ಬೈಂದೂರು (ಫೆ.28): ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಇನ್ನು ಕೆಲವು ಸಮಯ ಬೇಕಾಗುತ್ತದೆ. ಗೃಹ ಉತ್ಪನ್ನಗಳು, ವ್ಯಾಪಾರ ಕ್ಷೇತ್ರಗಳು ಹೀಗೆ ಎಲ್ಲಾ ವಹಿವಾಟುಗಳು ಚೇತರಿಸಿಕೊಳ್ಳಲು ತುಂಬಾ ಸಮಯ ಬೇಕಾಗಿರುವುದರಿಂದ ಸಾರ್ವಜನಿಕರು ತಮ್ಮ ದಿನನಿತ್ಯ ವ್ಯಾಪಾರ- ವಹಿವಾಟು ಸುಧಾರಿಸಲು ಕಠಿಣ ಪರಿಶ್ರಮ ಪಡಬೇಕಾದ ಅಗತ್ಯವಿದೆ. ಬ್ಯಾಂಕಿನ ವಿವಿಧ ಯೋಜನೆಗಳ ಬಗ್ಗೆ ಗ್ರಾಹಕರು ಮಾಹಿತಿಯನ್ನು ಪಡೆದುಕೊಳ್ಳುವ ಉದ್ದೇಶದಿಂದ ಈ ಆರ್ಥಿಕ ಸಾಕ್ಷರತಾ ಶಿಬಿರ ಆಯೋಜಿಸಿದ್ದೇವೆ. ಆದಷ್ಟು ನಗದುರಹಿತ ವ್ಯವಹಾರ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಾಯಧನವನ್ನು ಪಡೆದು ದೇಶದ ಆರ್ಥಿಕ ಚೇತರಿಕೆಗೆ ಜನತೆ ಶ್ರಮಿಸ ಬೇಕು ಎಂದು ಹೆಮ್ಮಾಡಿ ಗ್ರಾಮೀಣ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಸುಬ್ರಹ್ಮಣ್ಯ ರಾವ್ ಹೇಳಿದರು.
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಹೆಮ್ಮಾಡಿ ಶಾಖೆ ,ನಬಾರ್ಡ್ ಬೆಂಗಳೂರು, ಮಹಾವಿಷ್ಣು ಯುವಕ ಮಂಡಲ ಕಟ್ ಬ್ಯಾಲ್ತೂರು ಹಾಗೂ ಶ್ರೀ ಜನನಿ ಸ್ವಸಾಯ ಸಂಘ ಇವರ ಜಂಟಿ ಆಶ್ರಯದಲ್ಲಿ ಅಯೋಜಿಸಿದ್ದ ಆರ್ಥಿಕ ಸಾಕ್ಷರತಾ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಸ್ಥಳೀಯ ಗ್ರಾಹಕರಾದ ಶ್ರೀಮತಿ ಶಾಂತ ಪ್ರಕಾಶ್ ನಾವುಡ ಇವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ದೇಶದಲ್ಲಿ ಅಂತರ್ಜಾಲ ಮೂಲಕ ವ್ಯವಹಾರವನ್ನು ಹೆಚ್ಚಿಸಲು ಸರ್ಕಾರ ಗ್ರಾಮೀಣ ಮಟ್ಟದಲ್ಲಿ ಹೆಚ್ಚಿನ ಮಾಹಿತಿ ಕಾರ್ಯಕ್ರಮ ನಡೆಸಬೇಕೆಂದು ಅವರು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿಷ್ಣು ಯುವಕ ಸಂಘದ ನರಸಿಂಹ ಗಾಣಿಗ ವಹಿಸಿಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಿದ ಶ್ರೀ ಶಕ್ತಿ ಸಂಘದ ಸದಸ್ಯರಿಗೆ ಹಣಕಾಸಿನ ಸಲಹೆಯನ್ನು ನೀಡಿದರು. ಸ್ವಸಾಯ ಸಂಘದ ಶ್ರೀಮತಿ ಸುನೀತಾ ಪ್ರಸನ್ನ ಉಪಸ್ಥಿತರಿದ್ದರು. ಸುಧೀರ್ ಗಾಣಿಗ ಸ್ವಾಗತಿಸಿದರು. ರವಿ ದೇವಾಡಿಗ ಉಪ್ಪುಂದ ವಂದಿಸಿದರು. ಯುವಕ ಮಂಡಲದ ಕಿಶೋರ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.