ಗಂಗೊಳ್ಳಿ(ಜು12) : ಒಂದು ಸಮುದಾಯದ ಅಭಿವೃದ್ಧಿಯಲ್ಲಿ ಪರಸ್ಪರ ಸಹಕಾರ ಪ್ರೀತಿ ವಿಶ್ವಾಸ ಮತ್ತು ಸ್ವಾವಲಂಬನೆ ಕೂಡ ಬಹಳ ಮಹತ್ವದ ಪಾತ್ರವನ್ನು ವಹಿಸುತ್ತದೆ. ಸಮಾಜದ ಅಭಿವೃದ್ಧಿಗಾಗಿ ದುಡಿಯುವ ಮನಸ್ಸುಗಳನ್ನು ಸಮಾಜ ಯಾವತ್ತೂ ಸ್ಮರಿಸುತ್ತದೆ ಎಂದು ಉಪ್ಪುಂದದ ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ಪ್ರವರ್ತಕರಾದ ಗೋವಿಂದ ಬಾಬು ಪೂಜಾರಿಯವರು ಅಭಿಪ್ರಾಯಪಟ್ಟರು.
ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಸಭಾಂಗಣದಲ್ಲಿ ನಡೆದ ಗಂಗೊಳ್ಳಿಯ ಬಿಲ್ಲವರ ಹಿತರಕ್ಷಣಾ ವೇದಿಕೆಯ ಎರಡನೇ ವರ್ಷದ ಮಹಾಸಭೆ ಮತ್ತು ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಒಗ್ಗಟ್ಟು ಇರುವಲ್ಲಿ ಸಂಘಟನೆಯ ಯಶಸ್ಸು ಸಾಧ್ಯವಾಗುತ್ತದೆ. ಸಮಾಜಮುಖಿ ಕಾರ್ಯಕ್ರಮಗಳು ಸಂಸ್ಥೆಯ ಹೆಸರನ್ನು ಶಾಶ್ವತವಾಗಿಸುತ್ತವೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಸಾಧು ಬಿಲ್ಲವ, ನಿವೃತ್ತ ವಾಯು ಸೇನಾ ಸೈನಿಕ ಮಂಜುನಾಥ ಪೂಜಾರಿ ಕೊಟೇಶ್ವರ, ಮತ್ಸೋದ್ಯಮಿ ಸಂಜೀವ ಬಿಲ್ಲವ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಡಾ. ಗೋವಿಂದ ಬಾಬು ಪೂಜಾರಿ ಮತ್ತು ಮಂಜುನಾಥ ಪೂಜಾರಿ ಇವರನ್ನು ಅಭಿನಂದಿಸಿ ಗೌರವಿಸಲಾಯಿತು.
ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ಗಂಗೊಳ್ಳಿಯ ಬಿಲ್ಲವ ಸಮುದಾಯದ ಸಾಧಕ ವಿದ್ಯಾರ್ಥಿಗಳಾದ ಶ್ರೀನಿಧಿ ಪೂಜಾರಿ, ರೀತು ಪೂಜಾರಿ, ಸೃಷ್ಟಿ, ಅನೂಪ್ ಪೂಜಾರಿ ಮತ್ತು ಶ್ರೇಯಸ್ ಪೂಜಾರಿಯವರನ್ನು ಸನ್ಮಾನಿಸಲಾಯಿತು. ಬಿಲ್ಲವ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.
ಬಿಲ್ಲವರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ಗೋಪಾಲ ಪೂಜಾರಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಜಿಎಆರ್. ಲಕ್ಷ್ಮಣ ಪೂಜಾರಿ ಸ್ವಾಗತಿಸಿದರು. ಮಂಜು ರಾಜ್ ಗಂಗೊಳ್ಳಿ ಆಯವ್ಯಯ ಪಟ್ಟಿ ಮಂಡಿಸಿದರು. ಗಣೇಶ್ ಪೂಜಾರಿ ವರದಿ ವಾಚಿಸಿದರು. ಅಕ್ಷತಾ ವಿನಯ್ ಪ್ರಾರ್ಥಿಸಿದರು. ಆಕಾಶ್ ಪೂಜಾರಿ ವಂದಿಸಿದರು. ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಕಾರ್ಯಕ್ರಮವನ್ನು ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಸರಸ್ವತಿ ವಿದ್ಯಾಲಯದ ಪ್ರಾಕ್ತನ ಮತ್ತು ಪ್ರಸ್ತುತ ವಿದ್ಯಾರ್ಥಿಗಳು ಅಭಿನಯಿಸಿದ ನರೇಂದ್ರ ಎಸ್ ಗಂಗೊಳ್ಳಿ ನಿರ್ದೇಶನದ ಮರಣಿ ಮಾಂಟೆ ನಾಟಕ ಪ್ರದರ್ಶನಗೊಂಡಿತು. ವರದಿ: ನರೇಂದ್ರ ಎಸ್ ಗಂಗೊಳ್ಳಿ