ಕುಂದಾಪುರ( ನ.26): ಉಡುಪಿ ಜಿಲ್ಲೆ ವ್ಯಾಪ್ತಿಯ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಜರುಗಿದ ರಾಜ್ಯಮಟ್ಟದ ಫೆಸ್ಟ್ ನವೊನ್ಮೇಶ್ ಅದ್ದೂರಿಯಾಗಿ ಸಂಪನ್ನಗೊಂಡಿತು.
ಮದರ್ ತೆರೇಸಾ ಪಿಯು ಕಾಲೇಜ್ ಶಂಕರನಾರಾಯಣ ಚಾಂಪಿಯನ್ ಹಾಗೂ ಶ್ರೀ ವೆಂಕಟರಮಣ ಪಿಯು ಕಾಲೇಜ್ ಕುಂದಾಪುರ ದ್ವಿತೀಯ ಸ್ಥಾನ ಪಡೆಯಿತು. ಪ್ರತಿಭಾನ್ವಿತ ಪಿಯುಸಿ ವಿದ್ಯಾರ್ಥಿಗಳಿಗೆ ವಿನೂತನ ಮತ್ತು ವಿಭಿನ್ನ ಪ್ರಯತ್ನದೊಂದಿಗೆ ವೇದಿಕೆಯನ್ನು ಒದಗಿಸಿಕೊಟ್ಟ ಐಎಂಜೆ ವಾಣಿಜ್ಯ ಮತ್ತು ವಿಜ್ಞಾನ ಸಂಸ್ಥೆ ಮೂಡ್ಲಕಟ್ಟೆ, ಸ್ಪರ್ಧೆಯನ್ನು ಐಟಿ, ವಾಣಿಜ್ಯ ಮತ್ತು ಸಾಂಸ್ಕೃತಿಕ ಎಂಬ ಮೂರು ವಿಭಾಗವಾಗಿ ವಿಂಗಡಿಸಿ, 13 ಸ್ಪರ್ಧೆಯನ್ನು ಏರ್ಪಡಿಸಿತ್ತು.
ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಉಡುಪಿ ಜಿಲ್ಲೆಯ ಹೆಚ್ಚುವರಿ ಸಹಾಯಕ ಪೊಲೀಸ್ ಅಧೀಕ್ಷಕರಾದ ಶ್ರೀ ಪರಮೇಶ್ವರ್ ಎ.ಹೆಗಡೆ, ವಿದ್ಯಾರ್ಥಿ ಜೀವನದಲ್ಲಿ ಇಂತಹ ಅವಕಾಶವನ್ನು ಉಪಯೋಗಿಸಿಕೊಂಡು ಉತ್ತಮ ವೃತ್ತಿ ಜೀವನ ಕಟ್ಟಿಕೊಳ್ಳಬೇಕು, ಮಾದಕ ವ್ಯಸನ, ಸೈಬರ್ ಅಪರಾಧ ಕೃತ್ಯವನ್ನು ತಡೆಗಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವ ಎಂದರು. ಇದೇ ಸಂದರ್ಭದಲ್ಲಿ ಡಿಜಿಟಲ್ ಅರೆಸ್ಟ್ ಕುರಿತ ಮಾಹಿತಿಯನ್ನು ಹಂಚಿಕೊಂಡರು. ಅದ್ಭುತವಾಗಿ ಕಾರ್ಯಕ್ರಮವನ್ನು ಆಯೋಜಿಸಿದ ಸಂಸ್ಥೆಯನ್ನು ಅಭಿನಂದಿಸಿದರು.
ಇನ್ನೋರ್ವ ಅತಿಥಿಯಾಗಿ ಭಾಗವಹಿಸಿದ ರೋಬೊಸಾಫ್ಟ್ ಕಂಪನಿಯ HR-Lead- Human Possibilities, ಶ್ರುತಿ ರೇಷಲ್ ಡಿಸೋಜಾ, ಕಾಲೇಜು ಆಯೋಜಿಸುವ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಉತ್ತಮ ನಾಗರಿಕರಾಗಲು ಸಹಕರಿಸುತ್ತದೆ, ಜೀವನದಲ್ಲಿ ನೀವೆಲ್ಲರೂ ಆಯ್ಕೆಯನ್ನು ಹೊಂದಿದ್ದೀರಿ, ನಿಮ್ಮ ಆಯ್ಕೆ ನಿಮ್ಮ ಜೀವನವನ್ನು ರೂಪಿಸುತ್ತದೆ, ನಿಮ್ಮ ಪ್ರತಿಭೆ ಮತ್ತು ಸಾಧನೆ ಪ್ರಪಂಚಕ್ಕೆ ಉತ್ತಮ ಕೊಡುಗೆಯನ್ನು ನೀಡಲಿ ಎಂದು ಹಾರೈಸಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ ಪಟೇಲ್ ಭಾಗವಹಿಸಿದ ಮತ್ತು ವಿಜೇತರಾದ ಪ್ರತಿ ವಿದ್ಯಾರ್ಥಿಗಳಿಗೂ ಶುಭ ಹಾರೈಸಿದರು. ಕಾಲೇಜಿನ ಉಪ ಪ್ರಾಂಶುಪಾಲರಾದ ಜಯಶೀಲ್ ಕುಮಾರ್ ರವರು ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಕಾಲೇಜಿನ ಗಣಿತಶಾಸ್ತ್ರ ಉಪನ್ಯಾಸಕಿ ರಕ್ಷಿತಾ ಅಡಿಗ ವಿಜೇತರ ಪಟ್ಟಿ ಓದಿದರು. ಅಂತಿಮ ಬಿಸಿಎ ವಿದ್ಯಾರ್ಥಿಗಳಾದ ರಿಯಾನ್ ಮತ್ತು ಫರ್ಜಾನ ಕಾರ್ಯಕ್ರಮ ನಿರೂಪಿಸಿದರು. ಪ್ರಥಮ ಬಿಸಿಎ ವಿದ್ಯಾರ್ಥಿನಿ ಶ್ರೀರಕ್ಷಾ ವಂದಿಸಿದರು.