ಬೈಂದೂರು ( ಆ .01): ನಿವೃತ್ತ ಯೋಧರೂ , ಬರಹಗಾರರೂ ಆಗಿ ಬೈಂದೂರು ಪರಿಸರದಲ್ಲಿ ಖ್ಯಾತರಾಗಿರುವ ಬೈಂದೂರು ಚಂದ್ರಶೇಖರ ನಾವಡರ ಶಿಸ್ತು, ಸ್ನೇಹಪರ ವ್ಯಕ್ತಿತ್ವ, ವೃತ್ತಿಪರತೆ ಸಮಾಜಕ್ಕೆ ಹಾಗೂ ಯುವ ಉದ್ಯೋಗಿಗಳಿಗೆ ಆದರ್ಶವಾಗಬೇಕು. ಶಾಖೆಗೆ ಬರುವ ಗ್ರಾಹಕರನ್ನು ಪ್ರೀತಿಯಿಂದ ಆದರಿಸಿ ಮಾತನಾಡುವ ಅವರ ಗ್ರಾಹಕ ಸ್ನೇಹಿ ನಡವಳಿಕೆ ಅನುಕರಣೀಯ ಎಂದು ಉದ್ಯಮಿ ಶ್ರೀ ರವೀಂದ್ರ ಕಿಣಿ ಶ್ಲಾಘಿಸಿದರು.

ಯೂನಿಯನ್ ಬ್ಯಾಂಕ್ ಬೈಂದೂರು ಶಾಖೆಯಲ್ಲಿ ಸೇವೆಯಿಂದ ನಿವೃತ್ತರಾದ ಉದ್ಯೋಗಿ ಶ್ರೀ ಚಂದ್ರಶೇಖರ ನಾವಡರ ವಿದಾಯ ಸಮಾರಂಭದಲ್ಲಿ ಅವರು ಮಾತನಾಡಿದರು. ಸಾಹಿತಿ ಪುಂಡಲೀಕ ನಾಯಕರು ಮಾತನಾಡಿ ನಾವಡರು ಸಾಹಿತ್ಯ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಬೈಂದೂರು ಭಾಗದಲ್ಲಿ ಗುರುತಿಸಲ್ಪಟ್ಟಿದ್ದಾರೆ ಎಂದರು.

ಗ್ರಾಹಕ ಶ್ರೀ ಸುರೇಶ ಗಾಣಿಗ ಅವರು ಮಾತನಾಡಿ ನಾವಡರು ವೃತ್ತಿಯ ಜತೆಯಲ್ಲಿ ಪ್ರವೃತ್ತಿಗೂ ಸಮಯ ಹೊಂದಿಸಿಕೊಂಡು ತೊಡಗಿಸಿ ಕೊಂಡಿರುವುದು ಖುಷಿ ಕೊಡುವ ವಿಚಾರ ಎಂದರು. ಶಾಖೆಯ ಉಪ ಪ್ರಬಂಧಕ ಶ್ರೀ ಗಣಪತಿ ಭಟ್ ಪ್ರಾಸ್ತಾವಿಕ ನುಡಿಯಾಡಿ ನಾವಡರು ತಮ್ಮ ದಕ್ಷತೆ ಮತ್ತು ಬದ್ಧತೆಯಿಂದ ಎಲ್ಲರಿಗೂ ಪ್ರಿಯರಾಗಿದ್ದರು ಎಂದರು. ಪ್ರಬಂಧಕ ಶ್ರೀ ಆತ್ರೇಯ ಪ್ರಭು ಚಂದ್ರಶೇಖರ ನಾವಡರಿಗೆ ಬೆಳ್ಳಿಯ ಸ್ಮರಣಿಕೆ ನೀಡಿ ಗೌರವಿಸಿದರು ಹಾಗೂ ವಂದನಾರ್ಪಣೆ ಮಾಡಿದರು.











