ಕೋಟ(ಜೂ,15 ): “ಯಕ್ಷಗಾನ ನಮ್ಮ ಕರ್ನಾಟಕದ ಶ್ರೇಷ್ಠ ಕಲೆ. ನಮ್ಮೆಲ್ಲರ ಭೌದ್ಧಿಕ ವಿಕಾಸಕ್ಕೆ ಕಾರಣವಾದ ಕಲೆ. ಬಾಲ್ಯದಲ್ಲಿ ಹೆಚ್ಚು ಹೆಚ್ಚು ಯಕ್ಷಗಾನವನ್ನು ಕಲಿಸಿ, ಪ್ರದರ್ಶಿಸಿದರೆ ನಮ್ಮ ಮಕ್ಕಳಲ್ಲಿ ಪುರಾಣ ಜ್ಞಾನ ಹೆಚ್ಚುತ್ತದೆ. ಬದುಕಿನಲ್ಲಿ ಸಂಸ್ಕಾರ ಮೂಡುತ್ತದೆ. ಸಾಲಿಗ್ರಾಮ ಮಕ್ಕಳ ಮೇಳವು ಐವತ್ತು ವರ್ಷಗಳಿಂದ ಯಕ್ಷ ಕಲಿಕೆಯ ಮೂಲಕ ಪರಂಪರೆಯನ್ನು ಉಳಿಸಿ ಬೆಳೆಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಅಖಿಲ ಭಾರತೀಯ ಮಾಧ್ವ ಮಂಡಳದ ಅಧ್ಯಕ್ಷ ಜಿ. ಕೆ. ಶ್ರೀನಿವಾಸ ಹೇಳಿದರು.
ಯಕ್ಷಗಾನ ಸಾಂಸ್ಕೃತಿಕ ವೇದಿಕೆ ಮತ್ತು ಶ್ರೀ ಕೃಷ್ಣ ಮಂದಿರ ತುಮಕೂರು ಸಂಸ್ಥೆಗಳ ಸಹಯೋಗದೊಂದಿಗೆ ತುಮಕೂರಿನ ಶ್ರೀ ಕೃಷ್ಣ ಮಂದಿರದ ಸಭಾಂಗಣದಲ್ಲಿ ಆಯೋಜಿಸಿದ ಕೋಟದ ಸಾಲಿಗ್ರಾಮ ಮಕ್ಕಳ ಮೇಳದ ಸುವರ್ಣ ಪರ್ವ ಸರಣಿ ಕಾರ್ಯಕ್ರಮ ಸುವರ್ಣ ಸಂಮಾನ- ಯಕ್ಷಗಾನ ಪ್ರದರ್ಶನದಲ್ಲಿ ಮುಖ್ಯ ಅಭ್ಯಾಗತರಾಗಿ ಅವರು ಮಾತನಾಡಿದರು. ಸಾಲಿಗ್ರಾಮ ಮಕ್ಕಳ ಮೇಳದ ಉಪಾಧ್ಯಕ್ಷ ಎಚ್. ಜನಾರ್ದನ ಹಂದೆ ಅಧ್ಯಕ್ಷತೆವಹಿಸಿದ್ದರು. ಶ್ರೀ ಕೃಷ್ಣ ಮಂದಿರದ ಅಧ್ಯಕ್ಷ ಎಚ್. ಶ್ರೀನಿವಾಸ ಹತ್ವಾರ್, ತುಮಕೂರು ಯಕ್ಷಗಾನ ಸಾಂಸ್ಕೃತಿಕ ವೇದಿಕೆಯ ಪ್ರಧಾನ ಸಂಚಾಲಕ ನಾಗರಾಜ ಧನ್ಯ, ಮಕ್ಕಳ ಮೇಳದ ಪ್ರಾಕ್ತನ ಕಲಾವಿದರಾದ ವಿಶ್ವನಾಥ ಉರಾಳ ಉಪಸ್ಥಿತರಿದ್ದರು.
ತುಮಕೂರಿನಲ್ಲಿದ್ದು ‘ಯಕ್ಷ ದೀವಿಗೆ’ ಸಂಸ್ಥೆಯ ಮೂಲಕ ತೆಂಕುತಿಟ್ಟಿನ ಯಕ್ಷಗಾನದ ಮಕ್ಕಳ ಕ್ಷೇತ್ರದಲ್ಲಿ ವಿಶೇಷ ಕೃಷಿ ಮಾಡುತ್ತಿರುವ ಡಾ. ಆರತಿ ಪಟ್ರಮೆ ಮತ್ತು ಡಾ. ಸಿಬಂತಿ ಪದ್ಮನಾಭ ದಂಪತಿಗಳನ್ನು ಸುವರ್ಣ ಸಂಮಾನದೊoದಿಗೆ ಗೌರವಿಸಲಾಯಿತು.
ಮಕ್ಕಳ ಮೇಳದ ಕಾರ್ಯದರ್ಶಿ ಸುಜಯೀಂದ್ರ ಹಂದೆ ಪ್ರಾಸ್ಥಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಯಕ್ಷಗಾನ ಸಾಂಸ್ಕೃತಿಕ ವೇದಿಕೆಯ ಪ್ರಧಾನ ಸಂಚಾಲಕ ಎಮ್. ಅನಂತ ರಾವ್ ವಂದಿಸಿದರು. ಪ್ರಜ್ವಲ್ ಹೆಬ್ಬಾರ್ ನಿರೂಪಿಸಿದರು. ಬಳಿಕ ಆಯ್ದ ವೃತ್ತಿ ಕಲಾವಿದರಿಂದ ಶಶಿಕಾಂತ ಶೆಟ್ಟಿ ನಿರ್ದೇಶನದಲ್ಲಿ ಶ್ರೀ ದೇವಿ ವಿಜಯ ತೆಂಕುತಿಟ್ಟು ಯಕ್ಷಗಾನ ಪ್ರದರ್ಶನ ಸಂಪನ್ನಗೊoಡಿತು.