ಬಾಲ್ಯದ ಗೆಳತಿ
ಮಳೆಗಾಲದ ಸಮಯ….ಶಾಲೆಯ ಮೊದಲ ದಿನ. ಅಮ್ಮ ನನಗೆ ಸಮವಸ್ತ್ರ ತೊಡಿಸಿ, ರೆಡಿ ಮಾಡಿಸಿ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದಳು. ಮನಸ್ಸಿನಲ್ಲಿ ತುಂಬಾ ಭಯ ಮತ್ತು ಕಳವಳ. ನನ್ನ ಹಾಗೆ ಎಲ್ಲಾ ಮಕ್ಕಳು ಶಾಲೆಗೆ ಬರುತ್ತಿದ್ದರು. ಕೆಲವರು ಅಳುತ್ತಿದ್ದರು, ನನಗೆ ಭಯ, ಅತ್ತರೆ ಅಮ್ಮ ಬೈಯುತ್ತಾರೆಂದು. ಬೆಂಚಿನ ಮೇಲೆ ಹೋಗಿ ಕುಳಿತೆ. ಅಮ್ಮ ಮನೆಗೆ ಹೋಗುದನ್ನು ನೋಡಿ ಉಸಿರು ಬಿಗುವಾಯಿತು, ಕಣ್ಣಲ್ಲಿ ನೀರು ತುಂಬಿಬಂತು. ತಕ್ಷಣ ಅಮ್ಮನ ಹಿಂದೆ ಓಡಬೇಕೆಂದುಕೊಂಡೆ! ಧೈರ್ಯ ಬರಲಿಲ್ಲ. ಕ್ಲಾಸಿನ ತುಂಬೆಲ್ಲ ಮಕ್ಕಳು.
ಗಂಟೆ ಶಬ್ದ ಕೇಳಿಸಿತು. ಟೀಚರ್ ಕ್ಲಾಸಿಗೆ ಬಂದು ಸರದಿ ಪ್ರಕಾರ ಹೆಸರನ್ನು ಕೇಳುತ್ತ ನನ್ನ ಬಳಿಗೆ ಬಂದು ಹೆಸರೇನೆಂದು ಕೇಳಿದರು. ನನ್ನ ಮಾತು ಮೌನವಾಯಿತು. ಆದರೆ ನಾನು ಕುಳಿತ ಹಿಂದಿನ ಬೆಂಚಿನಿಂದ ಒಂದು ಗಟ್ಟಿಧ್ವನಿ ಕೇಳಿ ಬಂತು “ನನ್ನ ಹೆಸರು ದೀಪಾ” ಎಂದು. ಒಮ್ಮೆ ಹಿಂತಿರುಗಿ ನೋಡಿದೆ ಎರಡು ಜುಟ್ಟು, ಗುಂಡಗಿನ ಮುಖ ಆಕೆಯ ಕಣ್ಣಲ್ಲಿ ಏನೋ ಒಂದು ಆಕರ್ಷಣೆ. ಆಕೆಯ ಧೈರ್ಯ, ಚೆನ್ನಾಗಿ ಓದುದನ್ನು ನೋಡಿ ಟೀಚರ್ ಅವಳನ್ನು ಕ್ಲಾಸ್ ಲೀಡರ್ ಆಗಿ ಆಯ್ಕೆ ಮಾಡಿದರು. ಯಾವಾಗಲು ನಗುನಗುತ್ತಾ ಇರುವಳು ದೀಪಾ.
ಒಮ್ಮೆ ಆಕೆ ನನ್ನ ಬಳಿ ಪೆನ್ಸಿಲ್ ಕೇಳಿದಾಗ ಹೀಗೆ ನಮ್ಮ ಗೆಳೆತನ ಆರಂಭವಾಯಿತು. ದೀಪಾ ವಯಸ್ಸಿಗಿಂತ ಜಾಸ್ತಿನೇ ತಿಳಿದುಕೊಂಡಿದ್ದಳು ,ನೋಡಲು ನನಗಿಂತ ಸುಂದರವಾಗಿದ್ದಳು. ಊಟ, ಆಟದ ಸಮಯದಲ್ಲಿ ನಾವಿಬ್ಬರು ಒಬ್ಬರನೊಬ್ಬರು ಬಿಟ್ಟಿರುತ್ತಿರಲಿಲ್ಲ .ಹೀಗೆ ಸಮಯ ಕಳೆಯುತ್ತ ಏಳನೇ ತರಗತಿಗೆ ಬಂದೆವು.
ನಾನು ಕ್ಲಾಸ್ನಲ್ಲಿ ಫಸ್ಟ್ ಬಂದೆ ಅದಾದ ಬಳಿಕ ದೀಪಾ ನನ್ನ ಬಳಿ ಮಾತನಾಡುದ್ದನ್ನೇ ನಿಲ್ಲಿಸಿ ಬಿಟ್ಟಳು. ಊಟ ಮಾಡುವಾಗಲು ನನ್ನ ಜೊತೆ ಕುಳಿತುಕೊಳ್ಳುತ್ತಿರಲಿಲ್ಲ. ನನಗಂತು ತುಂಬಾ ಬೇಸರವಾಯಿತು. ಒಮ್ಮೆ ತಡೆಯಲಾಗದೆ ಕೇಳಿಯೇ ಬಿಟ್ಟೆ , ಏನಾಯಿತೇ ನಿಂಗೆ! ಯಾಕ್ ಸರಿಯಾಗಿ ಮಾತನಾಡುತ್ತಾ ಇಲ್ಲಾ, ನಾನೇನ್ ಮಾಡಿದೆ ನಿಂಗೆ ಎಂದು?. ಆಗ ಆಕೆ ಏನೂ ಪ್ರತಿಕ್ರೀಯಿಸಲೇ ಇಲ್ಲ. ನಂತರ ತಿಳಿಯಿತು ಆಕೆ ನನಗಿಂತ ಸ್ವಾರ್ಥಿ ಎಂದು. ನಾನು ಕ್ಲಾಸ್ಸಲ್ಲಿ ಫಸ್ಟ್ ಬಂದಿರುದು ಆಕೆಗೆ ಸಹಿಸಲಾಗಲಿಲ್ಲ.
ಮರುದಿನ ಆಕೆಯ ಹುಟ್ಟುಹಬ್ಬ ಕ್ಲಾಸ್ನಲ್ಲಿ ಎಲ್ಲರಿಗೂ ಚಾಕಲೇಟ್ ಹಂಚುತ್ತಿದ್ದಳು ನನಗೆ ಎರಡು ಚಾಕಲೇಟ್ ಎಕ್ಸ್ಟ್ರಾ ಕೊಟ್ಟಳು. ನಾನು ಖುಷಿಯಿಂದ ನನ್ನ ಹೇರ್ ಬ್ಯಾಂಡ್ ಗಿಫ್ಟ್ ಆಗಿ ಕೊಟ್ಟೆ. ಮತ್ತೆ ಗೆಳೆತನ ಆರಂಭವಾಯಿತು. ಹಾಗೆ ಕಾಲಕಳೆಯುತ್ತಾ ಎಸ್. ಎಸ್.ಎಲ್. ಸಿ.ಗೆ ಬಂದೆವು. ಹೊಸ ಯೋಚನೆ, ಹೊಸ ಆಕರ್ಷಣೆ, ಚಂಚಲ ಮನಸ್ಸು.. ಸ್ಕೂಲ್ ಅಲ್ಲಿ .. ಮನೆಯಲ್ಲಿ … ಅದೇ ರಾಗ.. ಅದೇ ತಾಳ … ಓದು… ಓದು.. ಓದು…….. ನಾನು ದೀಪಾ ಒಂದೇ ಟ್ಯೂಷನ್ ಸೆಂಟರ್ ಗೆ ಸೇರಿಕೊಂಡೆವು. ದೀಪಾ ನನಗಿಂತ ತುಂಬಾ ಮೇಚ್ಯೂರ್ಡ ಆಗಿದ್ದಳು. ನನ್ನ ಮುಖನೋಡಿ ನನ್ನ ಮನಸ್ಸಲ್ಲೇನಿದೆ ಎಂದು ತಿಳಿದುಕೊಳ್ಳುತಿದ್ದಳು. ನಾನೆಂದರೆ ಅಚ್ಚುಮೆಚ್ಚು ಅವಳಿಗೆ. ನಂಗೆ ಸ್ವಲ್ಪ ಹುಡುಗಾಟಿಕೆ -ಸಿಟ್ಟು ಜಾಸ್ತಿನೇ ಬರುತ್ತಿತ್ತು. ದೀಪಾಳಿಗೆ ನನ್ನ ಬೈಗುಳ ಇಲ್ಲದಿದ್ದರೆ ನಿದ್ದೇ ಬರುತ್ತಿರಲಿಲ್ಲ, ಕೆಲವೊಮ್ಮೆ ಅವಳೂ ಕೂಡ ಹೇಳುತ್ತಿರುತ್ತಾಳೆ.
ಈ ಓದು ಎಂಬ ಜಂಜಾಟದ ನಡುವೆ ನಮ್ಮ ಸ್ಕೂಲ್ ನಲ್ಲಿ ಬಾಲಕ -ಬಾಲಕಿಯರಿಗೆ ತ್ರೋಬಾಲ್ ಪಂದ್ಯಾಟ ಏರ್ಪಡಿಸಲಾಗಿತ್ತು. ನಮ್ಮ ಟೀಮ್ ಅಲ್ಲಿ ದೀಪಾ ಕ್ಯಾಪ್ಟನ್ ಆಗಿದ್ದಳು. ನಮ್ಮ ಮ್ಯಾಚ್ ಮುಗಿಸಿ ನಾವು ಹುಡುಗರ ಫೈನಲ್ ಮ್ಯಾಚ್ ನೋಡಲು ಬಂದೆವು. ದೀಪಾಗೆ ತುಂಬಾ ಸುಸ್ತ್ ಆಗಿ ನಾನು ಕ್ಲಾಸ್ ಗೇ ಹೋಗಿ ರೆಸ್ಟ್ ಮಾಡ್ತಿನಿ ಎಂದು ಹೇಳಿ ಹೋದಳು. ನಾನು ಮ್ಯಾಚ್ ನೋಡತ್ತಾ ಕುಳಿತೆ ಆಟದಲ್ಲಿ ಒಬ್ಬ ಆಕರ್ಷಕ ಮೈ ಕಟ್ಟು, ಆತನ ಕೂದಲು ಗಾಳಿಗೆ ಹಾರುತ್ತಿರುವಾಗ ಹೀರೋ ತರ ಕಾಣಿಸುತ್ತಿದ್ದ. ಮನಸ್ಸಿನಲ್ಲಿ ಏನೋ ಹೊಸ ಅನುಭವ ಮೊದಲಬಾರಿ ಆದಂತಾಯಿತು!!!!
ಹಸಿವಾಗುತ್ತಿತ್ತು ನಂತರ ದೀಪಾಳ ಬಳಿಹೋದೆ ಇಬ್ಬರು ಊಟದ ಲೈನ್ ನಲ್ಲೀ ನಿಂತಿದ್ವಿ. ದೀಪಾಳ ಹಿಂದೆ ಆ ಹುಡಗ ನಿಂತಿದ್ದ ದೀಪಳನ್ನೇ ನೋಡುತಿದ್ದ ನನಗೆ ಹೊಟ್ಟೆಯೊಳಗೆ ಬಿಸಿ ಹೆಚ್ಚಾದಂತಾಯಿತು. ಎಸ್. ಎಸ್. ಎಲ್. ಸಿ. ಯ ಕೊನೆಯ ದಿನಗಳು ಎಲ್ಲರೂ ಆಟೋಗ್ರಾಫ್ ಬುಕ್ ಹಿಡಿದುಕೊಂಡು ಓಡಾಡುತ್ತಿದ್ದರು. ನನ್ನ ಬಳಿ ಬಂದು ಬರೆದು ಕೊಡು ಎನ್ನುತಿದ್ದರು. ನಾನು ಕೂಡಾ ಕುತೂಹಲದಿಂದ ಆಟೋಗ್ರಾಫ್ ಬುಕ್ ಮಾಡಿದೆ ಮೊದಲ ಆಟೋಗ್ರಾಫ್ ನನ್ನ ಗೆಳತಿ ದೀಪಾಳ ಬಳಿ ಕೇಳಿದೆ. ಆಕೆ ಮುಗುಳ್ನಕ್ಕು ಬೇರೆಯಾರಿಗಾದರು ಕೊಡು ಎಂದಳು. ಅವಳ ನಗುವಿಗೆ ಹಿಂದಿನ ಗೆಳೆತನ ನನಗೆ ತಿಳಿದಿರಲಿಲ್ಲ ಯಾಕೆಂದರೆ ಅವಳು ನನ್ನ ಸ್ನೇಹಕ್ಕೆ ಬೆಲೆಕಟ್ಟಲಾಗದಷ್ಟು ಪ್ರಾಮುಖ್ಯತೆ ನೀಡಿದ್ದಳು. ನಂತರ ಬಂದೇಬಿಟ್ಟಿತು ಸೆಂಡ್ ಆಫ್. ನಾನು ಚೆನ್ನಾಗಿ ರೆಡಿ ಆಗಿ ಸ್ಕೂಲ್ ಗೇ ಬಂದೆ ಎಲ್ಲರೂ ನಂಗಿಂತ ಚೆನ್ನಾಗಿ ರೆಡಿಯಾಗಿದ್ದರು. ಸುತ್ತಮುತ್ತ ನೋಡಿದೆ ದೀಪಾ ಎಲ್ಲೂ ಕಾಣಿಸಲೇ ಇಲ್ಲಾ. ಓಡಿ ದೀಪಾಳ ಮನೆಗೆ ಹೋದೆ ಅವಳು ಇನ್ನು ರೆಡಿ ಆಗಿರಲಿಲ್ಲ ಹಟಮಾಡಿ ರೇಡಿಮಾಡಿಸಿ ಸ್ಕೂಲ್ಗೆ ಕರೆತಂದೆ. ಕಾರ್ಯಕ್ರಮದಲ್ಲಿ ಅವರವರ ಅನಿಸಿಕೆ ಅನುಭವಗಳನ್ನು ಹಂಚಿಕೊಳ್ಳುತಿದ್ದರು. ನಾನು ಕೂಡ ನನಗಾದ ಅನುಭವಗಳನ್ನು ಹಂಚಿಕೊಂಡೆ.. ದೀಪಾಳ ಸರದಿ ಬಂತು ಅವಳು ಕೂತಲ್ಲಿಂದ ಏಳಲೇ ಇಲ್ಲ. ನಾನು ಅವಳಿಗೆ ಒತ್ತಾಯಿಸಿದೆ ಅದ್ದರಿಂದ ಅವಳು ಸ್ಟೇಜ್ ಗೆ ಹೋದಳು .. ಅವಳಿಗೆ ಮಾತುಕಟ್ಟಿತು .. ಉಸಿರಾಡಲು ಕಷ್ಟವಾಯಿತು ಕಣ್ಣಲ್ಲಿ ನೀರುತುಂಬಿಕೊಂಡಿತು.. ಏನೂಹೇಳದೆ ಬಂದು ನನ್ನ ಅಪ್ಪಿಕೊಂಡಳು.
ನನಗೂ ಕೂಡ ತಿಳಿಯದೆ ಕಣ್ಣಲ್ಲಿ ಸುರಿಮಳೆಯೇ ಬಂದಿತು. ಎಲ್ಲರೂ ನಮ್ಮನ್ನು ನೋಡಿ ನಗುತ್ತಿದ್ದರು. ದೀಪಾ ನನ್ನನು ಹೊರಗಡೆ ಕರೆದುಕೊಂಡು ಹೋಗಿ ಸಮಾಧಾನ ಪಡಿಸುತ್ತಿದ್ದಳು ಆದರೆ ಅವಳಿಗಾದ ದುಃಖ ಅವಳ ಕಣ್ಣು ನನಗೆ ಹೇಳುತಿತ್ತು. ಹೀಗೊಂದು ದಿನ ಎಸ್. ಎಸ್. ಎಲ್. ಸಿ. ಫಲಿತಾoಶ ಬಂದೆ ಬಿಟ್ಟಿತು. ನಾನು ಡಿಸ್ಟಿಂಕ್ಷನ್ ಅಲ್ಲಿ ಪಾಸ್ ಅದೆ. ನನ್ನ ಗೆಳತಿ ದೀಪಾ ಫಸ್ಟ್ ಕ್ಲಾಸ್ ಬಂದಿರುದರಿಂದ ಅವಳಿಗೆ ನನ್ನ ಕಾಲೇಜಿನಲ್ಲಿ ಸೀಟ್ ಸಿಗಲಿಲ್ಲ. ಅವಳು ಬೇರೆ ಕಾಲೇಜ್ ಆಯ್ಕೆ ಮಾಡಿಕೊಂಡಳು. ಒಂದರಿಂದ ಹತ್ತನೇ ಕ್ಲಾಸ್ ವರೆಗೆ ಪ್ರತಿಯೊಂದು ವಿಷಯದಲ್ಲಿ ಜೊತೆಗಿದ್ದ ದೀಪಾ ಮೊದಲ ಬಾರಿಗೆ ದೂರಾದಳು. ಕಾಲೇಜಿನ ಮೊದಲ ದಿನ ಒಂದುವಾರ ಕಳೆದರು ಯಾರೊಬ್ಬರ ಗೆಳೆತನ ನನಗೆ ಇಷ್ಟವಾಗುತ್ತಿರಲಿಲ್ಲ. ದೀಪಾಳ ಇಲ್ಲದಿರುವಿಕೆ ತುಂಬಾ ಕಾಡತೊಡಗಿತು. ದೀಪಾ ದಿನಾ ಫೋನ್ ಮಾಡಿ ನನ್ನ ಜೊತೆ ಮಾತನಾಡುತ್ತಿದ್ದಳು ಆದರೂ ಏನೋ ಒಂದು ಮಿಸ್ಸಿಂಗ್ ಏನಿಸತೋಡಗಿತು. ದಿನಕಳೆದಂತೆ ಆಕೆ ಕಾಲ್ ಮಾಡುದನ್ನು ನಿಲ್ಲಿಸಿ ಬಿಟ್ಟಳು. ಒಬ್ಬರ ಬೆಲೆ ತಿಳಿಯುದು ಅವರು ದೂರ ಆದಾಗಲೇ ಎಂದು ಅರಿವಾಯಿತು. ಎಲ್ಲಾ ವಿಷಯದಲ್ಲಿ ಕಹಿ ಅನುಭವಗಳೇ ಆಗ ತೊಡಗಿತು. ದೀಪಾಳ ಅಗಲಿಕೆಗೋಸ್ಕರವೊ ಅಥವಾ ನನ್ನ ಹಿಂಜರಿಕೆಗೊ ಎಂದು ತಿಳಿದಿರಲಿಲ್ಲ ಸಂಪೂರ್ಣವಾಗಿ ನಾನು ದೀಪಾಳ ಮೇಲೆ ಅವಲಂಬಿತವಾಗಿದ್ದೆ ಎನ್ನುದು ಖಚಿತವಾಯಿತು.
“ಬೇವು ಸ್ವಾಭಾವಿಕವಾಗಿ ಸಿಗುವ ವಸ್ತು ಆದರೆ ಬೆಲ್ಲವನ್ನು ನಾವೇ ಸಿದ್ದಪಡಿಸಿಕೊಳ್ಳಬೇಕೆಂದು ತಿಳಿಯಿತು”. ಜೀವನದಲ್ಲಿ ಎಷ್ಟೇ ಕಷ್ಟ ಬಂದರು ನಗುತ್ತಾ ಎದುರಿಸಬೇಕೆಂದು ಕಲಿತೆ. ಅವರಿವರಿಂದ ಸಂತೋಷ ಹುಡುಕಿಕೊಂಡು ಹೀಗೆ ಡಿಗ್ರಿ ಮುಗಿಸಿ ಮತ್ತೆ ಎಂ. ಕಾಮ್. ಸೇರಿಕೊಂಡೆ.
ಮೊದಲ ದಿನ ನಾನು ಲಾಸ್ಟ ಬೆಂಚಿನಲ್ಲಿ ಕುಳಿತುಕೊಂಡಿದ್ದೆ. ಮುಂದುಗಡೆ ಬೆಂಚಿನಲ್ಲಿ ಗುಂಗುರು ಕೂದಲಿನ ಹುಡುಗಿ…
ಅವಳ ಗೆತಿಯರೊಂದಿಗೆ ಮಾತಿನಲ್ಲಿ ಬ್ಯುಸಿ ಅಗಿದ್ದಳು. ನೋಡಿದರೆ ನನ್ನ ದೀಪಾಳ ಹಾಗೆಯೇ ಇದ್ದಳು. ಪಕ್ಕದ ಹುಡುಗಿಗೆ ಕರೆದು ಅವಳನ್ನು ಕರೆ ಎಂದೇ ..ಅವಳು ಹಿಂದಿರುಗಿ ನೋಡಿದಳು….ಸ್ವರ್ಗಾನೆ ಧರೆಗಿಳಿದು ಬಂದಂತಾಯಿತು.
ಹೌದು!!!!….. ಅದೇ ನನ್ನ ಬಾಲ್ಯದ ಗೆಳತಿ ದೀಪಾ………….
ಅಕ್ಷತಾ ಕಾಂಚನ್
ಶಿಕ್ಷಕಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ
ಮಣುರು- ಪಡುಕರೆ.