ಬೆಂಗಳೂರು (ಏ, 13): ಟ್ರೇಲರ್ ಮೂಲಕ ಬಾರೀ ಸದ್ದು ಮಾಡುತ್ತಾ, ಸಾಮಾಜಿಕ ಜಾಲತಾಣಗಳಲ್ಲಿ ನಿರೀಕ್ಷೆಗೂ ಮೀರಿ ಪ್ರೇಕ್ಷಕ ವರ್ಗದ ಮನಗೆದ್ದು ಬಿಡುಗಡೆಗೆ ಸಜ್ಜಾಗುತ್ತಿರುವ ಸ್ಯಾಂಡಲ್ವುಡ್ನ ಬಹುನಿರೀಕ್ಷೇಯ ಚಿತ್ರ “ವೀಲ್ ಚೇರ್ ರೋಮಿಯೋ”.
ಶ್ರೀ ತಿಮ್ಮಪ್ಪ ವೆಂಕಟಾಚಲಯ್ಯ ರವರ ನಿರ್ಮಾಣದ ಅಗಸ್ತ್ಯ ಕ್ರೀಯೇಷನ್ಸ್ ಬ್ಯಾನರ್ ನಡಿ ,ಸ್ಯಾಂಡಲ್ವುಡ್ ನ ಹಲವು ಯಶಸ್ವಿ ಸಿನಿಮಾಗಳಿಗೆ ಸಂಭಾಷಣೆ ಬರೆದಿರುವುದರ ಜೊತೆಗೆ ಪ್ರೇಕ್ಷಕರ ಗಮನಸೆಳೆದ ಯುವ ಪ್ರತಿಭೆ ನಟರಾಜ್ ಜಿ. ರವರು ಪೂರ್ಣ ಪ್ರಮಾಣದ ನಿರ್ದೇಶಿಸಿರುವ ಚೊಚ್ಚಲ ಚಿತ್ರ ‘ವೀಲ್ ಚೇರ್ ರೋಮಿಯೋ’. ವಿಭಿನ್ನ ಶೀರ್ಷಿಕೆಯೊಂದಿಗೆ ಸ್ಯಾಂಡಲ್ ವುಡ್ ನ ಬೆಳ್ಳಿ ತೆರೆಯಲ್ಲಿ ಸದ್ದು ಮಾಡಲು ಹೊರಟಿರುವ ಈ ವೀಲ್ ಚೇರ್ ರೋಮಿಯೋ’ ಸಿನೆಮಾದ ಹೀರೋ ಚಿಕ್ಕಮಗಳೂರಿನ ಯುವ ಪ್ರತಿಭೆ ರಾಮ್ ಚೇತನ್.
ಇಡೀ ಸಿನೆಮಾದ ಕೇಂದ್ರಬಿಂದುವಾಗಿ ಗುರುತಿಸಿಕೊಳ್ಳಲಿರುವ ರಾಮ್ ಚೇತನ್ ಕಾಲಿನ ಸ್ವಾಧೀನತೆ ಕಳೆದುಕೊಂಡು ವೀಲ್ ಚೇರ್ ನಲ್ಲೆ ಕುಳಿತುಕೊಂಡು ಪ್ರೀತಿಯ ನೈಜತೆ ಅರಿಯುವ ಪ್ರಯತ್ನದಲ್ಲಿ ತೊಡಗುತ್ತಾರೆ. ನಿಜಕ್ಕೂ ಇದು ಸವಾಲಿನ ಪಾತ್ರವಾಗಿದ್ದು ನಟ ರಾಮ್ ಚೇತನ್ ತನ್ನ ಚೊಚ್ಚಲ ನಾಯಕ ಪ್ರಯತ್ನದಲ್ಲಿ ಈ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿರುವುದು ಟ್ರೆಲರ್ ಮೂಲಕವೇ ಅಂದಾಜಿಸ ಬಹುದು. ರಾಮ್ ಚೇತನ್ ಇಡೀ ಸಿನಿಮಾದಲ್ಲಿ ನಾಯಕ ನಟನಾಗಿ ವೀಲ್ ಚೇರ್ ನಲ್ಲೆ ಕುಳಿತಿರುವುದು ಚಿತ್ರದ ವಿಶೇಷತೆಗಳಲ್ಲೊಂದು. ಸದ್ಯ ಸಿನಿಮಾದ ಟ್ರೇಲರ್ ರಿಲೀಸ್ ಆಗಿ ಎಲ್ಲರ ಗಮನಸೆಳೆದಿದೆ.
ವಿಕಲಚೇತನ ಪಾತ್ರದಲ್ಲಿನ ಹೀರೋ ರಾಮ್ ಚೇತನ್ ತಾನು ಮದುವೆಯಾಗಬೇಕೆಂಬ ಮನಸ್ಸಿನ ಬಯಕೆಯನ್ನು ತಂದೆಯ ಬಳಿ ಹೇಳಿಕೊಂಡಾಗ ಅದನ್ನು ಪೂರೈಸಲು ಹೀರೋ ತಂದೆ ನಡೆಸುವ ಪ್ರಯತ್ನವೇ ಈ ಚಿತ್ರದ ಕಥೆ. ಕಾಮಿಡಿಯ ಜೊತೆಗೆ ಭಾವನಾತ್ಮಕ ಹಾಗೂ ವೇಶ್ಯೆಯರ ಬದುಕಿನ ಒಳ-ಹೊರಗಿನ ವಾಸ್ತವ ಸಂಗತಿಗಳ ಮೇಲೆ ಸಿನಿಮಾದಲ್ಲಿ ಬೆಳಕು ಚೆಲ್ಲಲಾಗಿದೆ. ಚಿತ್ರದ ನಾಯಕಿಯಾಗಿ ನಟಿ ಮಯೂರಿ ಕ್ಯಾತರಿ ಅಭಿನಯಿಸಿದ್ದಾರೆ. ಜೊತೆಗೆ ಹಾಸ್ಯ ಪ್ರತಿಭೆ ರಂಗಾಯಣ ರಘು, ಸುಚೇಂದ್ರ ಪ್ರಸಾದ್, ತಬಲಾ ನಾಣಿ, ಗಿರಿ ಶಿವಣ್ಣ ಪ್ರಮುಖ ಪಾತ್ರವರ್ಗದಲ್ಲಿ ಗುರುತಿಸಿಕೊಂಡಿದ್ದಾರೆ. ಬಿ.ಜೆ. ಭರತ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದು, ಶೀಘ್ರದಲ್ಲೇ ಸಿನಿಮಾವನ್ನು ತೆರೆಗೆ ತರುವ ಯೋಜನೆಯಲ್ಲಿದೆ ಚಿತ್ರತಂಡ.