ಕುಂದಾಪುರ( ನ.03): ಕುಂದಾಪುರ ತಾಲೂಕು ಯುವ ಬಂಟರ ಸಂಘವು ಪ್ರಸ್ತುತ ವರ್ಷದಲ್ಲಿ ದಶಮ ಸಂಭ್ರಮವನ್ನು ಆಚರಿಸುತ್ತಿದ್ದು 2023ನೇ ವರ್ಷದ ಉಡುಪಿ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪಡೆದಿದೆ.
ಉಡುಪಿ ಜಿಲ್ಲಾಡಳಿತದ ಆಶ್ರಯದಲ್ಲಿ ನವಂಬರ್ 1 ರಂದು ಉಡುಪಿಯ ಅಜ್ಜರಕಾಡು ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕರ್ನಾಟಕ ಸರಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪ್ರಶಸ್ತಿ ಪ್ರಧಾನ ಮಾಡಿದರು.
ಉಡುಪಿ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಆಚರಣಾ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಯಾಗಿರುವ ಶ್ರೀಮತಿ ವಿದ್ಯಾ ಕುಮಾರಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಪ್ರಶಸ್ತಿ ಸ್ವೀಕರಿಸಿದರು.
ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಸಂಘದ ವತಿಯಿಂದ ರೂಪಿಸಲಾದ ವಿವಿಧ ಯೋಜನೆಗಳಡಿ ಕುಂದಾಪುರ ಮತ್ತು ಬೈಂದೂರು ತಾಲೂಕು ವ್ಯಾಪ್ತಿಯ 5000 ಕುಟುಂಬಗಳಿಗೆ ಒಟ್ಟು ಎರಡು ಕೋಟಿ ರೂಪಾಯಿ ಮೊತ್ತದ ಆರ್ಥಿಕ ನೆರವು ನೀಡಲಾಗಿದೆ. ಬಡ ಕುಟುಂಬದ ಪ್ರತಿಭಾನ್ವಿತ ವಿದ್ಯಾರ್ಥಿಗಳು, ತಂದೆ ಅಥವಾ ತಾಯಿಯನ್ನು ಕಳೆದುಕೊಂಡ ವಿದ್ಯಾರ್ಥಿಗಳು, ವಿಕಲಚೇತನ ವಿದ್ಯಾರ್ಥಿಗಳು, ಅನಾರೋಗ್ಯ ಪೀಡಿತರು, ವಿವಾಹ ನಿಗದಿಯಾದ ಯುವತಿಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು-ಸಹಾಯಕಿಯರು, ಸರ್ಕಾರದ ಅಕ್ಷರ ದಾಸೋಹ ಯೋಜನೆಯ ಸಹಾಯಕಿಯರು, ವಸತಿ ಇಲ್ಲದವರು ಮೊದಲಾದವರನ್ನು ಒಳಗೊಂಡoತೆ ಹಿಂದುಳಿದ ಮತ್ತು ಅವಕಾಶಗಳಿಂದ ವಂಚಿತರಾದ ಕುಟುಂಬಗಳು ವಿವಿಧ ಯೋಜನೆಗಳ ಪ್ರಯೋಜನ ಪಡೆದಿವೆ. ಮುಖ್ಯವಾಗಿ ದಶಮ ಸಂಭ್ರಮ ವರ್ಷದಲ್ಲಿ ಒಟ್ಟು 2000 ಕುಟುಂಬಗಳಿಗೆ ರೂ. 1.25 ಕೋಟಿ ಮೊತ್ತದ ಆರ್ಥಿಕ ನೆರವು ನೀಡಲಾಗಿದೆ.
ಇದರೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಅಸಾಮಾನ್ಯ ಸೇವೆಗೈದ 20 ಮಂದಿ ಹಿರಿಯರಿಗೆ ‘ದಶಮ ಸಂಭ್ರಮ’ ಪ್ರಶಸ್ತಿ, 10 ಮಂದಿ ಸಾಧಕ ಮಹಿಳೆಯರಿಗೆ ‘ಹೊಂಗಿರಣ’ ಪ್ರಶಸ್ತಿ ಹಾಗೂ 10 ಮಂದಿ ಸಾಧಕ ಶಿಕ್ಷಕರಿಗೆ ‘ವಿದ್ಯಾರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಬೃಹತ್ ಮಟ್ಟದ ರಕ್ತದಾನ ಶಿಬಿರದೊಂದಿಗೆ ‘ಹಸಿರು ಹೊನು’ ಯೋಜನೆಯ ಮೂಲಕ ಎಲ್ಲಾ ಸಮುದಾಯದ ಯುವಕ-ಯುವತಿಯರಿಗೆ 1000 ಗಿಡಗಳನ್ನು ಉಚಿತವಾಗಿ ವಿತರಿಸಲಾಗಿದೆ.
ಈ ಎಲ್ಲಾ ಬಗೆಯ ಸಮಾಜಪರ ಮತ್ತು ವಿಸ್ತರಣಾ ಚಟುವಟಿಕೆಗಳನ್ನು ಪರಿಗಣಿಸಿ 2023ನೇ ವರ್ಷದ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ ಎಂಬುದಾಗಿ ಸಂಘದ ಗೌರವಾಧ್ಯಕ್ಷ ಬೈಲೂರು ಉದಯಕುಮಾರ್ ಶೆಟ್ಟಿ ಮತ್ತು ದಾಖಲೀಕರಣ ಸಮಿತಿ ಸಂಚಾಲಕ ಪ್ರತಾಪಚಂದ್ರ ಶೆಟ್ಟಿ ಹಳ್ನಾಡು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.