ಗಂಗೊಳ್ಳಿ (ಫೆ.26) ಜಿಲ್ಲೆಯ ಪ್ರಮುಖ ಮೀನುಗಾರಿಕಾ ಬಂದರುಗಳಲ್ಲಿ ಒಂದಾಗಿರುವ ಗಂಗೊಳ್ಳಿ ಮೀನುಗಾರಿಕಾ ಬಂದರಿನ ಮೀನುಗಾರಿಕೆ ಜೆಟ್ಟಿಯ ಸುಮಾರು 12 ಕೋಟಿ ರೂ. ವೆಚ್ಚದ ಪುನರ್ ನಿರ್ಮಾಣ ಕಾಮಗಾರಿ ಮತ್ತು ಒಂದು ಕೋಟಿ ರೂ. ವೆಚ್ಚದ ಮೀನುಗಾರಿಕಾ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಗುದ್ದಲಿ ಪೂಜೆ ನೆರವೇರಿಸಿದರು.
ಕ್ಷೇತ್ರದ ಸಮಗ್ರ ಅಭಿವೃದ್ಧಿಯಯ ಜೊತೆಗೆ ಗಂಗೊಳ್ಳಿ ಬಂದರಿನ ಅಭಿವೃದ್ಧಿಯ ಕುರಿತು ವಿಶೇಷ ಗಮನ ವಹಿಸಿದ್ದು, ಬಂದರು ಮತ್ತು ಮೀನುಗಾರಿಕಾ ರಸ್ತೆಗಳ ಅಭಿವೃದ್ಧಿಗೆ ಸರಕಾರ ಸಿದ್ದವಿದೆ . ಈಗಾಗಲೇ ಬಂದರಿನ ಜೆಟ್ಟಿ ಪುನರ್ ನಿರ್ಮಾಣ, ಗಂಗೊಳ್ಳಿಯಿಂದ ಶಿರೂರು ತನಕ ಮೀನುಗಾರಿಕಾ ರಸ್ತೆಗೆ 36 ಕೋಟಿ ಅನುದಾನ ನೀಡಲಾಗಿದ್ದು. ಬೈಂದೂರು ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಈಗಾಗಲೇ 1600 ಕೋಟಿ ರೂ. ಹೆಚ್ಚು ಅನುದಾನ ಲಭಿಸಿದೆ ಎಂದು ಅವರು ಹೇಳಿದರು.
ಜೆಟ್ಟಿ ಪುನರ್ ನಿರ್ಮಾಣಕ್ಕಾಗಿ ಮೀನುಗಾರರು ಬಹಳಷ್ಟು ಬೇಡಿಕೆ ಸಲ್ಲಿಸಿದ್ದು, ಅವರ ಬೇಡಿಕೆಗೆ ಸ್ಪಂದಿಸುವುದು ನನ್ನ ಕರ್ತವ್ಯ. ಸಂಸದ ಬಿ.ವೈ ರಾಘವೇಂದ್ರ ಹಾಗೂ ಮೀನುಗಾರಿಕಾ ಸಚಿವರ ಮುತುವರ್ಜಿಯಲ್ಲಿ ಕಾಮಗಾರಿಗೆ ಅನುದಾನ ಲಭಿಸಿದೆ. ಮುಂದಿನ ದಿನಗಳಲ್ಲಿ ಉತ್ತಮ ಗುಣಮಟ್ಟದಲ್ಲಿ ಜೆಟ್ಟಿ ಹಾಗೂ ಬಂದರು ರಸ್ತೆ ನಿರ್ಮಾಣವಾಗುವ ವಿಶ್ವಾಸವಿದೆ ಎಂದು ಶಾಸಕರು ಹೇಳಿದರು.
ಜಿ.ಪಂ ಸದಸ್ಯೆ ಶೋಭಾ ಜಿ.ಪುತ್ರನ್, ತಾ.ಪಂ ಸದಸ್ಯ ಸುರೇಂದ್ರ ಖಾರ್ವಿ, ಗಂಗೊಳ್ಳಿ ಗ್ರಾ.ಪಂ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಉಪಾಧ್ಯಕ್ಷೆ ಪ್ರೇಮಾ ಪೂಜಾರಿ, ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಶೆಟ್ಟಿ, ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಸದಾಶಿವ ಖಾರ್ವಿ, ಗಂಗೊಳ್ಳಿ ಹಸಿ ಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಜನಾರ್ದನ ಖಾರ್ವಿ, ಬಂದರು ಮತ್ತು ಮೀನುಗಾರಿಕೆ ಇಲಾಖೆಯ ಎಕ್ಸಿಕ್ಯೂಟಿವ್ ಇಂಜಿನಿಯರ್ ಮಂಚೇಗೌಡ, ಗಂಗೊಳ್ಳಿ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಅಂಜನಾದೇವಿ, ಇಂಜಿನಿಯರ್ ವಿಜಯ್ ಶೆಟ್ಟಿ, ಎಸ್. ಉದಯಕುಮಾರ್ ಶೆಟ್ಟಿ, ಗಂಗೊಳ್ಳಿ ಗ್ರಾಮ ಪಂಚಾಯತ್ ಸದಸ್ಯರು, ಮೀನುಗಾರ ಸಂಘಟನೆಗಳ ಮುಖಂಡರು, ಗುತ್ತಿಗೆದಾರರಾದ ಕಮಲ ಕಿಶೋರ್ ಹೆಗ್ಡೆ, ರೋಹನ್ ಡಿಕೋಸ್ತಾ, ವಿಶ್ವನಾಥ್ ಶೆಟ್ಟಿ ಬಾಳಿಕೆರೆ, ಬಿಜೆಪಿ ಮುಖಂಡರು, ಉಡುಪಿ ಜಿಲ್ಲಾ ಮೀನುಗಾರ ಪ್ರಕೋಷ್ಠದ ಸಹ ಸಂಚಾಲಕ ಸಂದೀಪ ಖಾರ್ವಿ, ಕಾರ್ಯಕರ್ತರು ಮತ್ತಿತರರು ಉಪಸ್ಥಿತರಿದ್ದರು. ವಿರೇಶ್ವರ ದೇವಾಲಯದ ಪುರೋಹಿತರಾದ ಜಿ. ಲಕ್ಷ್ಮೀನಾರಾಯಣ ಭಟ್ ಧಾರ್ಮಿಕ ವಿಧಿ ವಿಧಾನಗಳನ್ನು ನೇರವೇರಿಸಿದರು.













