ಕುಂದಾಪುರ (ಜುಲೈ 17): ಸಾಹಿತ್ಯದ ಓದು ಅರಿವಾಗಿ ಅದು ಬೆಳಕಾದಾಗ ಮಾತ್ರ ಓದಿಗೆ ಬೆಲೆ. ಅದರೊಂದಿಗೆ ಬದುಕಿನ ವಾಸ್ತವವನ್ನು ಅರ್ಥೈಸಿಕೊಂಡು ನಮ್ಮ ಎಲ್ಲೆಗಳನ್ನು ಮೀರುವ ಪ್ರಯತ್ನ ಮಾಡುವ ಅರಿವು ಸಾಹಿತ್ಯದಿಂದ ಮೂಡಿದಾಗ ಬದುಕಿನ ಚಿರಂತನ ದರ್ಶನ ಸಾಧ್ಯ ಎಂದು ಡಾ| ಜಿ. ಶಂಕರ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಉಡುಪಿಯ ಕನ್ನಡ ಪ್ರಾಧ್ಯಾಪಕ ಡಾ| ರವಿರಾಜ್ ಶೆಟ್ಟಿ ಹೇಳಿದರು.
ಇವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಆಯೋಜಿಸಿದ ಬೆಳದಿಂಗಳ ಚಿಂತನ ಮಾಲಿಕೆ-3ರಲ್ಲಿ “ಜೀವನ ದರ್ಶನ ಮತ್ತು ಸಾಹಿತ್ಯ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿಯವರು ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲರು ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿ, ಪ್ರಾಸ್ತಾವಿಸಿದರು. ವಾಣಿಜ್ಯ ಉಪನ್ಯಾಸಕಿ ದೀಪಾ ಪೂಜಾರಿ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಇಂಗ್ಲೀಷ್ ಉಪನ್ಯಾಸಕರಾದ ಶ್ರೀಮತಿ ದೀಪಿಕಾ ಜಿ. ಹಾಗೂ ಮೋನಿಕಾ ಡಿಸೋಜ ಭಾವಗೀತೆ ಹಾಡಿದರು. ಕನ್ನಡ ವಿಭಾಗದ ಉಪನ್ಯಾಸಕರಾದ ಶ್ರೀ ಸುಕುಮಾರ್ ಶೆಟ್ಟಿ ಕಮಲಶಿಲೆ ವಂದಿಸಿ, ಶ್ರೀಮತಿ ರೇಷ್ಮಾ ಶೆಟ್ಟಿ ನಿರೂಪಿಸಿದರು.