಗೊಳಿಸಬೇಕು. ಹಿಂದಿ ಹೇರಿಕೆಯ ಬಗ್ಗೆ ಅರಚುವ ಬದಲು ಕನ್ನಡದ ಉಳಿವಿಗೆ ಒಂದಾಗಬೇಕು. ಕರ್ನಾಟಕದ ಇತಿಹಾಸ, ಕನ್ನಡದ ಇತಿಹಾಸಗಳ ರಕ್ಷಣೆ ,ಕನ್ನಡ ಲೇಖಕರಿಗೆ ಮನ್ನಣೆ ,ಕನ್ನಡ ಸಿನಿಮಾಗಳ ವಿಕ್ಷಣೆ, ಜಾನಪದ ಕಲೆ ಹಾಗೂ ಗ್ರಾಮೀಣ ಕಲೆಗಳಾದ ಯಕ್ಷಗಾನಗಳಂತಹ ಕಲೆಗಳ ರಕ್ಷಣೆಯಾಗಬೇಕು. ಒಮ್ಮೆ ಯೋಚಿಸಿ ಮುಂದೊಮ್ಮೆ ಕನ್ನಡ ಕೂಡ ಲಿಪಿಯಿಲ್ಲದ ಒಂದಿಷ್ಟು ಜನರ ಆಡುಭಾಷೆಯಾಗಿ ಉಳಿದು ಬಿಟ್ಟರೆ ಹೇಗಾಗುದೆಂದು…..
ಲೇಖನ : ದೇವಿ ಪ್ರಸಾದ್ ಶೆಟ್ಟಿ ಪ್ರಥಮ ಬಿ ಸಿ ಎ ಡಾ. ಬಿ .ಬಿ .ಹೆಗ್ಡೆ ಪ್ರಥಮ ದರ್ಜೆ ಕಾಲೇಜು ,ಕುಂದಾಪುರ .