ಕೋಡಿ ( ಸೆ.06): ಕೋಡಿಯ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರ ದಿನಾಚರಣೆಯನ್ನು ಸೆಪ್ಟೆಂಬರ್ 05 ರಂದು ಆಚರಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಹಾಜಿ ಕೆ. ಎಂ ಅಬ್ದುಲ್ ರೆಹಮಾನ್ ಶಿಕ್ಷಕರುನ್ನುದ್ದೇಶಿಸಿ “ಮಕ್ಕಳಿಗೆ ಕೊಡಲೇಬೇಕಾದ ಆಸ್ತಿಯೆಂದರೆ ಶಿಕ್ಷಣ, ಈ ಶಿಕ್ಷಣದ ಮೂಲಕ ಮಕ್ಕಳ ಭವಿಷ್ಯ ಉಜ್ವಲವಾಗಲು ಸಾಧ್ಯ. ಶಿಕ್ಷಕ ವೃತ್ತಿ ಪವಿತ್ರವಾದುದು. ತಮ್ಮ ವೃತ್ತಿಯ ಮೂಲಕ ದೇಶದ ಸುಂದರ ಭವಿಷ್ಯ ಕಟ್ಟಬೇಕು” ಎಂದು ನುಡಿದರು.
ಬ್ಯಾರೀಸ್ ವಿಶ್ವಸ್ತ ಮಂಡಳಿಯ ಸದಸ್ಯ ಡಾ.ಆಸೀಫ್ ಬ್ಯಾರಿ ಇವರು “ದೇಶಕಟ್ಟುವಲ್ಲಿ ಶಿಕ್ಷಕರ ಪಾತ್ರ ಹಿರಿದಾದುದು, ತಮ್ಮ ವೃತ್ತಿಯನ್ನು ನಿಷ್ಠೆಯಿಂದ ಮಾಡುವುದರ ಮೂಲಕ ತಮ್ಮಿಂದ ಕಲಿತು ಸಮಾಜದಲ್ಲಿ ಬದುಕನ್ನು ಕಟ್ಟಿಕೊಳ್ಳುವ ಮಕ್ಕಳು ತಮ್ಮ ಶಿಕ್ಷಕರನ್ನು ಸದಾ ನೆನಪಿಸುವಂತಾ ಕಾರ್ಯ ಆಗಬೇಕು” ಎಂದು ಶುಭ ಹಾರೈಸಿದರು.
“ಶಿಕ್ಷಕ ವೃತ್ತಿ ಪುಣ್ಯವಾದುದು, ಶಿಕ್ಷಕರ ಸೇವೆಗೆ ಬೆಲೆ ಕಟ್ಟಲು ಅಸಾಧ್ಯ. ಒಗ್ಗಟ್ಟಿನಲ್ಲಿ ಸಮಷ್ಟಿ ಹಿತವನ್ನು ಇರಿಸಿ ಕೆಲಸ ಮಾಡಿದಾಗ ಒಂದು ಶಿಕ್ಷಣ ಸಂಸ್ಥೆ ಮಾತ್ರವಲ್ಲದೆ ಭಾರತದ ಉತ್ತಮ ಭವಿಷ್ಯವನ್ನು ರೂಪಿಸಲು ಸಾಧ್ಯ” ಎಂದು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಸೈಯದ್ ಮೊಹಮ್ಮದ್ ಬ್ಯಾರಿಯವರು ತಿಳಿಸಿರುವ ಸದೇಶವನ್ನು ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಶಬೀನಾ.ಹೆಚ್ ಸಮಸ್ತ ಶಿಕ್ಷಕರ ಮುಂದೆ ವಾಚಿಸಿದರು.
ಬ್ಯಾರೀಸ್ ಡಿ.ಎಡ್ ಪ್ರಾಂಶುಪಾಲೆ ಡಾ.ಫಿರ್ದೋಸ್, ಬಿ.ಎಡ್ ನ ಉಪಪ್ರಾಂಶುಪಾಲ ಶ್ರೀ.ಪ್ರವೀಣ್ ಕುಮಾರ್ ಕೆ.ಪಿ, ಬ್ಯಾರೀಸ್ ಸೀಸೈಡ್ ಪಬ್ಲಿಕ್ ಸ್ಕೂಲ್ ಮತ್ತು ಪಿಯು ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಅಶ್ವಿನಿ ಶೆಟ್ಟಿ, ಸಲಹಾ ಮಂಡಳಿಯ ಸದಸ್ಯ ಶ್ರೀ. ಅಬುಷೇಕ್ ಸಾಹೇಬ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬ್ಯಾರೀಸ್ ಸೀಸೈಡ್ ಪಬ್ಲಿಕ್ ಸ್ಕೂಲ್, ಪಿಯು ಕಾಲೇಜಿನ ವಿದ್ಯಾರ್ಥಿಗಳು ಸಮೂಹ ಗಾಯನ ಹಾಡಿದರು. ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗಾಗಿ ಕೆಲವೊಂದು ಆಟೋಟ ಸ್ಪರ್ಧೆಗಳನ್ನು ಹಮ್ಮಿಕೊಂಡು ವಿಜೇತರಿಗೆ ಬಹುಮಾನವನ್ನು ವಿತರಿಸಿದರು . ತೃತೀಯ ಬಿಸಿಎ ವಿದ್ಯಾರ್ಥಿನಿಯರಾದ ಬುಶ್ರಾ ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿದರು. ಅಫ್ರಾ ಸ್ವಾಗತಿಸಿ, ಆಲಿಯಾ ವಂದಿಸಿದರು. ಮಿಸ್ಬಾ ಕಾರ್ಯಕ್ರಮ ನಿರೂಪಿಸಿದರು.