ಕುಂದಾಪುರ (ಡಿ.15): ಕುಂದಗನ್ನಡ ಭಾಷೆ ಹಾಗೂ ಸಂಸ್ಕೃತಿ ಬಹಳ ವೈಶಿಷ್ಟ್ಯ ಪೂರ್ಣವಾಗಿದ್ದು, ತನ್ನದೇ ಆದ ಸ್ವಂತಿಕೆ ಮತ್ತು ಅಸ್ಮಿತೆಯನ್ನು ಹೊಂದಿರುವ ಕುಂದಾಪುರದ ಪ್ರಾದೇಶಿಕ ಭಾಷೆ ,ಸಂಸ್ಕೃತಿ ಸಂಪ್ರದಾಯ, ಆಚಾರ ,ವಿಚಾರಗಳು ಈ ಮಣ್ಣಿನಲ್ಲಿ ಅಡಗಿದ್ದು ಅದನ್ನು ಸಂಶೋಧನೆ ಮುಖಾಂತರ ಹೊರತೆಗೆಯುವ ಪ್ರಯತ್ನವನ್ನು ವಿದ್ಯಾರ್ಥಿಗಳು ಮಾಡಬೇಕೆಂದು ಸರಕಾರಿ ಪ್ರೌಢಶಾಲೆ ಹಕ್ಲಾಡಿ ಇದರ ಕನ್ನಡ ಶಿಕ್ಷಕರು ಹಾಗೂ ಸಂಶೋಧಕರಾದ ಡಾ. ಕಿಶೋರ್ ಕುಮಾರ್ ಶೆಟ್ಟಿ ಹೇಳಿದರು.
ಅವರು ಡಾ| ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ ಇಲ್ಲಿನ ಕುಂದಗನ್ನಡ ಸಂಘ, ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಅವನಿ ಪ್ರಕಾಶನ ಮಂಗಳೂರು ಡಿ.14 ರಂದು ಕಾಲೇಜಿನ ಮುಕಾಂಬಿಕಾ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ವಿದ್ಯಾರ್ಥಿಗಳು ಕುಂದಗನ್ನಡ ಸಂಸ್ಕೃತಿಯ ಸಂಶೋಧನೆಯಲ್ಲಿ ತೊಡಗಿಕೊಳ್ಳುವುದರ ಮೂಲಕ ಕುಂದಗನ್ನಡದ ಮಹತ್ವವನ್ನು ಎತ್ತಿ ಹಿಡಿಬೇಕು ಎಂದು ಅವರು ಕರೆ ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ .ಉಮೇಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಲೇಜಿನ ಉಪ ಪ್ರಾಂಶುಪಾಲರು ಹಾಗೂ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಶ್ರೀ ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿದರು. ಅವನಿ ಪ್ರಕಾಶನ ಮಂಗಳೂರು ಇದರ ಪ್ರಕಾಶಕರಾದ ಶ್ರೀಪತಿ ಆಚಾರ್ಯ ಪ್ರಾಸ್ತಾವಿಸಿದರು. ಕಾಲೇಜಿನ ಎನ್ಎಸ್ಎಸ್ ನಿಕಟಪೂರ್ವ ಕಾರ್ಯಕ್ರಮಾಧಿಕಾರಿ, ಉಪನ್ಯಾಸಕ ಪ್ರವೀಣ್ ಮೊಗವೀರ ಗಂಗೊಳ್ಳಿ ಬಹುಮಾನ ವಿಜೇತರ ವರದಿಯನ್ನು ವಾಚಿಸಿದರು.
ಎನ್ಎಸ್ಎಸ್ ಸಹ ಕಾರ್ಯಕ್ರಮಾಧಿಕಾರಿ ದೀಪಾ ಪೂಜಾರಿ ,ಕುಂದಗನ್ನಡ ಸಂಘದ ಸಂಯೋಜಕಿ ವಿನಯಾ ಶೆಟ್ಟಿ ಉಪಸ್ಥಿತರಿದ್ದರು .ವಿದ್ಯಾರ್ಥಿನಿ ರಾಜೇಶ್ವರಿ ಸಂಪನ್ಮೂಲ ವ್ಯಕ್ತಿಯನ್ನು ಸಭೆಗೆ ಪರಿಚಯಿಸಿದರು. ವಿದ್ಯಾರ್ಥಿನಿ ಮೇಘನಾ ವಂದಿಸಿ , ಶಶಿಕಲಾ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಗೀತಾ ಗಾಯನ ತಂಡದ ವಿದ್ಯಾರ್ಥಿಗಳು ನಾಡ ಗೀತೆ ಹಾಡಿದರು. ಅವನಿ ಪ್ರಕಾಶನ ಮಂಗಳೂರು ಇವರು ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಹಮ್ಮಿಕೊಂಡ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆಯನ್ನು ಈ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಯಿತು.