ಕುಂದಾಪುರ (ಫೆಬ್ರವರಿ 24): ಶಿಕ್ಷಣ ಸಂಸ್ಥೆಯ ಹಳೆ ವಿದ್ಯಾರ್ಥಿಗಳು ಆಯಾಯ ಶಿಕ್ಷಣ ಸಂಸ್ಥೆಗಳ ರಾಯಭಾರಿಗಳಿದ್ದ ಹಾಗೆ. ತಾವು ಕಲಿತ ಶಿಕ್ಷಣ ಸಂಸ್ಥೆಗಳ ಕಾರ್ಯಶೀಲತೆ, ಘನತೆ ಗೌರವಗಳನ್ನು ಸಮಾಜಕ್ಕೆ ಬಿಂಬಿಸುವ ಶಕ್ತಿ ಹುದುಗಿರುವುದು ಶಿಕ್ಷಣ ಸಂಸ್ಥೆಗಳಲ್ಲಿ ಕಲಿತು ಹೊರಗೆ ಬಂದ ವಿದ್ಯಾರ್ಥಿಗಳಿಗಿದೆ ಅನ್ನುವುದು ನಾವು ಮರೆಯಬಾರದು. ಶಿಕ್ಷಣ ನೀಡಿದ ವಿದ್ಯಾ ಸಂಸ್ಥೆಗಳ ಬೆಳವಣಿಗೆಯಲ್ಲಿ ಪ್ರಾಕ್ತನ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದೆ ಎಂದು ಉಡುಪಿ ಎಮ್.ಜಿ.ಎಮ್. ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೊ| ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಅಭಿಪ್ರಾಯಿಸಿದರು.
ಅವರು ಕುಂದಾಪುರದ ಡಾ| ಬಿ.ಬಿ. ಹೆಗ್ಡೆ ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ ಸಂಘದ ಮೊದಲ ಸಮ್ಮಿಲನ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ವಹಿಸಿ, ಕಾಲೇಜು ತನ್ನ ಹದಿನಾಲ್ಕು ವರ್ಷಗಳಲ್ಲಿ ನಡೆದು ಬಂದ ಹಾದಿಯನ್ನು ನೆನಪಿಸಿಕೊಂಡು ಕಾಲೇಜಿನ ಸಾಧನೆಯನ್ನು ವಿವರಿಸಿ ಹಳೆ ವಿದ್ಯಾರ್ಥಿಗಳ ಪ್ರೀತಿ, ವಿಶ್ವಾಸ, ಅಭಿಮಾನಕ್ಕೆ ಕೃತಜ್ಞತೆ ಸಲ್ಲಿಸಿದರು. ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಕ ಮಾತನಾಡಿದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಆದೇಶ್ ನಾಯಕ್ ಸ್ವಾಗತಿಸಿ, ಕೋಶಾಧಿಕಾರಿ ಯೊಗೀಶ ಶ್ಯಾನುಭೋಗ ವಂದಿಸಿದರು. ಕಾರ್ಯದರ್ಶಿ ದೀಪಾಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಅನಂತರದಲ್ಲಿ ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.