ಉಡುಪಿ: ಯಕ್ಷಗಾನ ಕರಾವಳಿ ಭಾಗದ ಸಾಂಸ್ಕೃತಿಕ ಶ್ರೀಮಂತಿಕೆ ಪ್ರತೀಕವಾಗಿದ್ದು, ಯಕ್ಷಗಾನ ಕಲೆ ಹಾಗೂ ಕಲಾವಿದರುಗಳನ್ನು ಗುರುತಿಸಿ ಗೌರವಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್(ರಿ) ಅಂಬಲಪಾಡಿ ಉಡುಪಿ ಇದರ ಪ್ರವರ್ತಕರಾದ ನಾಡೋಜ ಡಾ. ಜಿ. ಶಂಕರ್ ಹೇಳಿದರು. ಅವರು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್(ರಿ) ಅಂಬಲಪಾಡಿ ಹಾಗೂ ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಯ ಆಶ್ರಯದಲ್ಲಿ ಜನವರಿ 29 ರಂದು ಮಲ್ಪೆ ಸೀ ವಾಕ್ ಬಳಿ ಇರುವ ಬಯಲುರಂಗ ಮಂದಿರ ದಲ್ಲಿ ಆಯೋಜಿಸಿದ್ದ ಯಕ್ಷಗಾನ ಕಲಾವಿದರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಕಲಾವಿದರನ್ನು ಸನ್ಮಾನಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಡಗುತಿಟ್ಟಿನ ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಕೊಂಡದಕುಳಿ ರಾಮಚಂದ್ರ ಹೆಗಡೆ, ತೀರ್ಥಹಳ್ಳಿ ಗೋಪಾಲಾಚಾರ್ಯ, ಹಳ್ಳಾಡಿ ಜಯರಾಮ್ ಶೆಟ್ಟಿ , ಸುಧೀರ್ ಉಪ್ಪೂರು, ಭಾಗವತ ರಾಘವೇಂದ್ರ ಆಚಾರ್ಯ ಜನ್ಸಾಲೆ, ಮದ್ದಳೆ ವಾದಕ ಸುನೀಲ್ ಭಂಡಾರಿ ಹಾಗೂ ಚಂಡೆ ವಾದಕ ಸುಜನ್ ಕುಮಾರ್ ಹಾಲಾಡಿ ಯವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಆಗಮಿಸಿ, ವಾರಾಂತ್ಯದಲ್ಲಿ ಸೀ ವಾಕ್ ಉದ್ಯಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು. ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಎಸ್ ಸುವರ್ಣ, ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪಾಂಡುರಂಗ ಕಾಂಚನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ವಿಕ್ರಮ್ ಶ್ರಿಯಾನ್ ವಂದಿಸಿದರು. ಭೀಷ್ಮ ಪ್ರತಿಜ್ಞೆ ಯಕ್ಷಗಾನವನ್ನು ಕಾರ್ಯಕ್ರಮದ ಪ್ರಯುಕ್ತ ಆಯೋಜಿಸಲಾಗಿತ್ತು.