ಕುಂದಾಪುರ. ಜೂನ್ 26. ಕುಂದಾಪುರ ತಾಲೂಕು ಯುವ ಬಂಟರ ಸಂಘದ ದಶಮ ಸಂಭ್ರಮ ಆಚರಣೆಯ ಅಂಗವಾಗಿ ಹಸಿರು ಹೊನ್ನು ಎಂಬ ಯೋಜನೆಯನ್ನು ರೂಪಿಸಲಾಗಿದ್ದು ಮುಖ್ಯವಾಗಿ ವೈವಿಧ್ಯಮಯ ಗಿಡಗಳನ್ನು ನೆಟ್ಟು ಬೆಳೆಸುವ ಕಾಯಕದಲ್ಲಿ ಯುವ ಜನಾಂಗ ಹೆಚ್ಚು ಸಕ್ರಿಯವಾಗಿ ತೊಡಗಿ ಕೊಳ್ಳುವಂತಾಗಬೇಕು ಎಂಬ ಗುರಿಯನ್ನು ಇರಿಸಿಕೊಂಡು ಜೂನ್ 28 ರ ಬುಧವಾರ ಮಧ್ಯಾಹ್ನ 2.00 ಗಂಟೆಗೆ ಆರ್. ಎನ್. ಶೆಟ್ಟಿ ಸಭಾಭವನದಲ್ಲಿ 1000 ಹೈಬ್ರೀಡ್ ಸಿಹಿ ಫಲದ ಗಿಡಗಳ ವಿತರಣೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಪರಿಸರ ಕಾಳಜಿ ಕೇವಲ ಘೋಷಣೆ ಮತ್ತು ವೇದಿಕೆಯ ಮಾತುಗಳಿಗೆ ಮಾತ್ರ ಮಿತಗೊಳ್ಳಬಾರದು. ಬದಲಾಗಿ ಅದು ನಿತ್ಯದ ಬದುಕಿನ ಒಡನಾಡಿಯಾಗಬೇಕೆಂಬ ಮಹತ್ವದ ಕಾಳಜಿಯೊಂದಿಗೆ ಈ ಕಾರ್ಯಕ್ರಮವನ್ನು ಸಂಘಟಿಸಲಾಗಿದೆ. ಮನೆಗೊಂದು ಗಿಡ- ಯುವ ಸಮೂಹದ ಸಂಗಡ ಎಂಬ ಧ್ಯೇಯ ಪರಿಕಲ್ಪನೆಯಡಿ ಈ ಕಾರ್ಯಕ್ರಮ ನಡೆಯಲಿದ್ದು ಸಂಘದ ವತಿಯಿಂದ 1000 ಹೈಬ್ರೀಡ್ ಸಿಹಿ ಫಲದ ಗಿಡಗಳನ್ನು ಉಚಿತವಾಗಿ ಹಂಚಿಕೆ ಮಾಡಲಾಗುವುದು. ಕುಂದಾಪುರದ ಡಾIಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಭಂಡಾಕಾರ್ಸ್ ಕಾಲೇಜು, ಶ್ರೀ ಕಾಳಾವರ ವರದರಾಜ್ ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಶ್ರೀ ಶಾರದಾ ಕಾಲೇಜು ಬಸ್ರೂರು ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ 1000 ಮಂದಿ ಸ್ವಯಂಸೇವಕ ವಿದ್ಯಾರ್ಥಿಗಳು ಈ ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮವನ್ನು ಮೈಸೂರು ಮರ್ಕಂಟೈಲ್ಸ್ ಕಂಪನಿ ಲಿಮಿಟೆಡ್ ಬೆಂಗಳೂರುನ ಆಡಳಿತ ನಿರ್ದೇಶಕರಾದ ಶ್ರೀ ಎಚ್.ಎಸ್. ಶೆಟ್ಟಿ ಉದ್ಘಾಟನೆ ಮಾಡಲಿದ್ದು, ಅಧ್ಯಕ್ಷತೆಯನ್ನು ಕುಂದಾಪುರ ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷರಾದ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ವಹಿಸಲಿದ್ದಾರೆ. ಪರಿಸರ ಪ್ರೇಮಿ ಶ್ರೀ ಮಥಾಯಿಸ್ ಡೇಸಾ ಅವರನ್ನು ಸಭಾ ಕಾರ್ಯಕ್ರಮದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಸಂಚಾಲಕರಾದ ಶ್ರೀ ಆವರ್ಸೆ ಸುಧಾಕರ ಶೆಟ್ಟಿ ಸನ್ಮಾನಿಸಲಿದ್ದು, ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರಿನ ಜೊತೆ ಕಾರ್ಯದರ್ಶಿ ಶ್ರೀ ಸಂಪಿಗೇಡಿ ಸಂಜೀವ ಶೆಟ್ಟಿ ವೃಕ್ಷಾರೋಪಣಕ್ಕೆ ಚಾಲನೆ ನೀಡಲಿದ್ದಾರೆ.
ಬಂಟರ ಯಾನೆ ನಾಡವರ ಮಾತೃ ಸಂಘ ಬೈಂದೂರಿನ ಅಧ್ಯಕ್ಷರಾದ ಎಚ್ .ವಸಂತ್ ಹೆಗ್ಡೆ ಶುಭಶಂಸನೆಗೈಯಲ್ಲಿದ್ದು, ಡಾ. ಬಿ. ಬಿ. ಹೆಗ್ಡೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ, ಭಂಡಾಕಾರ್ಸ್ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್.ಪಿ .ನಾರಾಯಣ್ ಶೆಟ್ಟಿ, ಕಾಳವರ ವರದರಾಜ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಜೇಂದ್ರ ನಾಯಕ್, ಶ್ರೀ ಶಾರದಾ ಕಾಲೇಜು ಬಸ್ರೂರುನ ಪ್ರಾಂಶುಪಾಲರಾದ ಡಾ. ಚಂದ್ರಾವತಿ ಶೆಟ್ಟಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಈ ಪರಿಸರ ಕಾಳಜಿಯ ವಿಶಿಷ್ಟ ಕಾರ್ಯಕ್ರಮದಲ್ಲಿ ಜಾತಿ ಮತ ಪರಿಬೇದವಿಲ್ಲದೆ ಎಲ್ಲರೂ ಒಗ್ಗೂಡಿ ಪಾಲ್ಗೊಳ್ಳುವಂತೆ ಹಾಗೂ ಉಚಿತವಾಗಿ ವಿತರಿಸಲಾಗುವ ಸಿಹಿಫಲದ ಗಿಡಗಳನ್ನು ಸಾರ್ವಜನಿಕರು ಸಹ ಪಡೆದುಕೊಳ್ಳುವಂತೆ ಸಂಘದ ಗೌರವಾಧ್ಯಕ್ಷರಾದ ಬಿ. ಉದಯ್ ಕುಮಾರ್ ಶೆಟ್ಟಿ ಅಧ್ಯಕ್ಷರಾದ ಡಾ. ಅಂಪಾರು ನಿತ್ಯಾನಂದ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ನಿತೀಶ್ ಶೆಟ್ಟಿ ಬಸ್ರೂರು, ಕೋಶಾಧಿಕಾರಿ ಅಕ್ಷಯ ಹೆಗ್ಡೆ ಮೊಳಹಳ್ಳಿ ಹಾಗೂ ಕಾರ್ಯಕ್ರಮದ ಸಂಚಾಲಕರಾದ ಶ್ರೀ ಮುರಳೀಧರ ಶೆಟ್ಟಿ ಹುಯ್ಯಾರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.