ಕೋಡಿ( ಸೆ.16): ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳು ಕೋಡಿ ಹಾಗೂ ಭಾರತೀಯ ಹಸಿರು ಕಟ್ಟಡಗಳ ಮಂಡಳಿ ಇವರ ಸಂಯುಕ್ತ ಆಶ್ರಯದಲ್ಲಿ ಜಾಗತಿಕ ಹಸಿರು ಕಟ್ಟಡಗಳ ಸಪ್ತಾಹ 2024 ಪ್ರಯುಕ್ತ ವಿಶೇಷ ಕಾರ್ಯಾಗಾರ ಇತ್ತೀಚೆಗೆ ನೆರವೇರಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ. ರಾಜೇಶ್ ಮೋಹನ್ ದಾಸ್ ನಿಪುಣ ಜೇನು ಸಾಕಣೆದಾರರು ಮತ್ತು ಸಾವಯುವ ಕೃಷಿಕರು ತಪೋವನ ಫಾರ್ಮ್ಸ್ ಮೂಲ್ಕಿ ಇವರು ” ಮಾನವನ ಅತಿಯಾದ ಸಂಪನ್ಮೂಲಗಳ ಬಳಕೆಯಿಂದ ಯುವ ಪೀಳಿಗೆಯವರಿಗೆ ಚಿತ್ರಪಟಗಳಲ್ಲಿ ವೀಕ್ಷಿಸಿ ಸಮಾಧಾನಿಗಳಾಗಬೇಕಾದ ಪರಿಸ್ಥಿತಿ ಬಂದೋದಗಿದೆ. ಸಸ್ಯ ಜಗತ್ತು ಹಾಗೂ ಪ್ರಾಣಿ ಜಗತ್ತಿನ ಕೊಡುವ ಹಾಗೂ ಕೊಳ್ಳುವ ಕಾರ್ಯದಿಂದ ಜಾಗತಿಕ ತಾಪಮಾನ ಸಮತೋಲನದಲ್ಲಿರಲು ಸಾಧ್ಯ. ಸುಂದರ ಪರಿಸರ, ತಿಳಿಗಾಳಿ, ಪರಿಶುದ್ಧ ನೀರನ್ನು ಉಳಿಸಿ ಬೆಳೆಸುವ ಕಾರ್ಯ ನಮ್ಮ ಈ ಕ್ಷಣದ ಕಾಯಕವಾಗಿದೆ” ಎಂದು ನುಡಿದರು.
ಬ್ಯಾರಿಸ್ ವಿಶ್ವಸ್ಥ ಮಂಡಳಿ ಸದಸ್ಯರಾದ ಡಾ.ಆಸೀಫ್ ಬ್ಯಾರಿ ಇವರು ಕಾರ್ಯಗಾರವನ್ನುದ್ದೇಶಿಸಿ ಪ್ರಾಸ್ತಾವಿಕವಾಗಿ “ಮಾನವನ ದುರಾಸೆ ಹಸಿರು ಪರಿಸರದ ನಾಶಕ್ಕೆ ಕಾರಣವಾಗಿ ಕಟ್ಟಡಗಳ ಕಾಡಿನ ಉಗಮಕ್ಕೆ ದಾರಿಯಾಗಿದೆ, ಪರಿಸರ ಹಾಳು ಮಾಡಿದ ಮಾನವನೇ ಇಂದು ಪರಿಸರವನ್ನು ಹುಟ್ಟುಹಾಕುವ ಹೋರಾಟಕ್ಕೆ ಮುಂದಾಗಬೇಕಾಗಿದೆ” ಎಂದು ತಿಳಿಸಿದರು. ಕಾರ್ಯಗಾರದ ಹಾಗೂ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಹಾಜಿ ಕೆ.ಎಂ ಅಬ್ದುಲ್ ರೆಹಮಾನ್ ಇವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಜಾಗತಿಕ ಹಸಿರು ಕಟ್ಟಡ ಸಪ್ತಾಹದ ಅಂಗವಾಗಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಪರಿಸರ ಸಂಬಂಧಿ ಭಾಷಣ, ಪ್ರಬಂಧ ಹಾಗೂ ಕಸದಿಂದ ರಸ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ವಿಜೇತರಿಗೆ ಕಾರ್ಯಕ್ರಮದ ಮುಖ್ಯ ಅತಿಥಿಗಳಿಂದ ಬಹುಮಾನವನ್ನು ಕೊಡಿಸಲಾಯಿತು. ಕಾರ್ಯಗಾರದಲ್ಲಿದ್ದ ಡಾ.ಪೂರ್ಣಿಮಾ.ಟಿ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು.
ವಿವಿಧ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಅಶ್ವಿನಿ ಶೆಟ್ಟಿ, ಶ್ರೀಮತಿ ಶಬೀನಾ.ಹೆಚ್ ಹಾಗೂ ಬಿ.ಎಡ್ ಕಾಲೇಜಿನ ಹಿರಿಯ ಪ್ರಾಧ್ಯಾಪಕ ಶ್ರೀ.ಅನಂತ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತೃತೀಯ ಬಿಸಿಎ ವಿದ್ಯಾರ್ಥಿನಿ ಅಫ್ರಾ ಸ್ವಾಗತಿಸಿ, ಪದವಿ ಆಂಗ್ಲ ಉಪನ್ಯಾಸಕಿ ಪ್ರಿಯಾ ರೆಗೋ ಬಹುಮಾನ ವಿಜೇತರ ಪಟ್ಟಿ ವಾಚಿಸಿ, ದ್ವಿತೀಯ ಪಿಯು ವಿದ್ಯಾರ್ಥಿನಿ ನಫಾ ನಾಜೀರ್ ವಂದಿಸಿದರು. ಕನ್ನಡ ಉಪನ್ಯಾಸಕ ಡಾ.ಸಂದೀಪ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.