ಕುಂದಾಪುರ (ಜು.17): ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕಾದರೆ ದೃಢ ಸಂಕಲ್ಪವನ್ನು ಹೊಂದಬೇಕು, ಉತ್ತಮ ನಡವಳಿಕೆ ಹಾಗೂ ಶಿಸ್ತನ್ನು ಬದುಕಿನಲ್ಲಿ ಅಳವಡಿಸಿಕೊಂಡು ತಮ್ಮ ಹೆತ್ತವರಿಗೆ, ಕಲಿತ ಶಿಕ್ಷಣ ಸಂಸ್ಥೆಗೆ ಹಾಗೂ ಸಮಾಜಕ್ಕೆ ಕೀರ್ತಿ ತರಬೇಕು ಎಂದು ಸಿದ್ದಾಪುರದ ಜ್ಞಾನ ಸರಸ್ವತಿ ಪದವಿ-ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಅಮರೇಶ್ ಹೆಗ್ಡೆ ಹೇಳಿದರು.

ಅವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗಾಗಿ ಕಾಲೇಜಿನ ಐಕ್ಯೂಎಸಿ ಘಟಕ ಹಮ್ಮಿಕೊಂಡ ‘ಪ್ರೇರಣಾ’ ಶಿಬಿರದಲ್ಲಿ ‘ನಡವಳಿಕೆ ಹಾಗೂ ಶಿಸ್ತು’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಡಾ| ಕೆ. ಉಮೇಶ್ ಶೆಟ್ಟಿ, ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ, ಕಾಲೇಜಿನ ಐಕ್ಯೂಎಸಿ ಸಂಯೋಜಕರಾದ ಶ್ರೀಮತಿ ದೀಪಿಕಾ ಜಿ., ಐಕ್ಯೂಎಸಿ ಸಹ ಸಂಯೋಜಕರಾದ ಶ್ರೀ ರಕ್ಷಿತ್ ರಾವ್ ಗುಜ್ಜಾಡಿ ಹಾಗೂ ಶೈಕ್ಷಣಿಕ ನಿಕಾಯಕರಾದ ಶ್ರೀ ತಿಮ್ಮಪ್ಪ ಡಿ.ಎಸ್. ಉಪಸ್ಥಿತರಿದ್ದರು.

ವ್ಯವಹಾರ ಆಡಳಿತ ವಿಭಾಗದ ಸಹ ಪ್ರಾಧ್ಯಾಪಕರಾದ ಶ್ರೀ ಪ್ರವೀಣ್ ಮೊಗವೀರ ಗಂಗೊಳ್ಳಿ ಅತಿಥಿಗಳನ್ನು ಪರಿಚಯಿಸಿದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ರಶ್ಮಿತಾ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.










