ಉಡುಪಿ (ಮಾ. 30): ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಆಂತರಿಕ ಗುಣಮಟ್ಟ ಖಾತ್ರಿ ಘಟಕವು ನವದೆಹಲಿಯ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತಿನ ಸಹಯೋಗದೊಂದಿಗೆ “ಉನ್ನತ ಶಿಕ್ಷಣ ರಂಗದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ -2020ರ ಪರಿಣಾಮಗಳು” ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ. ಸಿ. ಕೆ. ಮಂಜುನಾಥ್ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಇವರು ತಮ್ಮ ಉಪನ್ಯಾಸದಲ್ಲಿ ಭಾರತದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಹಿನ್ನೆಲೆಯನ್ನು ವಿವರಿಸಿದರು. ಇದಲ್ಲದೆ ರಾಷ್ಟ್ರೀಯ ಶಿಕ್ಷಣ ನೀತಿ- 2020 ರ ಧೈಯೋದ್ದೇಶವನ್ನು ಸುದೀರ್ಘವಾಗಿ ವಿವರಿಸಿದರು. ಪ್ರಾಥಮಿಕ ಶಿಕ್ಷಣದಿಂದ ಮೊದಲುಗೊಂಡು ರಾಷ್ಟ್ರೀಯ ಶಿಕ್ಷಣ ನೀತಿ – 2020 ರ ಅಡಿಯಲ್ಲಿ ನೂತನ ಶಿಕ್ಷಣ ವ್ಯವಸ್ಥೆ ಹೇಗಿರುತ್ತದೆ ಎಂಬ ಪರಿಪೂರ್ಣ ಕಲ್ಪನೆಯನ್ನು ನೀಡಿದರು.
ಕಾರ್ಯಕ್ರಮದ ಸಂಯೋಜಕರಾದ ಕಾಲೇಜಿನ ಡೀನ್ ಡಾ. ಸುದರ್ಶನ್ ರಾವ್ ಕೆ ಕಾರ್ಯಕ್ರಮವನ್ನು ನಿರೂಪಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಉಪಪ್ರಾಂಶುಪಾಲರಾದ ಡಾ ಗಣೇಶ್ ಐತಾಳ್, ವಿವಿಧ ವಿಭಾಗದ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.