ವಂಡ್ಸೆ ( ಮಾ. 3) ಸಮಾಜದಿಂದ ಪಡೆದಿದ್ದನ್ನು ಪುನ: ಸಮಾಜಕ್ಕೆ ನೀಡಬೇಕಾಗಿದ್ದು ಮನುಷ್ಯ ಧರ್ಮ. ಆ ನಿಟ್ಟಿನಲ್ಲಿ ಡಾ.ಜಿ. ಶಂಕರ್ ರವರು ತಮ್ಮ ಫ್ಯಾಮಿಲಿ ಟ್ರಸ್ಟ್ ಮೂಲಕ ಅನೇಕ ರೀತಿಯಲ್ಲಿ ಜನಸೇವೆ ಮಾಡುತ್ತಾ ಸಮಾಜದ ನೋವು ನಲಿವುಗಳಿಗೆ ಸ್ಪಂದಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಸಂಸದ ಬಿ.ವೈ. ರಾಘವೇಂದ್ರ ರವರು ಹೇಳಿದರು.
ಅವರು ಮಾ.3 ರಂದು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಕೊಲ್ಲೂರು ದೇವಸ್ಥಾನಕ್ಕೆ ನೀಡಿದ ಅಮ್ಮ ವಿಶ್ರಾಂತಿಗೃಹದ ಹಸ್ತಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಡಾ.ಜಿ ಶಂಕರ್ ರವರ ಸಮಾಜ ಮುಖಿ ಕಾರ್ಯಕ್ರಮಗಳ ಕುರಿತು ಮೆಚ್ಚುಗೆ ವ್ಯಕ್ತ ಪಡಿಸುತ್ತಾ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬೈಂದೂರಿನ ಶಾಸಕರಾದ ಬಿ.ಎಂ ಸುಕುಮಾರ ಶೆಟ್ಟಿ ಮಾತನಾಡಿ ಜಿ. ಶಂಕರ್ ರವರು ಓರ್ವ ಸಮಾಜಮುಖಿ ಹೋರಾಟಗಾರ, ಸರಳ ಸಜ್ಜನಿಕೆಯ ವ್ಯಕ್ತಿ, ಎಂದಿಗೂ ಪ್ರಚಾರ ಬಯಸದೆ ಸಮಾಜದ ಅಶಕ್ತರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುವ ವ್ಯಕ್ತಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಸರ್ವರನ್ನು ಸ್ವಾಗತಿಸುತ್ತಾ ಮಾತನಾಡಿದ ಡಾ. ಜಿ ಶಂಕರ್ “ಅಮ್ಮ” ವಸತಿ ಗ್ರಹ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಹಸ್ತಾಂತರಿಸುವುದರ ಜೊತೆಗೆ ತಾಯಿ ಮೂಕಾಂಬಿಕೆ ಸೇವೆಸಲ್ಲಿಸಿದ ಸಂತೃಪ್ತಿ ನನಗಿದೆ ಎಂದು ಹೇಳಿದರು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಉಳಿದುಕೊಳ್ಳಲು ಅನುಕೂಲವಾಗುವಂತೆ ಸುಮಾರು 2.50 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತವಾದ ‘ಅಮ್ಮ’ ವಿಶ್ರಾಂತಿಗೃಹವನ್ನು ನಿರ್ಮಿಸಲಾಗಿದೆ ಎಂದು ಅವರು ಹೇಳಿದರು.
ಹಾಗೆಯೇ ಸರ್ಕಾರ ಮತ್ತು ಜನಪ್ರತಿನಿಧಿಗಳು ಸಮಾಜದ ಹಿಂದುಳಿದ ವರ್ಗಗಳ ಮತ್ತು ಮೀನುಗಾರರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದು, ಮುಂದಿನ ದಿನಗಳಲ್ಲಿಯೂ ಸಹ ಮೀನುಗಾರರ ಭಾವನೆಗಳಿಗೆ ಸ್ಪಂದಿಸಬೇಕು ಎಂದು ಹೇಳಿದರು.
ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಆಡಳಿತಾಧಿಕಾರಿ ಹಾಗೂ ಸಹಾಯಕ ಕಮಿಷನರ್ ಕೆ.ರಾಜು, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಎಸ್.ಬಿ.ಮಹೇಶ್, ಜಿಲ್ಲಾ ಪಂಚಾಯತ್ ಸದಸ್ಯ ಶಂಕರ್ ಪೂಜಾರಿ, ಕೊಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶಿವರಾಮಕೃಷ್ಣ ಭಟ್, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಅರ್ಚಕರಾದ ಶ್ರೀ ರಾಮಚಂದ್ರ ಅಡಿಗ ಮುಖ್ಯ ಅತಿಥಿಯಾಗಿ ಉಪಸ್ಥಿತರಿರದ್ದರು. ಮೊಗವೀರ ಯುವ ಸಂಘಟನೆ(ರಿ) ಉಡುಪಿ ಇದರ ಜಿಲ್ಲಾಧ್ಯಕ್ಷರಾದ ಶಿವರಾಂ ಕೋಟ ವಂದಿಸಿದರು. ಅಶೋಕ ತೆಕ್ಕಟ್ಟೆ ಕಾರ್ಯಕ್ರಮವನ್ನು ನಿರೂಪಿಸಿದರು.