ಬಾವುಟದ ಪಾಠ
ತ್ರಿವರ್ಣ ಧ್ವಜದ ಮಹಿಮೆ
ನಮ್ಮೆಲ್ಲರ ಗರಿಮೆ
ಉತ್ತುಂಗಕ್ಕೆ ಹಾರುತಿರುವ ನಮ್ಮ ಬಾವುಟ
ಸಾರುತಿಹುದು ಜೀವನದ ಪಾಠ.
ಬಾವುಟದ ಮೊದಲ ಬಣ್ಣ ಕೇಸರಿ
ತ್ಯಾಗ-ಶೌರ್ಯದ ಪ್ರತೀಕವೇ ಸರಿ
ವಿಶ್ವಕ್ಕೆ ಹೇಳುತಿಹುದು ಸಾರಿ ಸಾರಿ
ಭಾರತೀಯರ ಬಲ, ಬೆಂಬಲ ಹಂಬಲದ ಐಸಿರಿ.
ಮಧ್ಯಮ ಬಣ್ಣ ಶ್ವೇತ
ಸತ್ಯ – ಶಾಂತಿಯ ಇದು ಸಂಕೇತ
ಭಾರತ ಎಂದಿಗೂ ವಿಶ್ವ ಶಾಂತಿಯ ಧೂತ
ಸತ್ಯ ಪ್ರತಿಷ್ಠಾಪನೆಗೆ ಆಗುವುದು ಅವಧೂತ.
ಬಿಳಿಯ ಮಧ್ಯ ಅಶೋಕ ಚಕ್ರ ನೀಲಿ
ಏನು ಹೇಳುತ್ತಿದೆ ನೀವು ಕೇಳಿ?
24 ತಾಸು ನಡೆಮುಂದೆ ಧರ್ಮದ ಹಾದಿಯಲಿ
ಪ್ರಗತಿ ಮಾರ್ಗದಲ್ಲಿ ಭಾರತ ಸದಾ ಪಳಗಿರಲಿ.
ಧ್ವಜದ ಅಂತಿಮ ಬಣ್ಣ ಹಸಿರು
ಸಂತೋಷ ಮತ್ತು ಸಮೃದ್ಧಿಯ ಪ್ರತೀಕ
ಹಸಿರೇ ನಮ್ಮ ಉಸಿರು
ಹಸಿರು ಸಿರಿಯಲಿ ನಮ್ಮ ದೇಶ ಧನಿಕ.
ಭಾರತದ ಧ್ವಜ, ನಮ್ಮ ಅಭಿಮಾನ
ಮೀಸಲು ಇದಕ್ಕಾಗಿ ನಮ್ಮ ಪ್ರಾಣ
ನನ್ನ ದೇಶ, ನನ್ನ ಜನ
ನನ್ನ ನಾಡಿಗೆ ನನ್ನ ನಮನ.
ಡಾ|| ಉಮ್ಮೆ ಸಲ್ಮಾ ಎಂ
ಸಹ ಪ್ರದ್ಯಪಕರು
ಕ್ರೈಸ್ಟ್ ವಿಶ್ವವಿದ್ಯಾಲಯ
ಬೆಂಗಳೂರು