ವಂಡ್ಸೆ (ಏ, 20) : ದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಶಂಕರಾಚಾರ್ಯ ಪ್ರತಿಷ್ಠಾಪಿತ ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಳದ ಪವಿತ್ರ ಸೌಪರ್ಣಿಕಾ ನದಿ ಕಲುಷಿತ ಗೊಂಡಿದ್ದು ನದಿಯ ಜಲಚರಗಳು ಸತ್ತು ದಡ ಸೇರಿದ್ದು ಇದೀಗ ಜನರಲ್ಲಿ ಆತಂಕ ಮೂಡಿಸಿದೆ.
ಲಾಡ್ಜ್, ಹೋಟೆಲ್ ಉದ್ಯಮ, ಸ್ಥಳೀಯ ಅಂಗಡಿ-ಮುಂಗಟ್ಟುಗಳ ತ್ಯಾಜ್ಯಅಸಮರ್ಪಕ ಚರಂಡಿ ವ್ಯವಸ್ಥೆ ಇಂದಾಗಿ ಸೌಪರ್ಣಿಕಾ ನದಿ ಕಲುಷಿತಗೊಳ್ಳುತ್ತಿದೆ . ಅಲ್ಲದೆ ಕಾನೂನು ಬಾಹಿರವಾಗಿ ನದಿತೀರದ ಪ್ರದೇಶಗಳನ್ನು ಒತ್ತುವರಿ ಮಾಡಲಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.
ಈ ಬಗ್ಗೆ ಸ್ವಚ್ಛ ಸೌಪರ್ಣಿಕ , ಸೌಪರ್ಣಿಕೆಯ ಕೂಗು, ಸೌಪರ್ಣಿಕಾ ನದಿ ರಕ್ಷಣೆ ಕುರಿತಾದ ಹಲವು ಅಭಿಯಾನಗಳು ಸಾಮಾಜಿಕ ಕಾರ್ಯಕರ್ತರು ಹಾಗೂ ಪರಿಸರ ಪ್ರೇಮಿಗಳು ಕೈಗೊಂಡಿದ್ದು ಇದು ಯಾವುದೇ ರೀತಿಯ ಪರಿಣಾಮ ಬೀರಲಿಲ್ಲ. ಜೊತೆಗೆ ದೇವಳದ ಆಡಳಿತ ಮಂಡಳಿ ನದಿಯ ರಕ್ಷಣೆಗೆ ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳದೆ ನಿರ್ಲಕ್ಷ್ಯವಹಿಸಿದ ಪರಿಣಾಮ ಸೌಪರ್ಣಿಕಾ ನದಿ ಕಲುಷಿತಗೊಳ್ಳುತ್ತದೆ . ಈ ಬಗ್ಗೆ ತನಿಖೆ ನಡೆಯಬೇಕು ಎಂದು ಸ್ಥಳೀಯ ಸಾಮಾಜಿಕ ಕಾರ್ಯಕರ್ತರು ಸರ್ಕಾರಕ್ಕೆ ಮನವಿ ಸಲ್ಲಿಸಿರುತ್ತಾರೆ.