ರೋಗಿ ಆಸ್ಪತ್ರೆಗೆ ಬಂದೊಡನೆ, ಕಿಸೆಯಲ್ಲಿನ ಪಾಕೆಟ್ ನ ಗಾತ್ರದ ಆಧಾರದ ಮೇಲೆ ಔಷಧಿ ಗೀಚುವ ವೈದ್ಯ ಜಗತ್ತಿನ ಕೆಲವು ಡಾಕ್ಟರ್ ಗಳ ನಡುವೆ, ಯಾವುದೇ ಅಪಾಯಂಟ್ಮೆಂಟು, ಟೋಕನ್ನು, ಪ್ರಿಸ್ಕ್ರಿಪ್ಷನ್ ಚೀಟಿಯ ಗದ್ದಲವಿಲ್ಲದ, ಸಿಮೆಂಟಿನ ಬಿಲ್ಡಿಂಗು, ತಿರುಗುವ ಕುರ್ಚಿಯ ತುರ್ತಿರದ, ಬಿಳಿ ಕೋಟು, ಸೆತಸ್ಕೋಪಿನ ಅನಿವಾರ್ಯ ಕ್ಕೆ ಒಳಗಾಗದ ಎಂತಹ ರೋಗಕ್ಕು ನಾಡಿ ಹಿಡಿದು, ಭಗವದ್ಗೀತೆಯ ಮಂತ್ರವೋ, ವಿವೇಕಾನಂದರ ವಾಣಿಯೋ ಮಣಮಣಿಸುತ್ತ , ಕೇವಲ ಕಷಾಯ, ಆಯುರ್ವೇದ ದ ಗುಳಿಗೆಯನ್ನಷ್ಟೇ ಕೈಗಿಡುತ್ತ, ನೂರು ಕೊಟ್ಟರೆ, ಅರವತ್ತೋ ಎಪ್ಪತ್ತೋ ಹಿಂದಿರುಗಿಸಿ 50 ಕ್ಕೂ ಹೆಚ್ಚು ವರ್ಷಗಳಿಂದ ಕುಂದಾಪುರ ಪರಿಸರದ ಜನರಿಗೆ ‘ಶಿವಪುರ್ ಡಾಕ್ಟ್ರ್’ ಎಂದೇ ಜನಜನಿತರಾಗಿರುವ ಡಾ| ಪಿ.ಎಸ್. ಆಚಾರ್ಯ ರು ಕನಸು ಹೊತ್ತು, ಸ್ಟೆತಸ್ಕೋಪ್ ಹೆಗಲೇರಿಸಿಕೊಳ್ಳುವ ಯುವ ವೈದ್ಯರಿಗೆ ಪ್ರೇರಣೆಯ ಸೆಲೆ.
ಆಧ್ಯಾತ್ಮಿಕ ಚಿಂತನೆ, ವಿವೇಕಾನಂದರ ಪ್ರೇರಣೆ ಮೈಗೂಡಿಸಿಕೊಂಡಿರುವ ಶ್ರೀಯುತರದ್ದು ಸರಳ ಬದುಕು. ಪ್ರತಿದಿನ ಮುಂಜಾನೆ ಸೈಕಲ್ಲೋ, ಇಲೆಕ್ರ್ಟಿಕ್ ಬೈಕೋ ಏರಿ ಮಡದಿಯೊಂದಿಗೆ ದವಾಖಾನೆಗೆ ಬರುವ ಆಚಾರ್ಯರು, ಕುಂದಾಪುರ ಪರಿಸರದ ಅದೆಷ್ಟೋ ಬಡವರ, ಹಿರಿಯ ಜೀವಗಳ, ನಿಶಕ್ತರ ಹೆರಿಗೆ, ಮಂಡಿನೋವು, ಬೆನ್ನು ನೋವಿಗೆ, ಇವರು ಅರೆಯುವ ಮದ್ದೇ ಜೀವಾಮೃತ. ಈಗಿನ ಆಧುನಿಕ ವೈದ್ಯರ ಕಂಡಿಷನ್ಸ್ ಅಪ್ಲ್ಯೇಸ್ ಸೇವೆಗಳ ನಡುವೆ, ಎಷ್ಷೇ ರಾತ್ರೀಯಾದರೂ ಮನೆಗೆ ಬಂದು ಬಡವರಿಗೆ ಸೇವೆ ನೀಡುತ್ತಿದ್ದ ಆಚಾರ್ಯ ರ ವೈದ್ಯ ಸೇವೆ ನಮ್ಮೂರ ಹಿರಿಯರ ಸ್ಮ್ರತಿಪಟಲ ದಲ್ಲಿ ಮಾಸದ ನೆನಪಾಗಿ ಇನ್ನೂ ಉಳಿದಿದೆ.
ಆಧ್ಯಾತ್ಮ, ಭೂತ ಪ್ರೇತ ಉಪದ್ರ, ತೀರ್ಥಯಾತ್ರೆಗಳ ಕುರಿತು ಪುಸ್ತಕಗಳನ್ನೂ ಪ್ರಕಟಿಸಿರುವ ಹಿರಿಯರು, ತಮ್ಮ ಜ್ಞಾನ, ಅನುಭವಗಳ ಆಧಾರದ ಮೇಲೆ, ಅನೇಕ ರೋಗಗಳಿಗೆ ಸ್ವತಃ ತಾವೇ ಔಷಧಿಗಳನ್ನು ಸಿದ್ಧಪಡಿಸಿ, ಪ್ರಯೋಗಗಳನ್ನು ನಡೆಸಿ ಯಶಸ್ಸನ್ನೂ ಕಂಡಿದ್ದಾರೆ. ಜ್ವರ, ತಲೆನೋವು, ಹೊಟ್ಟೆ ನೋವಿನಂತಹ ಭಾಧೆಗಳಿಗೆ ದವಾಖಾನೆಗೆ ಬರುವ ರೋಗಿಗಳಿಗೆ ಸ್ಥಳದಲ್ಲೇ ಒಂದು ಚಿಕ್ಕಲೋಟಿಯಲ್ಲಿ ಕಷಾಯವನ್ನು ಕೊಟ್ಟು, ಆಯುರ್ವೇದದ ಗುಳಿಗೆಗಳನ್ನು ಅಲ್ಲಿಯೇ ನುಂಗಿಸಿ ಕಳುಹಿಸುವ ಆಚಾರ್ಯರ ಶುಶ್ರೂಷೆ ಯ ಶೈಲಿ ವಿಭಿನ್ನವೇ ಸರಿ.
ಕೇವಲ ಜ್ವರ ತಲೆ ನೋವು ಮಾತ್ರವಲ್ಲದೆ, ಹೃದಯ , ಮೆದುಳು ಸಂಬಂಧಿ ಖಾಯಿಲೆ, ಮೂಳೆ ಮುರಿತ, ಇನ್ನಿತರ ಗಂಭೀರ ಕಾಯಿಲೆಗಳಿಗೂ ಇವರಲ್ಲಿ ಮದ್ದು ಸಿದ್ಧವಿರುತ್ತದೆ. ಜಗತ್ತು ಕರೋನ ರೋಗಕ್ಕೆ ಲಸಿಕೆಗಾಗಿ ಜಡಪಡುತ್ತಿದ್ದರೆ, ಆಚಾರ್ಯರೂ ಇತ್ತ ಕರೋನಕ್ಕೂ ಮದ್ದೆರೆಯುವ ಕಾರ್ಯದಲ್ಲಿ ತೊಡಗಿದ್ದಾರೆ. ಕೇವಲ ಕುಂದಾಪುರ ಪರಿಸರದ ಮಂದಿ ಮಾತ್ರವಲ್ಲದೇ ಘಟ್ಟದ ಮೇಲಿನ ಮಂದಿಯೂ ಆಚಾರ್ಯರಲ್ಲಿಗೆ ಬಂದು ಮದ್ದು ಪಡೆದು ಮಧ್ಯಾಹ್ನದ ಬಸ್ಸನ್ನೇರಿ ಹೊರಡುವುದು ಆಚಾರ್ಯರ ವೈದ್ಯಸೇವೆಯ ಖ್ಯಾತಿಗೆ ಹಿಡಿದ ಕೈಗನ್ನಡಿ.
ವೈದ್ಯರು ದೇವರ ಪ್ರತಿರೂಪ, ವೈದ್ಯರಿಗೆ ಮರುಜನ್ಮ ನೀಡುವ ಶಕ್ತಿಯಿದೆ. ವೈದ್ಯರಲ್ಲೆ ಭಗವಂತನನ್ನು ಕಾಣುವ ಜನರಿಗೆ, ಚಿಕಿತ್ಸೆಯ ಹೆಸರಲ್ಲಿ, ವಸೂಲಿಗಿಳಿಯುವ ಕೆಲವು ವೈದ್ಯರು, ಆಸ್ಪತ್ರೆ ಗಳ ನಡುವೆ, ಸ್ವಾರ್ಥ, ಹಣ ಸಂಪಾದನೆ, ಕೀರ್ತಗಳಿಸುವಿಕೆಯ ಗೀಳು ಇಂದಿಗೂ ಆಚಾರ್ಯರತ್ತ ಸುಳಿದಿಲ್ಲ. ಕನಸು ಹೊತ್ತು ಜನಸೇವೆಗೆ ಬರುವ, ಬಂದಿರುವ ಲಕ್ಷಾಂತರ ವೈದ್ಯರಿಗೆ ಡಾ| ಪಿ.ಎಸ್. ಆಚಾರ್ಯ ರು ಜೀವಂತ ಪ್ರೇರಣೆ, ಉದಾಹರಣೆ.
ಶ್ರೀಯುತರ ವೈದಕೀಯ ಸೇವೆ ಹೀಗೇ ನಿರಂತರವಾಗಿರಲಿ. ಭಗವಂತ ನಿಮಗಿನ್ನಷ್ಟು ಆರೋಗ್ಯ, ಆಯಸ್ಸು ನೀಡಲಿ.
ನಿಮ್ಮ ಜನ ಸೇವೆಗೆ ನನ್ನದೊಂದು ನಮನ…🙏
ಲೇಖನ : ಶಿವಪ್ರಸಾದ್ ವಕ್ವಾಡಿ