ಕುಂದಾಪುರ( ಜ,3): ವಿದ್ಯಾರ್ಥಿಗಳಿಗೆ ಸೂಕ್ತ ಕಾನೂನು ಮಾಹಿತಿ ಇದ್ದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಎಲ್ಲರೂ ಪೂರ್ಣವಾದ ಕಾನೂನಿನ ಅರಿವು ಪಡೆಯಲು ಸಾಧ್ಯವಿಲ್ಲ ಆದರೂ ನಿಯಮಿತ ಕಾನೂನಿನ ಅರಿವು ಕ್ಲಪ್ತ ಸಮಯದಲ್ಲಿ ನೀಡುವುದು ಅವಶ್ಯಕ ಎಂದು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಕುಂದಾಪುರದ ನ್ಯಾಯವಾದಿಗಳಾದ ಶ್ರೀ ವಿಶ್ವನಾಥ ಶೆಟ್ಟಿ ಗಂಟಿಹೊಳೆ ಹೇಳಿದರು.
ಇವರು ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರದ 3 ನೇ ದಿನದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ‘ವಿದ್ಯಾರ್ಥಿಗಳಲ್ಲಿ ಕಾನೂನಿನ ಅರಿವು’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಸಂಪನ್ಮೂಲ ಕೇಂದ್ರ, ಬೈಂದೂರು, ಕ್ಷೇತ್ರ ಸಮನ್ವಯಧಿಕಾರಿಯಾದ ಶ್ರೀ ಕರುಣಾಕರ ಶೆಟ್ಟಿ (ಬಿ.ಆರ್.ಸಿ.) ವಿದ್ಯಾರ್ಥಿಗಳ ಸೂಕ್ತ ಪ್ರತಿಭೆಯ ಅನಾವರಣಕ್ಕೆ ಎನ್.ಎಸ್.ಎಸ್. ಎನ್ನುವುದು ಮಹತ್ವದ ಪಾತ್ರವಹಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬವಳಾಡಿಯ ಸಹ ಶಿಕ್ಷಕರಾದ ಶ್ರೀ ಶೇಖರ ಶೆಟ್ಟಿ, ಬವಳಾಡಿ ಶಾಲೆಯ ಎಸ್.ಡಿ.ಎಮ್.ಸಿ. ಸದಸ್ಯರಾದ ಶ್ರೀಮತಿ ಜ್ಯೋತಿ, ಬವಳಾಡಿ ಶಾಲೆಯ ಪ್ರಾಕ್ತನ ವಿದ್ಯಾರ್ಥಿ ಶ್ರೀ ಉದಯ ಮಿಯ್ಯಾಣಿ, ನವಗ್ರಾಮ, ಬವಳಾಡಿಯ ಶ್ರೀ ರಾಘವೇಂದ್ರ ನಾಯ್ಕ್, ಶ್ರೀ ಸತೀಶ್ ಪೂಜಾರಿ, ಕಾಡಿನತಾರು, ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ, ಶಿಬಿರಾಧಿಕಾರಿ ಶ್ರೀ ಚೇತನ್ ಶೆಟ್ಟಿ ಕೋವಾಡಿ, ಸಹ ಶಿಬಿರಾಧಿಕಾರಿ ದೀಪಾ ಪೂಜಾರಿ ಉಪಸ್ಥಿತರಿದ್ದರು.
ಶಿಬಿರಾಧಿಕಾರಿ ಶ್ರೀ ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಸಿದರು, ಶಿಬಿರಾರ್ಥಿಗಳಾದ ಶ್ರೀನಾಭ ಎಸ್. ಉಪಾಧ್ಯ ಸ್ವಾಗತಿಸಿ, ಚೈತನ್ಯ ಅತಿಥಿಗಳನ್ನು ಪರಿಚಯಿಸಿ, ವೈಷ್ಣವಿ ವಂದಿಸಿ, ಶ್ರದ್ದಾ ನಿರೂಪಿಸಿದರು.