ಉಡುಪಿ (ಫೆ. 16) : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಡುಪಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಸರ್ಕಾರಿ ಬಾಲಕಿಯರ ಬಾಲಮಂದಿರದ ಮಕ್ಕಳಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ ಫೆಬ್ರವರಿ 14 ರಂದು ನಡೆಯಿತು.
ಮಕ್ಕಳ ಕಲ್ಯಾಣ ಸಮಿತಿ ನಿಟ್ಟೂರು ಇದರ ಅಧ್ಯಕ್ಷರಾದ ರೊನಾಲ್ಡ್ ಫುರ್ಟಾಡೋ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಕ್ಕಳು ದೇಶದ ಸಂಪತ್ತು ಅವರು ಕಲಿಕೆಯೊಂದಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡುತ್ತಿರುವುದು ಪ್ರಶಂಸನೀಯ, ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸದಾನಂದ ನಾಯಕ್ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಯಾದ ಭಾಸ್ಕರ್.ಎ ಅಮೀನ್ ಹಾಗೂ ಸೃಷ್ಟಿ ಇನ್ಫೋಟೆಕ್ ಕುಂದಾಪುರದ ಮುಖ್ಯಸ್ಥರಾದ ಶ್ರೀ ಹರ್ಷ ವರ್ಧನ್ ಶೆಟ್ಟಿ ಉಪಸ್ಥಿತರಿದ್ದರು.
ಬಾಲಮಂದಿರದ ಮಕ್ಕಳಿಗೆ ಒಂದು ತಿಂಗಳು ಕಂಪ್ಯೂಟರ್, ಟೈಲರಿಂಗ್ ಹಾಗೂ ಬ್ಯುಟಿಷಿಯನ್ ತರಬೇತಿಯನ್ನು ಸೃಷ್ಟಿ ಇನ್ಫೋಟೆಕ್ ಕುಂದಾಪುರದ ವತಿಯಿಂದ ನೀಡಲಿದ್ದೆವೆ ಎಂದು ಹರ್ಷವರ್ಧನ್ ಶೆಟ್ಟಿ ತಿಳಿಸಿರುತ್ತಾರೆ.