ಕುಂದಾಪುರ (ಆ,06): ವಿದ್ಯಾರ್ಥಿ ದೆಸೆಯಲ್ಲಿಯೇ ಉದ್ಯಮಶೀಲತೆಯ ಕೌಶಲ್ಯಗಳನ್ನು ಬೆಳೆಸುವ ಸಲುವಾಗಿ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ವತಿಯಿಂದ ಪ್ರಥಮ ವರ್ಷದ ಬಿಬಿಎ ವಿದ್ಯಾರ್ಥಿಗಳಿಗೆ ವೈಬ್ರೆಂಟ್ ಸ್ಟಾರ್ಟ್ ಅಪ್@ Rs100 ಸ್ಪರ್ಧೆಯನ್ನು ಆಯೋಜಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ ಉಮೇಶ್ ಶೆಟ್ಟಿಯವರು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಕಾಲೇಜಿನ ಉಪ ಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ ಶುಭ ಹಾರೈಸಿದರು. ವಿಭಾಗದ ಮುಖ್ಯಸ್ಥರಾದ ನಂದಾ ರೈ ಉಪಸ್ಥಿತರಿದ್ದರು.
ನೂರು ರೂಪಾಯಿ ಒಳಗಿನ ಮೊತ್ತದ ಕಚ್ಚಾ ವಸ್ತುಗಳನ್ನು ಖರೀದಿಸಿ ಅದನ್ನು ಸಿದ್ಧ ವಸ್ತುಗಳಾಗಿ ಪರಿವರ್ತಿಸಿ, ಮಾರಾಟ ಮಾಡಲು ನಿರ್ದಿಷ್ಟ ಬೆಲೆ ನಿಗದಿಪಡಿಸಿ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ತಲುಪಿಸುವುದರ ಜೊತೆಗೆ ಹೊಸ ಉದ್ಯಮವನ್ನು ಪ್ರಾರಂಭಿಸುವ ಕುರಿತಾದ ಸ್ಪರ್ಧೆ ಇದಾಗಿತ್ತು .ಒಟ್ಟು ಒಂಬತ್ತು ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಭಾಗದ ಮುಖ್ಯಸ್ಥರಾದ ನಂದಾ ರೈ ಅಧ್ಯಕ್ಷತೆ ವಹಿಸಿ ವಿಜೇತರಿಗೆ ಬಹುಮಾನ ವಿತರಿಸಿದರು.
ವಿಭಾಗದ ಪ್ರಾಧ್ಯಾಪಕರುಗಳಾದ ಪ್ರವೀಣ್ ಮೊಗವೀರ ಗಂಗೊಳ್ಳಿ, ಹರೀಶ ಬಿ, ಅವಿತಾ ಕೊರೆಯಾ ಹಾಗೂ ರಜತ್ ಬಂಗೇರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ದ್ವಿತೀಯ ಬಿ ಬಿ ವಿದ್ಯಾರ್ಥಿನಿ ಸಹನಾ ವಂದಿಸಿದರು.ಶ್ರದ್ಧಾ ಕಾರ್ಯಕ್ರಮ ನಿರೂಪಿಸಿದರು. ಪ್ರಥಮ ಬಹುಮಾನ ಟೀಮ್ ಬಿಸಿ ಪ್ರೋ ಹಾಗೂ ದ್ವೀತಿಯ ಬಹುಮಾನ ಕಲರ್ ವರ್ಡ್ಸ್ ತಂಡ ಪಡೆದುಕೊಂಡಿತು.