ಕುಂದಾಪುರ, (ಫೆ 15) : ಸ್ವತಂತ್ರ ಮತ್ತು ಸ್ಟೇಚ್ಛಾಚಾರಗಳ ನಡುವಿನ ಮೊರೆ ಇನ್ನಷ್ಟು ತೆಳುವಾಗುತ್ತಿರುವ ಈ ಬಿಗುಮಾನದ ಕಾಲಘಟ್ಟದಲ್ಲಿ ಸಮಾಜದ ಸ್ವಾಸ್ಥ್ಯಕ್ಕಾಗಿ, ಸಮಷ್ಠಿಯ ಹಿತಕ್ಕಾಗಿ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಜವಾಬ್ದಾರಿ ಶಿಕ್ಷಕರಷ್ಟೇ ಪೋಷಕರಿಗೂ ಇದೆ ಎಂದು ಕುಂದಾಪುರ ಆಯುಷ್ಧಾಮದ ವ್ಯವಸ್ಥಾಪಕ ನಿರ್ದೇಶಕರಾದ ಡಾ| ಬಿ. ವಿನಯಚಂದ್ರ ಶೆಟ್ಟಿ ಹೇಳಿದರು. ಅವರು ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಫೆಬ್ರವರಿ 13ರಂದು ನಡೆದ ರಕ್ಷಕ-ಶಿಕ್ಷಕ ಸಂಘದ ಸಭೆಯಲ್ಲಿ ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರು ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ.ಎಂ. ಸುಕುಮಾರ ಶೆಟ್ಟಿಯವರು ಮಾತನಾಡಿ, ಶಿಸ್ತುಬದ್ಧ ಶೈಕ್ಷಣಿಕ ವಾತಾವರಣದಿಂದ ಕೂಡಿರುವ ಕಾಲೇಜು ಅತ್ಯಂತ ಕಿರು ಅವಧಿಯಲ್ಲಿ ಮಂಗಳೂರು ವಿ.ವಿ. ವ್ಯಾಪ್ತಿಯಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಕಾಲೇಜಿನಲ್ಲಿ ಉತ್ಕೃಷ್ಟ ಮಟ್ಟದ ಬೋಧನೆ ಇದ್ದು, ವಿದ್ಯಾರ್ಥಿ ಸ್ನೇಹಿ ವಾತಾವರಣದೊಂದಿಗೆ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿಯವರು ರಕ್ಷಕ-ಶಿಕ್ಷಕ’ ಸಭೆಯ ಧೈಯ-ಉದ್ದೇಶಗಳ ಕುರಿತು ಮಾತನಾಡಿದರು. ರಕ್ಷಕ-ಶಿಕ್ಷಕ ಸಂಘದ ಕಾರ್ಯದರ್ಶಿ ಹಾಗೂ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಸುಧಾಕರ್ ಪಾರಂಪಳ್ಳಿ ಸ್ವಾಗತಿಸಿ, ಉಪ ಪ್ರಾಂಶುಪಾಲರಾದ ಶ್ರೀ ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಸಿದರು. ಇಂಗ್ಲೀಷ್ ಉಪನ್ಯಾಸಕಿ ಶ್ರೀಮತಿ ದೀಪಿಕಾ ರಾಘವೇಂದ್ರ ವಂದಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಆಶಾ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿ, ನಿರೂಪಿಸಿದರು.