ಕುಂದಾಪುರ (ಜುಲೈ 06): ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರದಲ್ಲಿ ಆಯೋಜಿಸಿದ್ದ ಮೆಗಾ ಪ್ಲೇಸ್ಮೆಂಟ್ ಡೈವ್ ಯಶಸ್ವಿಯಾಗಿ ನಡೆಯಿತು.
ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಹುಂತ್ರಿಕೆ ಸುಧಾಕರ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಮಾತನಾಡಿ, ಅಂತಿಮ ಪದವಿ ತರಗತಿಯ ಎಲ್ಲಾ ಪ್ರಶಿಕ್ಷಣಾರ್ಥಿಗಳಿಗೆ ಉದ್ಯೋಗವಕಾಶಗಳನ್ನು ಒದಗಿಸುವ ಗುರಿ ನಮ್ಮ ಸಂಸ್ಥೆಯದ್ದಾಗಿದ್ದು ವಿದ್ಯಾರ್ಥಿಗಳು ಇದರ ಸಂಪೂರ್ಣ ಪ್ರಯೋಜನ ಪಡೆಯಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಮಣಿಪಾಲ್ ಟೆಕ್ನಾಲಜಿಸ್ ಲಿಮಿಟೆಡ್ನ ಹೆಚ್ಆರ್ ಶ್ರೀಮತಿ ವಿದ್ಯಾ ಶೆಣೈ ಹಾಗೂ ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀ ಚೇತನ್ ಶೆಟ್ಟಿ ಕೋವಾಡಿ ಉಪಸ್ಥಿತರಿದ್ದರು.
ಈ ಉದ್ಯೋಗ ಮೇಳದಲ್ಲಿ ಸುಮಾರು 450 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪ್ರತಿಷ್ಠಿತ ಕಂಪೆನಿಗಳಾದ ಮಣಿಪಾಲ್ ಟೆಕ್ನಾಲಜೀಸ್, ಟೊಯೋಟಾ ಕಿರ್ಲೋಸ್ಕರ್, ಮದರ್ಸನ್ ನಂದಿ ಮೋರ್ಸ್, ಮದರ್ಸನ್ ನಂದಿ ಟೆಕ್ನಾಲಜಿಸ್ ಎಂಡ್ ಇಂಜಿನಿಯರಿoಗ್, ಬಜಾಜ್ ಎಲೆಯನ್ಸ್, ಜಸ್ಟ್ ಡಯಲ್, ಮುತೂಟ್ ಫೈನಾನ್ಸ್ ಹಾಗೂ ಇನ್ನೂ ಅನೇಕ ಕಂಪನಿಗಳು ಭಾಗವಹಿಸಿದ್ದವು.
ವೃತ್ತಿ ಮಾರ್ಗದರ್ಶನ ಘಟಕದ ಅಧಿಕಾರಿಗಳಾದ ಶ್ರೀ ರಜತ್ ಬಂಗೇರ ಅತಿಥಿಗಳನ್ನು ಪರಿಚಯಿಸಿ, ಶ್ರೀ ಮಹೇಶ್ ಕುಮಾರ್ ವಂದಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶ್ರೀಮತಿ ವೀಣಾ ಭಟ್ ಕಾರ್ಯಕ್ರಮ ನಿರೂಪಿಸಿದರು.