ಜನವರಿ 26 – ಗಣರಾಜ್ಯೋತ್ಸವ ದಿನ. ದೇಶದ ಮೂಲಭೂತ ಶಾಸನವಾದ ಸಂವಿಧಾನ ಸೃಷ್ಟಿಯ ಸಂಭ್ರಮಾಚರಣೆಯ ದಿನ. ಸಂವಿಧಾನದ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯು ಜಾರಿಗೆ ಬಂದ ಸುದಿನ. ನಮ್ಮ ಭಾರತ ಸಂವಿಧಾನವು 26 ಜನವರಿ 1950 ರಂದು ಜಾರಿಗೆ ಬಂದಿದೆ. ಹಾಗಾಗಿ ಪ್ರತೀ ವರ್ಷ ಜನವರಿ 26ನ್ನು ಗಣರಾಜ್ಯೋತ್ಸವ ದಿನ ವನ್ನಾಗಿ ಆಚರಿಸಲಾಗುತ್ತದೆ. ನಮ್ಮ ಸಂವಿಧಾನವು ನವೆಂಬರ್ 26, 1949 ರಂದು ಸಂವಿಧಾನ ರಚನಾ ಸಮಿತಿಯಿಂದ ಅಂಗೀಕಾರವಾಯಿತು. ಆದರೆ ಅದು ಜಾರಿಗೆ ಬಂದಿದ್ದು ಜನವರಿ 26, 1950. ಜನವರಿ 26 ತನ್ನದೇ ಆದ ಐತಿಹಾಸಿಕ ಮಹತ್ವವನ್ನು ಹೊಂದಿದ ದಿನವಾಗಿದೆ . ಜನವರಿ 26, 1930 ರಲ್ಲಿ ‘ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC-Indian National Congress)ತನ್ನ ಲಾಹೋರ್ ಅಧಿವೇಶನದಲ್ಲಿ ಸಂಪೂರ್ಣ ಸ್ವರಾಜ್ಯ ಗೊತ್ತುವಳಿ ಯನ್ನು ಅಂಗೀಕರಿಸಿತ್ತು. ಹಾಗಾಗಿ ಅದರ ಸವಿನೆನಪಿಗಾಗಿ ಜನವರಿ 26, 1950 ರಂದು ನಮ್ಮ ಭಾರತ ಸಂವಿಧಾನವನ್ನು ಜಾರಿಗೆ ತರಲಾಯಿತು. ನಮ್ಮ ಭಾರತ ಸಂವಿಧಾನದ ರಚನಾ ಪ್ರಕ್ರಿಯೆ ಸ್ವಾತಂತ್ರ ಪೂರ್ವದಲ್ಲೇ ಆರಂಭವಾಯಿತು. ನಮ್ಮ ದೇಶಕ್ಕೆ ನಮ್ಮದೇ ಒಂದು ಸಂವಿಧಾನ ಬೇಕೆಂದು ಪ್ರಥಮ ಬಾರಿಗೆ 1934ರಲ್ಲಿ ಪ್ರಸ್ತಾಪಿಸಿದ್ದು, ಎಂ.ಎನ್. ರಾಯ್. ತದನಂತರ ಮಹಾತ್ಮಾ ಗಾಂಧೀಜಿಯವರು ಇದಕ್ಕೆ ಧ್ವನಿಗೂಡಿಸಿದರು. ನಂತರ 1935ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ತನ್ನ ಅಧಿಕೃತ ಬೇಡಿಕೆಯನ್ನು ಬ್ರಿಟೀಷ್ ಸರ್ಕಾರದ ಮುಂದೆ ಇಟ್ಟಿತು. ಆಗ ಬ್ರಿಟೀಷ್ ಸರ್ಕಾರವು 1940 ರಲ್ಲಿ ಆಗಸ್ಟ್ ಕೊಡುಗೆ ಯಾಗಿ ಭಾರತದ ಸಂವಿಧಾನ ರಚನೆಗೆ ಅವಕಾಶ ನೀಡಿತು.
ಸಂವಿಧಾನ ರಚನಾ ಸಮಿತಿ;-
‘ಕ್ಯಾಬಿನೆಟ್ ಮಿಷನ್ ಪ್ಲಾ ನ್ -1946 (ತ್ರಿಸದಸ್ಯ ಆಯೋಗ-ಲಾರೆನ್ಸ್ ಕ್ರಿಪ್ಸ್ ಮತ್ತು ಅಲೆಗ್ಯಾಡರ್ ) ಶಿಫಾರಸ್ಸಿನ ಅನುಗುಣವಾಗಿ ನವೆಂಬರ್ 1946 ರಂದು ಸಂವಿಧಾನ ರಚನಾ ಸಮಿತಿಯನ್ನು ರಚಿಸಲಾಯಿತು. ಸಂವಿಧಾನ ರಚನಾ ಸಮಿತಿಯು ಪ್ರಥಮ ಸಭೆಯು 1946ರ ಡಿಸೆಂಬರ್ 9ರಂದು ನಡೆಯಿತು. ಹಿರಿಯ ಸದಸ್ಯರಾಗಿದ್ದ ಡಾ.ಸಚ್ಚಿದಾನಂದ ಸಿನ್ಹ ರವರನ್ನು ಸಂವಿಧಾನ ರಚನಾ ಸಮಿತಿಯ ತಾತ್ಕಾಲಿಕ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ನಂತರ 1946ರ ಡಿಸೆಂಬರ್ 11ರಂದು ಡಾ.ಬಾಬುರಾಜೇಂದ್ರ ಪ್ರಸಾದ್ರವರನ್ನು ಖಾಯಂ ಅಧ್ಯಕ್ಷರನ್ನಾಗಿ, ಎಚ್.ಸಿ.ಮುಖರ್ಜಿರವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಶ್ರೀ.ಬಿ.ಎನ್.ರಾವ್ರವರನ್ನು ಸಂವಿಧಾನಿಕ ಸಲಹೆಗಾರರನ್ನಾಗಿ ನೇಮಿಸಲಾಯಿತು. ಈ ಸಮಿತಿಯು 389 ಜನ ಸದಸ್ಯರನ್ನು ಹೊಂದಿತ್ತು (ದೇಶ ವಿಭಜನೆಯ ನಂತರ ಸದಸ್ಯರ ಸಂಖ್ಯೆ 299ಕ್ಕೆ ಇಳಿಯಿತು).
ಕನ್ನಡಿಗ ಸದಸ್ಯರು;-
ಸಂವಿಧಾನ ರಚನಾ ಸಮಿತಿಯಲ್ಲಿ ನಮ್ಮ ಕನ್ನಡಿಗರೂ ಪಾಲ್ಗೊಂಡಿದ್ದರು ಎನ್ನುವುದು ನಮಗೆ ಹೆಮ್ಮೆಯ ಸಂಗತಿ. ಬಿ.ಎನ್. ರಾವ್ ,ಕೆ.ಸಿ.ರೆಡ್ಡಿ, ಕೆಂಗಲ್ ಹನುಮಂತಯ್ಯ, ಟಿ.ಸಿದ್ದಲಿಂಗಯ್ಯ, ಟಿ.ಚೆನ್ನಯ್ಯ, ಆರ್.ದಿವಾಕರ್, ಎಸ್.ನಿಜಲಿಂಗಪ್ಪ, ಎಚ್.ಆರ್.ಗುರುದೇವ ರೆಡ್ಡಿ, ಕೆ.ಎಂ.ಪುನ್ನಚ್ಚ, ಎಸ್.ವಿ.ಕೃಷ್ಣಮುರ್ತಿರಾವ್ ಹಾಗೂ ಎಚ್.ಸಿದ್ದವೀರಪ್ಪ .
ಮಹಿಳಾ ಸದಸ್ಯರು;-
ಸಂವಿಧಾನ ರಚನಾ ಸಮಿತಿಯಲ್ಲಿ 15 ಮಂದಿ ಮಹಿಳಾ ಸದಸ್ಯರು ಇದ್ದುದು ವಿಶೇಷವಾಗಿತ್ತು. ಸರೋಜಿನಿ ನಾಯ್ಡು, ವಿಜಯಲಕ್ಷ್ಮಿ ಪಂಡಿತ್, ಸುಜೇತ ಕೃಪಾಲಿಸಿ, ರಾಜಕುಮಾರಿ ಅಮೃತ್ ಕೌರ್, ಕಮಲಾ ಚೌಧರಿ, ಹಂಸಾ ಜೀವರಾಜ್, ಲೀಲಾರಾಮ್, ಆನಿಮಸ್ಕರೇನ್, ಅಮ್ಮು ಸ್ವಾಮಿನಾಥನ್, ದುರ್ಗಾಭಾಯಿ ದೇಶ್ಮುಖ್,ಮಾಲತಿ ಚೌಧರಿ, ರೇಣುಖಾರೇ, ದಾಕ್ಷಾಯಿಣಿ ವೇಲಾಯುಧನ್, ಪೂರ್ಣಿಮಾ ಬ್ಯಾನರ್ಜಿ ಹಾಗೂ ಬೇಗಂ ಐಝಾಝ್ ರಸೂಲ್.
ಸಂವಿಧಾನ ಕರಡು ಸಮಿತಿ;-
ಸಂವಿಧಾನದ ರಚನೆಗೆ ಸಂಬಂಧಿಸಿದ ವಿಷಯಗಳನ್ನು ಪರಿಶೀಲಿಸಲು 22 ಸಮಿತಿಗಳನ್ನುರಚಿಸಲಾಯಿತು. ಈ ಸಮಿತಿಗಳಲ್ಲಿ ಕರಡು ಸಮಿತಿಯು ಅತ್ಯಂತ ಪ್ರಮುಖವಾದುದು. ಈ ಸಮಿತಿಯನ್ನು 29, ಆಗಸ್ಟ್ 1947 ರಂದು ಡಾ.ಬಿ.ಆರ್.ಅಂಬೇಡ್ಕರ್ರವರ ಅಧ್ಯಕ್ಷತೆಯಲ್ಲಿ ಇನ್ನಿತರ 6 ಸದಸ್ಯರೊಂದಿಗೆ ರಚಿಸಲಾಯಿತು. ಡಾ.ಕೆ.ಎಂ.ಮುನ್ಷಿ, ಎನ್.ಗೋಪಾಲಸ್ವಾಮಿ ಅಯ್ಯಂಗಾರ್, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಸೈಯದ್ ಮಹಮದ್ ಸಾದುಲ್ಲಾ, ಎನ್.ಮಾಧವರಾವ್, ಟಿ.ಟಿ.ಕೃಷ್ಣಮಾಚಾರಿ. ಭಾರತ ಸಂವಿಧಾನದ ಕರಡನ್ನು ತಯಾರಿಸುವುದು ಈ ಸಮಿತಿಯ ಮುಖ್ಯ ಜವಾಬ್ದಾರಿಯಾಗಿತ್ತು. ಈ ಸಮಿತಿಯು ಕರಡು ಪ್ರತಿಯನ್ನು ಸಂವಿಧಾನ ರಚನಾ ಸಮಿತಿಯ ಮುಂದೆ 4ನೇ ನವೆಂಬರ್ 1948ರಂದು ಸಲ್ಲಿಸಿತು. ಸುಮಾರು 63,96,729 ರೂಪಾಯಿಗಳ ವೆಚ್ಚದಲ್ಲಿ 22 ಸಮಿತಿಗಳ ಸಹಾಯದಿಂದ 11 ಅಧಿವೇಶನಗಳ ಮೂಲಕ 2 ವರ್ಷ, 11 ತಿಂಗಳು ಮತ್ತು 18 ದಿನಗಳಲ್ಲಿ ನಮ್ಮ ಸಂವಿಧಾನವನ್ನು ರಚಿಸಲಾಯಿತು.
ಗಜಗಾತ್ರದ ಸಂವಿಧಾನ:-
ನಮ್ಮ ಭಾರತ ಸಂವಿಧಾನವು ಇಡೀ ವಿಶ್ವದಲ್ಲೇ ಅತ್ಯಂತ ದೊಡ್ಡ ಲಿಖಿತ ಸಂವಿಧಾನವಾಗಿದೆ.ಇದು
395 ವಿಧಿ, 12 ಪರಿಚ್ಛೇದ ಮತ್ತು 22 ಭಾಗಗಳನ್ನು ಹೊಂದಿದೆ. ಈ ಸಂವಿಧಾನದ ಪ್ರತಿಯಲ್ಲಿ 1,17,369 ಪದಗಳಿವೆ. ಇದನ್ನು ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಸಂಪೂರ್ಣ ಕೈಬರಹದಲ್ಲಿ ಬರೆದು ಕ್ಯಾಲಿಗ್ರಾಫ್ ಮಾಡಲಾಗಿದೆ. ಈ ಸಂವಿಧಾನದ ಮೂಲ ಪ್ರತಿಯನ್ನು ಹೀಲಿಯಂ ತುಂಬಿದ ಪೆಟ್ಟಿಗೆಯಲ್ಲಿ ಸಂಸತ್ನ ಲೈಬ್ರರಿಯಲ್ಲಿ ಸಂರಕ್ಷಿಸಿಡಲಾಗಿದೆ. ಹಲವು ರಾಷ್ಟ್ರಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ ಅವುಗಳಲ್ಲಿ ಉತ್ತಮವಾದ ಹಾಗೂ ಭಾರತದ ಸಂಕೀರ್ಣ ಸಮಾಜ ವ್ಯವಸ್ಥೆ, ಸ್ಥಿತಿಗತಿ ಮತ್ತು ಸಂಸ್ಕೃತಿಗಳಿಗೆ ಹೊಂದಾಣಿಕೆಯಾಗುವ ಅಂಶಗಳನ್ನು ಪಡೆದು ಜಗತ್ತಿನಲ್ಲೇ ಅತ್ಯಂತ ದೊಡ್ಡ ಸಂವಿಧಾನವನ್ನು ರಚಿಸಿ ಸಂವಿಧಾನದ ಬಿರುದಿಗೆ ಡಾ.ಬಿ.ಆರ್. ಅಂಬೇಡ್ಕರ್ರವರು ಭಾಜನರಾಗಿದ್ದಾರೆ.
ಪ್ರಸ್ತಾವನೆ:-
ನಮ್ಮ ಸಂವಿಧಾನವು ಒಂದು ಪುಟ್ಟ ಪೀಠಿಕೆಯಿಂದ ಆರಂಭವಾಗುತ್ತದೆ. ಅದು ಭಾರತದ ಪ್ರಜೆಗಳಾದ
ನಾವು ಭಾರತವನ್ನು ಒಂದು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರೂಪಿಸಲು, ರಾಷ್ಟ್ರದ ಸಮಸ್ತ ಪೌರರಿಗೆ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ, ವಿಚಾರ, ಅಭಿವ್ಯಕ್ತಿ, ಆರಾಧನೆ, ನಂಬಿಕೆ ಮತ್ತು ಧರ್ಮಗಳಲ್ಲಿ ಸ್ವಾತಂತ್ರ ಸ್ಥಾನಮಾನ ಮತ್ತು ಅವಕಾಶಗಳಲ್ಲಿ ಸಮಾನತೆ, ವ್ಯಕ್ತಿ ಗೌರವ
ಹಾಗೂ ದೇಶದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡಲು ಸಮಸ್ತ ಜನರಲ್ಲಿ ಭ್ರಾತೃತ್ವ ಮನೋಭಾವನೆಯನ್ನು ಮೂಡಿಸಲು ದೃಢಸಂಕಲ್ಪ ದೊಂದಿಗೆ 26 ನವೆಂಬರ್ 1949 ರಂದು ನಮ್ಮ ಸಂವಿಧಾನವನ್ನು ನಮಗೆ ನಾವೇ ಸಮರ್ಪಿಸಿಕೊಂಡಿದ್ದೇವೆ”. ಹೀಗೆ ಪೀಠಿಕೆಯು ಘನವಾದ ಮೌಲ್ಯಾದರ್ಶಗಳಿಂದ ಕೂಡಿದೆ. ಇಲ್ಲಿನ ಪ್ರತಿಯೊಂದು ಶಬ್ದವನ್ನೂ ಎಚ್ಚರಿಕೆಯಿಂದ ಮತ್ತು ದೂರದೃಷ್ಟಿಯಿಂದ ಸೇರಿಸಲಾಗಿದೆ. ಪೀಠಿಕೆಯು ಸಂವಿಧಾನದ ಆಶಯಗಳನ್ನು ಮಾತ್ರವಲ್ಲದೇ ರೂಪುಗೊಳ್ಳಬೇಕಾದ ಭಾರತದ ಪರಿಕಲ್ಪನೆಯನ್ನು ಮುಂದಿಡುತ್ತದೆ. ಇದು ಮಹಾತ್ಮಾ ಗಾಂಧೀಜಿ ವರ್ಣಿಸಿದ “ನನ್ನ ಕನಸಿನ ಭಾರತ” ವನ್ನು ಸ್ಥಾಪಿಸುವ ಆಶಯವನ್ನೂ ಹೊಂದಿದೆ. ಹಾಗಾಗಿಯೇ ಇದನ್ನು ಡಾ.ಬಿ.ಆರ್. ಅಂಬೇಡ್ಕರ್ರವರು “ಭಾರತದ ಭವಿಷ್ಯದ ಜೀವನ ವಿಧಾನದ ಕನ್ನಡಿ” ಎಂದು ಬಣ್ಣಿಸಿದ್ದಾರೆ. ಇಲ್ಲಿನ ಉಲ್ಲೇಖಿತ ಪದಗಳು ತುಂಬಾ ಅರ್ಥಗರ್ಭಿತವಾಗಿದ್ದು ,ರಚನಾತ್ಮಕ ತತ್ವ ಮತ್ತು ವಿಶಾಲ ಭಾವನೆಗಳನ್ನು ಒಳಗೊಂಡಿವೆ. ಇವುಗಳ ಅನುಷ್ಠಾನಕ್ಕೆ ಆಡಳಿತಾಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಈ ಪ್ರಸ್ತಾವನೆ ಭಾಗದ ಅಳವಡಿಕೆಗೆ ಅಮೇರಿಕಾದ ಸಂವಿಧಾನವು ಆಧಾರವಾಗಿದ್ದು, ಇದರಲ್ಲಿ ಬರುವ “ಸಮಾಜವಾದ’ ಮತ್ತು ‘ಜಾತ್ಯಾತೀತತ’ ಎಂಬ ಪದಗಳನ್ನು 1976ರಲ್ಲಿ ಸಂವಿಧಾನದ 42ನೇ ತಿದ್ದುಪಡಿ ಮೂಲಕ ಸೇರಿಸಲಾಗಿದೆ.
ಎರವಲು ಸಂವಿಧಾನ:-
ನಮ್ಮ ಸಂವಿಧಾನವು ವಿಶ್ವದ ಹಲವಾರು ರಾಷ್ಟ್ರಗಳ ಸಂವಿಧಾನಗಳಿಂದ ಅನೇಕ ಲಕ್ಷಣಗಳನ್ನು ಎರವಲು ಪಡೆದುಕೊಂಡಿದೆ. ಹಾಗಾಗಿ ನಮ್ಮ ಸಂವಿಧಾವನ್ನು “ಎರವಲು ಸಂವಿಧಾನ” (Borrowed Constitution) ಎನ್ನುವರು. ಅಮೇರಿಕಾದ ಸಂವಿಧಾನದಿಂದ ಪ್ರಸ್ತಾವನೆ, ಮೂಲಭೂತ ಹಕ್ಕುಗಳು, ನ್ಯಾಯಾಂಗದ ಸ್ವಾತಂತ್ರ್ಯ, ನ್ಯಾಯಿಕ ವಿಮರ್ಶೆ, ಇಂಗ್ಲೆಂಡಿನ ಸಂವಿಧಾನದಿಂದ ಸಂಸದೀಯ ಪದ್ಧತಿ, ಕಾನೂನಿನ ಅಧಿಪತ್ಯ, ಏಕಪೌರತ್ವ, ಹಿಂದಿನ ಸೋವಿಯತ್ ಒಕ್ಕೂಟದ ಸಂವಿಧಾನದಿಂದ ಮೂಲಭೂತ ಕರ್ತವ್ಯಗಳು, ಕೆನಡಾ ಸಂವಿಧಾನದಿಂದ ಒಕ್ಕೂಟ ವ್ಯವಸ್ಥೆಯ ಮಾದರಿ, ಫ್ರೆಂಚ್ ಸಂವಿಧಾನದಿಂದ ಪ್ರಸ್ತಾವನೆಯಲ್ಲಿರುವ ಸ್ವಾತಂತ್ರ, ಸಮಾನತೆ ಮತ್ತು ಭ್ರಾತೃತ್ವ, ದಕ್ಷಿಣ ಆಫ್ರಿಕಾದ ಸಂವಿಧಾನದಿಂದ ಸಂವಿಧಾನ ತಿದ್ದುಪಡಿ ವಿಧಾನಗಳನ್ನು ನಮ್ಮ ಸಂವಿಧಾನದಲ್ಲಿ ಅಳವಡಿಸಿಕೊಳ್ಳಲಾಗಿದೆ.
ತಿದ್ದುಪಡಿಗಳು;-
ನಮ್ಮ ಸಂವಿಧಾನದ 20ನೇ ಭಾಗದಲ್ಲಿರುವ 368ನೇ ವಿಧಿಯು ಸಂವಿಧಾನದ ತಿದ್ದುಪಡಿಯ ವಿಧಾನಗಳನ್ನು ತಿಳಿಸುತ್ತದೆ. ಈ ವಿಧಾನವನ್ನು ದಕ್ಷಿಣ ಆಫ್ರಿಕಾದ ಸಂವಿಧಾನದಿಂದ ಎರವಲಾಗಿ ಪಡೆಯಲಾಗಿದೆ. ಇದುವರೆಗೆ 104 ಬಾರಿ ನಮ್ಮ ಸಂವಿಧಾನವನ್ನು ತಿದ್ದುಪಡಿ ಮಾಡಲಾಗಿದೆ. ಮೊದಲ ತಿದ್ದುಪಡಿಯನ್ನು 10 ಮೇ1951ರಲ್ಲಿ ಮಾಡಲಾಯಿತು. ಕೊನೆಯ ತಿದ್ದುಪಡಿಯನ್ನು 25 ಜನವರಿ 2020ರಲ್ಲಿ ಮಾಡಲಾಯಿತು. ತಿದ್ದುಪಡಿಯಲ್ಲಿ ಲೋಕಸಭೆ ಮತ್ತು ರಾಜ್ಯಗಳ ಅಸೆಂಬ್ಲಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ & ಪಂಗಡಗಳಿಗೆ ಮೀಸಲಾತಿಯನ್ನು ಮತ್ತೆ ವರ್ಷಕ್ಕೆ ವಿಸ್ತರಿಸಲಾಯಿತು. ಹಾಗೆಯೇ ಲೋಕಸಭೆ ಮತ್ತು ರಾಜ್ಯ
ವಿಧಾನಸಭೆಗಳಲ್ಲಿ ಆಂಗ್ಲೋ-ಇಂಡಿಯನ್ ಸಮುದಾಯಕ್ಕೆ ಕಾಯ್ದಿರಿಸಿದ ಸ್ಥಾನಗಳನ್ನು ತೆಗೆದು ಹಾಕಲಾಗಿದೆ.
ಸಂವಿಧಾನ ದಿನಾಚರಣೆ;-
26 ನವೆಂಬರ್ 1949ರಂದು ನಮ್ಮ ಸಂವಿಧಾನಕ್ಕೆ ಸಂವಿಧಾನ ರಚನಾ ಸಮಿತಿಯು ಅಂಗೀಕಾರ ನೀಡಿತು. ಹಾಗಾಗಿ ಈ ದಿನ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಾಗೂ ಸಂವಿಧಾನ ಇತಿಹಾಸದಲ್ಲಿ ಮಹತ್ವದ ದಿನ. ಕಾರಣದಿಂದ ನವೆಂಬರ್ 26 ಅನ್ನು ಸಂವಿಧಾನ ದಿನ’ವನ್ನಾಗಿ 2015 ಆಚರಿಸಿಕೊಂಡು ಬರುತ್ತಿದ್ದೇವೆ. ಇದಕ್ಕೂ ಮೊದಲು ಈ ದಿನವನ್ನು ‘ರಾಷ್ಟ್ರೀಯ ಕಾನೂನು ದಿನ’ವನ್ನಾಗಿ ಆಚರಿಸಲಾಗುತ್ತಿತ್ತು. ಆದರೆ 2015 ಅಕ್ಟೋಬರ್ 11 ರಂದು ಪ್ರಧಾನಿ ನರೇಂದ್ರ ಮೋದಿಯವರು ಮುಂಬೈನಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ರವರ ಸ್ಮಾರಕಕ್ಕೆ ಅವರ 125ನೇ ಜನ್ಮದಿನಾಚರಣೆಯ ದಿನ ಅಡಿಗಲ್ಲು ಹಾಕುವ ಸಂದರ್ಭದಲ್ಲಿ ಅಂಬೇಡ್ಕರ್ರವರ ಚಿಂತನೆ ಮತ್ತು ಸಿದ್ದಾಂತ ಹಾಗೂ ಸಂವಿಧಾನದ ಪ್ರಾಮುಖ್ಯತೆಯನ್ನು ಸಾರುವ ಉದ್ದೇಶದಿಂದ ನವೆಂಬರ್ 26ನ್ನು ‘ಸಂವಿಧಾನ ದಿನ’ವನ್ನಾಗಿ ಆಚರಿಸಲು ಘೋಷಣೆ ಮಾಡಿದ್ದರು. ಹಾಗಾಗಿ ಅಂದಿನಿಂದ ನವೆಂಬರ್ 26ನ್ನು “ಸಂವಿಧಾನ ದಿನ” ವನ್ನಾಗಿ ಆಚರಿಸಿಕೊಂಡು ಬರುತ್ತಿದ್ದು, ಜನವರಿ 26 ನ್ನು ಸ್ವಾವಲಂಬನೆಯ ಸಂಕೇತವಾದ ಗಣರಾಜ್ಯ ದಿನವನ್ನಾಗಿ ಆಚರಿಸಿಕೊಂಡು ಬರುತ್ತಿದ್ದೇವೆ .
ಲೇಖನ : ಜಿ.ಆರ್.ಕೇಶವಮೂರ್ತಿ
ಉಪನ್ಯಾಸಕರು