ಕುಂದಾಪುರ(,ಮಾ.28):ಇಲ್ಲಿನ ಡಾ.ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ಜನಸೇವಾ ಟ್ರಸ್ಟ್ ಮೂಡುಗಿಳಿಯಾರು ಆಶ್ರಯದಲ್ಲಿ ‘ಹಸ್ತಿನಾವತಿ’ ಕಾದಂಬರಿಯ ಮರು ಅನಾವರಣ ಕಾರ್ಯಕ್ರಮ ಮಾ.26 ರಂದು ನಡೆಯಿತು.
ಬೆಂಗಳೂರು ವಿಶ್ವವಿದ್ಯಾಲಯದ ವಿತ್ತಾಧಿಕಾರಿ ಅಜಿತ್ ಹೆಗ್ಡೆ ಶಾನಾಡಿಯವರು ಜೋಗಿಯವರ ಹಸ್ತಿನಾವತಿ ಕಾದಂಬರಿ ಅನಾವರಣಗೊಳಿಸಿ ಮಾತನಾಡಿದರು. ಈ ಕೃತಿಯಲ್ಲಿ ರಾಜಕೀಯ, ಧಾರ್ಮಿಕ, ಪ್ರೇಮಕತೆ ಎಲ್ಲವೂ ಇದೆ. ಮುಖ್ಯವಾಗಿ ಯುವ ಸಮುದಾಯ ಓದಬೇಕಾದ ಪುಸ್ತಕವಿದು. ಓದುಗರನ್ನು ಬಿಡದಂತೆ ಓದಿಸಿಕೊಂಡು ಹೋಗುವ ಕಲೆ ಜೋಗಿಯವರಿಗೆ ಜನ್ಮತಃ ಸಿದ್ಧಿಯಾಗಿದೆಎಂದರು.
ಬದುಕಿನ ವಿಭಿನ್ನ ಪಾತ್ರಗಳನ್ನು ಅನುಭವಿಸುವ ನಿಜ ಸಂತೋಷವನ್ನು ಕೊಡುವ ಕಾದಂಬರಿಗಳನ್ನು ಬರೆಯುವಾಗ ಪ್ರತಿ ಬಾರಿಯೂ ಹೊಸ ಹೊಸ ಅನುಭೂತಿಗಳಾಗುತ್ತದೆ ಎಂದು ಸಾಹಿತಿ, ಹಿರಿಯ ಪತ್ರಕರ್ತ ಜೋಗಿ ಯವರು ಹಸ್ತಿನಾವತಿ ಕಾದಂಬರಿಯ ಮರು ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ| ಕೊತ್ತಾಡಿ ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಪುಸ್ತಕದ ಒಳನೋಟ ತೆರೆದಿಟ್ಟರು. ವಕೀಲ ಸತೀಶ್ಚಂದ್ರ ಕಾಳಾವರ್ಕರ್ ಹಾಗೂ ನಿರೂಪಕ ರಾಘವೇಂದ್ರ ಕಾಂಚನ್ ಮಾತನಾಡಿದರು.
ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳ ಜತೆ ಜೋಗಿ ಅವರ ಸಂವಾದ ನಡೆಯಿತು. ರಾಘವೇಂದ್ರ ರಾಜ್ ಸಾಸ್ತಾನ ವಂದಿಸಿದರು. ರಾಜೇಶ್ ಕೆ.ಸಿ ನಿರೂಪಿಸಿದರು.