‘ಕಾವೇರಿಯಿಂದಮಾ ಗೋದಾವರಿಯವರಮಿರ್ದ ನಾಡದಾ ಕನ್ನಡದೊಳ್’
ಎಂತಹ ಅರ್ಥಪೂರ್ಣ ಸತ್ಯ ಸಾರುವ ಸಾಲುಗಳು!ಬಗೆದಷ್ಟು ಐತಿಹ್ಯ, ಹುಡುಕಿದಷ್ಟೂ ಇತಿಹಾಸ. ಅಬ್ಬಾ..! ಈ ನಾಡಿನಲ್ಲಿ ಹುಟ್ಟಿರೋದು ಪುಣ್ಯವಲ್ಲವೇ?
ಬನವಾಸಿ ದೇಶದ ಅಭಿಮಾನ, ಪ್ರೀತಿ, ಪಾವಿತ್ರ್ಯತೆ, ಪ್ರಾಮುಖ್ಯತೆಯನ್ನು ಆ ಕಾಲದ ಕವಿಪುಂಗವ ಪಂಪನೇ ಹೇಳಿರುವ, ಇನ್ನೊಂದು ಜನ್ಮದಲ್ಲಿ ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ಬನವಾಸಿ ದೇಶದೊಳ್. ಈ ನಾಡು ಕಲಿಗಳಿಗೆ ಬೀಡು, ಕವಿಗಳಿಗೆ ನಾಡು. ಸಂಸ್ಕೃತಿ ಕಲೆ ಚಾತುರ್ಯಕ್ಕೆ ತವರೂರು. ಕರ್ನಾಟಕ ಹಿಂದೆ ದಕ್ಷಿಣ ಭಾರತದ ಬಹುಪಾಲು ಹೊಂದಿತ್ತು. ಈ ಭಾಷಾನೆಲೆಯಲ್ಲಿ ರಾಜ್ಯವಿಂಗಡಿಸುವ ಕಾರ್ಯತಂತ್ರಕ್ಕೆ ವಿಶಾಲ ಕರ್ನಾಟಕ ಹರಿದು ಹೋಯಿತು.
ಕರ್ನಾಟಕ ಎಂಬ ಪದದಲ್ಲೇ ಎಷ್ಟು ಮಾಧರ್ಯತೆ ಇದೆ ! ಕರ್ನಾಟಕ ಅಥವಾ ಕರ್ಣಾಟಕ ಎಂದರೆ ಅತ್ಯುನ್ನತ, ಶಿಖರಪ್ರಾಯ, ಎತ್ತರವಾದ ಪ್ರದೇಶ ಎಂಬ ಅರ್ಥಗಳಿವೆ. ಕರ್ನಾಟಕ ಪದದ ಉತ್ಪತ್ತಿ ಹುಡುಕಲು ಹೋದರೆ ಅದರ ಮೂಲ ಒಂದನೇ ಶತಮಾನದವರೆಗೂ ಹರಡಿಕೊಂಡಿದೆ.
ಸಂಸ್ಕೃತ ಪ್ರಾಚೀನ ಸಾಹಿತ್ಯದಲ್ಲಿ ಈ ‘ಕರ್ಣಾಟ:’ ಎಂಬ ಶಬ್ದವೂ ಸಾಮಾನ್ಯವಾಗಿರುತ್ತದೆ. ಸಂಸ್ಕೃತ ಮಹಾಭಾರತದ ಸಭಾಪರ್ವದಲ್ಲಿ ‘ಕರ್ಣಾಟ:’ ಎಂದೂ ಭೀಷ್ಮಪರ್ವದಲ್ಲಿ ‘ಕರ್ಣಾಟಿಕ:’ ಎಂದೂ ಉಲ್ಲೇಖಿಸಲಾಗಿದೆ. ‘ಶೂದ್ರಕ’ ನ ‘ಮೃಚ್ಛಕಟಿಕ’ ದಲ್ಲಿ, ‘ವರಾಮಿಹಿರ’ ನ ‘ಬೃಹತ್ಸಂಹಿತೆ’ ಯಲ್ಲಿ , ‘ಮಾರ್ಕಂಡೇಯ ಪುರಾಣ’, ‘ಸೋಮದೇವ’ ನ ‘ಕಥಾಸರಿತ್ಸಾಗರ’ ಎಂಬ ಕಾವ್ಯಗಳಲ್ಲಿ ‘ಕರ್ಣಾಟ’ ಪದ ಬಳಸಿರುವುದು ಕಂಡುಕೊಳ್ಳಲಾಗಿದೆ.
ಇದಲ್ಲದೇ, ಪಕ್ಕದ ತಮಿಳು ರಾಜ್ಯದ ಪ್ರಾಚೀನ ಅಂದರೆ ಸುಮಾರು ಎರಡರಿಂದ-ಮೂರನೇ ಶತಮಾನದ ನಡುವಿನ ‘ಶಿಲಪ್ಪದಿಗಾರಂ’ ಎಂಬ ಸಾಹಿತ್ಯ ಕೃತಿಯಲ್ಲಿ ‘ಕರುನಾಡರ್’ ಎಂಬ ಶಬ್ದವೂ, ‘ಪಾಂಡ್ಯ’ ದೊರೆ ‘ಪರಾಂತಕ ವೇಳ್ವಿಕುಡಿ’ ತಾಮ್ರಶಾಸನದಲ್ಲಿ ‘ಕರುನಾಡುಗನ್’ ಎಂಬ ಶಬ್ದವೂ ಕರ್ನಾಟಕ ಶಬ್ದದ ಪ್ರಾಚೀನ ಇರುವಿಕೆಯ ಮೇಲೆ ಬೆಳಕು ಚೆಲ್ಲುತ್ತವೆ.
ಕರ್ನಾಟಕ ಎಂದರೆ, ಹಲವು ವಿದ್ವಾಂಸರು ಹಲವು ಅರ್ಥ ಕಂಡುಕೊಂಡಿದ್ದಾರೆ. ಕಪ್ಪು ಮಣ್ಣಿನ ನಾಡು ಎಂಬ ಅರ್ಥ, ಎತ್ತರವಾದ ಪ್ರದೇಶಗಳಿರುವ ನಾಡು ಎಂಬರ್ಥ, ಸಮುದ್ರ ಮಟ್ಟದಿಂದ ಪಶ್ಚಿಮ ಘಟ್ಟಗಳು ಮುಕುಟದಂತೆ ಕಾಣುವ ದೃಷ್ಟಿಯಿಂದ ಕರ್ನಾಟಕ ಎಂದೂ ಕರೆದಿರಬಹುದು ಎನ್ನುತ್ತಾರೆ.
ಅಂತಹ ಕರ್ನಾಟಕದ ಈಗಿನ ರೂಪುರೇಷೆ ಹೇಗಿದೆ? ಪಶ್ಚಿಮ ಶರಧಿಯ ಶರವೇಗದ ಬೃಹದಲೆಗಳು, ತುಸು ಸಮೀಪ ತಲೆ ಎತ್ತಿರುವ ಘಟ್ಟಸಾಲುಗಳು, ಅದರ ಒಡಲಲ್ಲಿ ಹುಟ್ಟುವ ನೂರಾರು ನೀರಿನ ಜಿನುಗುಗಳು, ದಟ್ಟಕಾನನದ ದಿಕ್ಕುಸೊಕ್ಕುಗಳಲ್ಲಿ ಹಸಿರು, ಹಸಿರನುಸಿರಾಗಿಸಿಕೊಂಡ ವನ್ಯಜೀವಕುಲಗಳು. ಕರಾವಳಿ ಕಾಲುದಾರಿಯುದ್ದಕ್ಕೂ ಪುರಾಣೈತಿಹ್ಯ ದೇಗುಲಗಳು. ಘಟ್ಟವೇರುವಾಗ ಸಿಗುವ ತಿರುವು ಮುರುವುಗಳು, ಅಲ್ಲಲ್ಲಿ ಜೊಳ್ಳೆಂದು ನೆಗೆಯುವ ಜಲಧಾರೆಗಳು. ಕಾರ್ಮೋಡಗಳು ಮಲಬಾರ್ ಪ್ರದೇಶ ದಾಟಿ ಈ ಗಿರಿಕನ್ಯೆಯ ನೆತ್ತಿಗೆ ಢಿಕ್ಕಿ ಹೊಡೆದು ಘಟ್ಟವನ್ನೇ ಜಳಕಿಸುವ ಮುಂಗಾರುಮಳೆ ನರ್ತನ. ಪಶ್ಚಿಮ ಶಿಖರದೀಚೆಗೆ ಬಂದರೆ ಹರಿವ ನದ-ನದಿಗಳು. ಅದರ ಪಕ್ಕದಲಿ ಬೆಳೆವ ಬೆಳೆಗಳ ಸಿರಿವೈಭೋಗ ಸ್ವರ್ಗಲೋಕ ನೋಡಲು ಕಣ್ಣಿಗೆ ಸಿಗುವ ಸುಖ ಬಿಚ್ಚಿಡುವುದು ಹೇಗೆ?
ಮಲೆನಾಡಿನ ಹಸಿರು ಸೌಂದರ್ಯ ಅನುಭವಿಸಿದವರಿಗೇ ಗೊತ್ತು. ಸಹಸ್ರ ವರ್ಷಗಳ ಇತಿಹಾಸ ಪುಟಗಳು ಹೇಳುವಂತೆ ಆ ಬಯಲುಸೀಮೆಯ ಒಂದೊಂದು ಜಿಲ್ಲೆಗಳೂ ಒಂದೊಂದು ಕತೆ ಹೇಳುವವು. ಕರುನಾಡು ಕಂಡ ರಾಜಮನೆತನಗಳೆಷ್ಟು? ಕರುನಾಡ ಕಂಡು, ಬೆಳೆಸಿದ ಪರಂಪರೆಗಳೆಷ್ಟು? ಬಣ್ಣಿಸಲು ಪದವಿಲ್ಲದ ಪದಕೋಶ ನಾನು.
ಮೂಲೆ ಮೂಲೆಯ ಒಂದೊಂದು ದೇಗುಲದ ವಾಸ್ತುಶಿಲ್ಪದ ಮಾದರಿ ಒಂದರಂತೊಂದಿಲ್ಲ. ದಾಳಿಗೊಳಗಾದರೂ ದಾರ್ಶನಿಕರ ದರ್ಶನ ಪಡೆದು ಅವರ ದಂಗಿಗೆ ಕನ್ನಡಿಯಾದದ್ದು ಕರ್ನಾಟಕ. ಮೊದಮೊದಲು ನಗರ ನಿರ್ಮಾಣಕ್ಕೆ ಬುನಾದಿ ಹಾಕಿದವರು, ಸಾಹಿತ್ಯವನ್ನು ಅರೆದು ಕುಡಿದ ಶಿಖಾಮಣಿಗಳು, ಒಂದು ಕಾಲದಲ್ಲಿ ದಕ್ಷಿಣಭಾರತವನ್ನೆಲ್ಲ ಆಳಿದವರು, ವಿವಿಧ, ವಿಧ ವಿಧ ಸಾಂಸ್ಕೃತಿಕ ಕೊಡುಗೆ ನೀಡಿದವರು, ದರ್ಪ ತೋರಿದವರ ಹುಟ್ಟಡಗಿಸಲು ಹುಲಿಯಾದವರು, ಪರಕೀಯರ ಪರಾತಂತ್ರ್ಯದ ವಿರುದ್ಧ ಸೊಲ್ಲೆತ್ತಿದ ವೀರವನಿತೆಯರು, ಸರ್ವಧರ್ಮಕ್ಕೂ ಸಮಾನತೆ ನೀಡುವ ತೆರೆದಬಾಗಿಲಹೃದಯದವರು, ವಿಶ್ವ ಭ್ರಾತತ್ವ ಸಾರಲು ಮುನ್ನಡಿ ಬರೆದ ವಿಶ್ವಮಾನವ ಜನಿಸಿದೂರು, ಹೊರಗಿಂದ ಬಂದವರಿಗೆ ಸೂರು ನೀಡಿದವರು ನಾವುಗಳು, ಕನ್ನಡಿಗರು. ಈಗಲೂ ಕೂಡ ಈ ನಾಡನ್ನು ಆಶ್ರಯಿಸಿಕೊಂಡವರು ಹಲವರು.
ಕರ್ನಾಟಕ, ಕನ್ನಡ ಭಾಷೆ, ಕನ್ನಡಿಗರು ನಾಡಿನ ರಕ್ಷಣೆಗೆ ದುಡಿಯಬೇಕು. ನಮ್ಮ ನಾಡು ನಮ್ಮ ಹೆಮ್ಮೆ. ನಾಡಿನ ನಗುವಿಗೆ ನಾವಿಕರು ನಾವಾಗಬೇಕು.
ಕನ್ನಡಾಂಬೆಯ ಕುಡಿಗಳು ನಾವು,
ಕನ್ನಡ ಮಣ್ಣಿನ ರಕ್ಷಕರು..!
ಕಲಿವೀರರ ನೆರಳಲಿ ಜನಿಸಿಹೆವು
ಕನ್ನಡ ಕಾರ್ಯಕೆ ಕಟಿಬದ್ಧರು..!
ಈ ಭಾವ ಪ್ರತಿ ಕನ್ನಡದ ಮನಸ್ಸಲ್ಲಿಯೂ ಮೂಡಲಿ, ಕನ್ನಡ ದೀವಿಗೆ ಬೆಳಗಲಿ. ನಾವೆಲ್ಲ ಒಂದೇ ಭಾರತಾಂಬೆಯ ಮಕ್ಕಳು, ಕರುನಾಡ ಕುವರರು.
ಕರ್ನಾಟಕದ ಗಡಿಸಮಸ್ಯೆಯೂ ಹಾಗೂ ನೀರಾವರಿ ಸಮಸ್ಯೆ ಈಗ ಎದ್ದು ತೋರುತ್ತಿರುವ ಸವಾಲುಗಳು. ಕೆಲವು ಮನಸ್ಥಿತಿಗಳು ಹೇಗಿವೆ ಎಂದರೆ, ಆಂಧ್ರ ಪ್ರದೇಶ ಒಡೆದು ಎರಡು ರಾಜ್ಯವಾದಂತೆ ಕರ್ನಾಟಕವನ್ನು ಹಾಗೇ ಎರಡು ಭಾಗ ಮಾಡುವ ಹುನ್ನಾರದಲ್ಲಿವೇ. ಇದನ್ನೆಲ್ಲ ಹತ್ತಿಕ್ಕುವ ಶಕ್ತಿ ರಾಜ್ಯದ ನಾಯಕರಿಗೂ, ಗಡಿಬದಿಯ, ನಡುನಾಡಿನ, ವಿಶ್ವದೆಲ್ಲಡೆ ಹರಡಿರುವ ಕನ್ನಡಕುಲಕೋಟಿ ಭಾಂದವರಿಗೂ ಬರಲಿ. ಈ ಭವ್ಯ ನಯನಮನೋಹರ, ನಿರ್ಮಲಹೃದಯಿಗಳ ನಾಡು, ಶ್ರೀಗಂಧದ ಬೀಡು, ಮಲ್ಲೆ ಹಸಿರು ಹೂವುಗಳ ತವರೂರು ತಾರೆಯಂತೆ ತನ್ನಿರವ ಭೂಮಿಸೂರ್ಯರಿರುವವರೆಗೂ ಏಕತೆಯ ಸಾಧನೆಯೊಂದಿಗೆ ನೂರ್ಮಡಿಗೊಳಿಸಿಕೊಳ್ಳಲಿ.
ಕನ್ನಡವೇ ಉಸಿರೆಂದು ಬದುಕುತ್ತಿರುವ ನನ್ನಂತ ಕೋಟ್ಯಾನುಕೋಟಿ ಕನ್ನಡ ಕುಲಪುತ್ರರೂ ಕನ್ನಡ ಚಿರಂಜೀವಿತನಕ್ಕೆ ಕೊಡುಗೈ ದಾನಿಗಳಾಗಬೇಕು.
ಜೈ ಕರ್ನಾಟಕ, ಜೈ ಭಾರತಮಾತೆ.
ಸುರೇಂದ್ರ ಗೌಡ (ಗೌತಮೀಪುತ್ರ)