ಬದುಕು ಎಂದರೇನು? ಇದನ್ನುತಿಳಿಯೋ ಪ್ರಯತ್ನ ಹಲವು ಬಾರಿ ಮಾಡಿದ್ದುಂಟು.ಅದೆಷ್ಟೋ ಬಾರಿ ಇನ್ನೊಬ್ಬರ ಇಷ್ಟಕ್ಕೆ , ನಮ್ಮ ಇಷ್ಟ- ಕಷ್ಟ ಬದಲಾಗುತ್ತಿದ್ದಾಗ, ನಾವು ಮಾಡುತಿರುವುದಂತೂ ಪ್ರದರ್ಶನ ಅನ್ನಿಸುವುದಂತೂ ಸತ್ಯ.
ಈ ನಾಟಕವೇಕೆ? ಅಂದ ಮಾತ್ರಕೆ ಇವರೆಲ್ಲರ ಮಾತೇಕೆ ಒಪ್ಪಬೇಕು.! ಒಮ್ಮತ ಸೂಚಿಸದೇ ಹೋದರೆ?
ಆಗಂತೂ, ಅವರ ಮಾತಿಗೆ, ಅಪವಾದಕ್ಕೆ ಎಲ್ಲಿ ಬಲಿಯಾಗುತ್ತೇವೆನೊ ಎನ್ನುವ ಭಯ, ಅದನ್ನು ಮೀರಿ ಒಬ್ಬಂಟಿಯಾಗಿ ಹೋರಾಡೋ ಮನಸು ಮಾಡಿದಾಗ, ಮುಂದೆ ನಿಲ್ಲೋ ಸವಾಲು ಹಲವಾರು…
ನಮ್ಮ ಮಾತೇ ದಿಕ್ಕರಿಸಿರುವೇ..!?, ಮುಂದೇನಾಗುತ್ತೆ ನಾನು ನೋಡುವೆ?
ಪ್ರಯತ್ನದಲ್ಲಿ ಸಫಲತೆ ಕಂಡರೆ ‘ನಾನು, ನನ್ನಿಂದ’ ಎಂದು ಪಕ್ಷ ಬದಲಿಸುವುದು ಒಂದು ಕಡೆಯಾದರೆ, ಸೋತರೇ ಅವರ ಹೇರಿಕೆಗೆ ಮರಳಿ ಅವರ ತಾಳಕ್ಕೆ ತಕ್ಕಂತೆ ಕುಣಿಯೋ ಕೆಲಸ. ಇಂಥ ಪರಿಸ್ಥಿತಿಯನ್ನು ತಡೆಯಲೂ ಅವರ ಮಾತನ್ನು ಮೊದಲೇ ಒಪ್ಪಿ ಬಿಡುವುದು ಸರಿಯೇ! ಈ ಭಯದಿಂದಲೇ ಬದುಕುಗಳು ಭದ್ರತೆಯನ್ನು ಇನ್ನೊಬ್ಬರಲ್ಲಿ ಕಂಡುಕೊಳ್ಳುತ್ತಿದೆ. ಇನ್ನು ಬದಲಾವಣೆ ಎಲ್ಲಿ!
ನಮ್ಮ ಬದುಕಿನಲ್ಲಿ ಮೂರು ರೀತಿಯ ವ್ಯಕ್ತಿಗಳ ಗುಂಪು ಎದುರಾಗುತ್ತವೆ. ಒಂದು ನಾವಾದರೆ, ಇನ್ನೊಂದು ಕುಟುಂಬ, ಮೂರನೇಯದು ಸಮಾಜ (ಸಂಬಂಧ ಪಡದ ವ್ಯಕ್ತಿಗಳು).
ಈ ಮೂರನೇ ವ್ಯಕ್ತಿಗಳು ನಮ್ಮ ಬದುಕನ್ನು ಹೇಗೆ ಬದಲಿಸುತ್ತಾರೆ ಎಂದರೆ ನಮ್ಮ ಬದುಕಂತೂ ಇವರ ಕೈಯಲ್ಲೇ ಇದೆ ಎನ್ನುವಂತೆ! ಸಭೆ ಸಮಾರಂಭಗಳಲ್ಲಿ ಅಷ್ಟೊಂದು ಪಾಲ್ಗೊಳ್ಳದ್ದಿದ್ದರೂ ಮನೆಯವರ ಒತ್ತಾಯದ ಮೇಲೆ ಬಂದ ನಮ್ಮನ್ನು ಅಪರೂಪವಾಗಿ ಕಂಡ ಈ ಮೂರನೇ ಗುಂಪಿನವರು ಬಹು ಕಾತುರತೆಯಲಿ “ಎನ್ ಮಾಡ್ತಾ ಇದ್ದೀಯಾ!, ಓದು, ಕೆಲಸ, ಮದುವೆ..! ಹಾಗೇಕಿಲ್ಲ? ಹೀಗೆ ಮಾಡು.. ನನ್ನ ಮಕ್ಕಳು ಹೀಗೆ ಮಾಡಿದ್ದಾರೆ”…. ಇವೆಲ್ಲವೂ ಇವರ ದೊಡ್ಡಸ್ಥಿಕೆ ಕೊಚ್ಚಿಕೊಳ್ಳಲೂ ನಮಗೆ ಉಪದೇಶ ನೀಡುವಂತೆ ಮಾಡುತಿರೋ ನಾಟಕ. ಇಂಥಾ ಕೀಳು ಆಲೋಚನೆ. ಇನ್ನೂ ಸುಮ್ಮನಾಗದೇ ಮರಳಿ ಪ್ರಶ್ನಿಸಿ ವ್ಯಂಗ್ಯ ಮಾತಿನ ಪೆಟ್ಟು ಕೊಡುತಿರೋ ಈ ಮಹಾನುಭಾವರಂತೂ ನಮ್ಮಿಂದ ಬಯಸುತ್ತಿರುವುದಾದರೂ ಎನು!?
ಇವರ ಕುತೂಹಲ ಪ್ರಶ್ನೆಗಳಿಗೆ “ಯಾಕೆ…!?” ಎಂದು ಮರಳಿ ಪ್ರಶ್ನಿಸೋ ಪ್ರಯತ್ನ ಹಲವಾರು ಬಾರಿ ಮಾಡಿದ್ದೆ. ಆಗೆಲ್ಲಾ ಅಮ್ಮನ ಮಾತಿಗೆ ಕಟ್ಟು ಬಿದ್ದಿದ್ದೆ ಹೆಚ್ಚು. ಈ ಮೂರನೇ ಕಣ್ಣಿಗಾಗಿ … ನನ್ನ ಕನಸುಗಳ ಕಟ್ಟಿ ಹಾಕಿದ್ದು, ಧ್ವನಿ ಎತ್ತಲಾಗದೇ ಮೌನಿಯಾಗಿದ್ದು..
ಇಂಥ ಗಾಳಿಮಾತಿಗೆ ಅದೆಷ್ಟು ಕನಸುಗಳ ಶಾಪ ತಟ್ಟಿದ್ದರೂ ಇದರ ವಾಸ್ತವವಂತೂ ಹೀಗೆ ಇದೆ.
“ಪ್ರಪಂಚದಲ್ಲಿ ಯಾಕೆ ದುಃಖಿಗಳಾಗಿದ್ದಾರೆ.” ಎಂಬ ನಾರದರ ಪ್ರಶ್ನೆಗೆ ಶ್ರೀ ಕೃಷ್ಣನು ಮುಗುಳ್ನಗುತ್ತಾ ಹೇಳಿದನಂತೆ “ಸುಖ ಎಲ್ಲರ ಬಳಿಯು ಇದೆ, ಆದರೆ ಎಲ್ಲರು ಇನ್ನೊಬ್ಬರ ಖುಷಿಯಿಂದ ದುಃಖಿತರಾಗಿದ್ದಾರೆ ಅಷ್ಟೇ” ಎಂದು. ಹಾ, ಇದಂತೂ ವಾಸ್ತವದ ಮಾತು . ನಮ್ಮ ಮೇಲೆ ನಮಗಿಲ್ಲದ ಕಾಳಜಿ ಇನ್ನೊಬ್ಬರ ಮೇಲೆ ಇಷ್ಟೇಕೆ.!?
ಆ ಕುತೂಹಲ, ಅಥವಾ ವ್ಯಂಗ್ಯ ನಿಲುವುಗಳು ‘ಹಟ ಹಿಡಿದಿರೋ ವ್ಯಕ್ತಿ’ಗೆ ಸವಾಲಾಗಿ ನಿಂತ ನೀವೇ ಶಿಖರವೇರಲೂ ಕಾರಣವಾಗಿರಲೂ ಬಹುದು. ಅದೇ ಸೋತ ಮನಸಿನ ಮುಗ್ಧ ವ್ಯಕ್ತಿಗಳಿಗೆ ಈ ಕೊಂಕು ಮಾತು ಖಿನ್ನತೆಯನ್ನು ತಂದೊಡ್ಡಿ ಬದುಕೇ ನಾಶವಾಗಿರಲೂ ಬಹುದು.
“ಒಳ್ಳೆಯದ್ದು ಮಾಡದ್ದಿದ್ರೂ ಪರವಾಗಿಲ್ಲ. ನಮ್ಮಿಂದ ಕೆಡುಕಾಗುವುದನ್ನ ತಪ್ಪಿಸಿ”.
ಕಂಡವರ ಬದುಕಿಗೆ ಕಲ್ಲು ತೂರಾಟ ನಿಲ್ಲಿಸಿ, ಕಳೆದ ಕನಸುಗಳ ಹುಡುಕುವ ಪ್ರಯತ್ನ ಮಾಡೋಣ.
ಅರ್ಚನಾ.ಆರ್. ಕುಂದಾಪುರ