ನಾನು ಬೆಂಗಳೂರಿನಿಂದ ಬಂದು ಸುಮಾರು ಹತ್ತು ದಿನ ಆಗಿದೆ. ಮನೆಯ ಮಹಡಿ ಮೇಲಿನ ಒಂದು ಕೋಣೆಯಲ್ಲಿ ಹೋಮ್ ಕ್ವಾರಂಟೈನ್ ಆಗಿದ್ದೇನೆ. (Covid ಇಲ್ಲ ಆದರೂ ನಮ್ಮ ಜಾಗ್ರತೆ ). ಮನೆಯ ಗೇಟ್ ಹತ್ತಿರ ಒರ್ವ ಮಹಿಳೆಯ ಕೂಗು ಕೇಳಿಸಿತು. ನಮ್ಮ ಮನೆಯ ಎರಡು ನಾಯಿ ಬೌ ಬೌ ಎಂದು ಕೂಗುತ್ತಾ ಆಕೆಯ ಮೇಲೆ ದಾಳಿ ಮಾಡಲು ಮುಂದಾದವು. ನಾನು ಜೋರಾಗಿ ನಾಯಿಗಳನ್ನು ವಾಪಸು ಕರೆದೆ… ಅವು ಸುಮ್ಮನಾದವು..
ಆ ತಾಯಿಯ ಮುಖದಲ್ಲಿ ಬದುಕಿದೆಯ ಬಡ ಜೀವವೇ ಎಂಬಂತೆ ಭಾಸವಾಗುತ್ತಿತ್ತು. ನಾನು ಮೇಲಿಂದ ಕೇಳಿದೆ … ಯಾರು.. ಯಾರ್ ಬೇಕಿತ್ತು.
ಆಕೆ :- ಅಣ್ಣಾ ಅಮ್ಮ ಇಲ್ಯಾ….
ನಾನು :- ಇದ್ರ್ ಎಂತ ಬೇಕಿತ್
ಒಂಚೂರ್ ಕರಿತ್ರ್ಯಾ… ಅನ್ನುವ ಸಮಯಕ್ಕೆ ಅಮ್ಮ ಹೊರಗೆ ಬಂದಳು.
ಹೋ.. ಭಾಗೀರತಿ…. ಎಂತ ! ಅಂತ ಅಮ್ಮ ಕೇಂಡಳ್.
ಅದಕ್ಕೆ ಆ ತಾಯಿಯ ಉತ್ತರ ಕೇಳಿದರೆ ಯಾರಿಗಾದರೂ ಕರುಳು ಕರಗುತ್ತದೆ.!
ಅಮ್ಮಾ ಮನೆಂಗ್ಯಾ ಒಂದ್ ಕಾಳ್ ಅಕ್ಕಿ ಇಲ್ಲಾ.
ದೇವ್ರ್ ಕೊಟ್ಟ್ ಎರಡ್ ಮಕ್ಳ್ ಹೊಟ್ಟಿಗ್ ಇಲ್ದೆ ಮರಕ್ತೊ, ಏರಡ್ ಸೇರ್ ಅಕ್ಕಿ ಕೊಡಿ, ಎಸ್ರಿಗೆ ಇಟ್ಟಿಕಿ ಬಂದಿದೆ. ನೀರ್ ಕೊದಿಬಂದ್ ಬತ್ತಿ ಹೊಯಿತೆನೋ… ಎಂದು ಅಮ್ಮನ ಬಳಿ ಅಕ್ಕಿಗಾಗಿ ಮುಂದಿನ ಮಳೆಗಾಲದ ಸಮಯದಲ್ಲಿ ನೆಟ್ಟಿಗೆ ಬತ್ತೆ ಎಂದು ಅಂಗಲಾಚುತ್ತಿದ್ದಳು.
ಅದಕ್ಕೆ ಅಮ್ಮ ಸರಿ! ಎಂದು ಐದು ಸೇರು ಕೊಚ್ಚಕ್ಕಿ, ಎರಡು ಸೇರು ಬೆಳ್ತಿಗೆ, ನಾಲ್ಕು ತೆಂಗಿನಕಾಯಿ, ನಾಲ್ಕು ಕಾಟ್ ಮಾವಿನ ಹಣ್ಣು, ಹತ್ತಾರು ಮುರಿನಹುಳಿ, ಸ್ವಲ್ಪ ಬಸಳೆ ಕೊಟ್ಟರು. ಆಗ ಆ ತಾಯಿಯ ಮುಖದಲ್ಲಿ ಧನ್ಯತಾ ಭಾವ ಕಾಣುತ್ತಿತ್ತು.
ಆಕೆಯ ಹೆಸರು ಭಾಗೀರತಿ. ಊರು ಉತ್ತರ ಕನ್ನಡ ಜಿಲ್ಲೆಯ ಮುಂಡಗೊಡು ಹತ್ತಿರದ ಒಂದು ಹಳ್ಳಿ.
ತುತ್ತಿನ ಕೂಳಿಗಾಗಿ ಜೀವನ ಅರಸುತ್ತಾ ಬಂದ ಬಡಪಾಯಿ ಕೊನೆಗೆ ನೆಲೆಕಂಡಿದ್ದು ನಮ್ಮ ಊರಿನಲ್ಲಿ. ನೆಟ್ಟಿ , ಕೊಯ್ಲು, ತೋಟ, ತುಡಿಗೆ ಅಂತ ದಿನಗೂಲಿ ಮಾಡಿಕೊಂಡು ತಾನು ಹಾಗೂ ತನ್ನ ಮಕ್ಕಳ ಹೊಟ್ಟೆ ತುಂಬಿಸಿಕೊಂಡು ಬದುಕು ಸಾಗಿಸುತ್ತಿದ್ದವಳು.
ಆಕೆಯದ್ದು ಒಂದು ಕಥೆ… ಕಟ್ಟಿಕೊಂಡ ಗಂಡ ಒಂದು ಮಗುವನ್ನು ಕರುಣಿಸಿ ಕುಡಿತ ಹೆಚ್ಚಾಗಿ ಶಿವನ ಪಾದ ಸೇರಿಕೊಂಡ. ಇನ್ನೂ ಈ ಊರಲ್ಲಿ ಇದ್ದರೆ ನನಗೆ ಮತ್ತು ನನ್ನ ಮಕ್ಕಳಿನ ಭವಿಷ್ಯದಲ್ಲಿ ಅನೇಕ ಸವಾಲುಗಳು ಎದುರಾಗುತ್ತದೆ ಎಂದುಯೋಚಿಸಿದ ಈ ತಾಯಿ ತನ್ನ ಊರು ತೊರೆದು ಇನ್ನೊಂದು ಊರಿಗೆ ಕೆಲಸಕ್ಕಾಗಿ ಹೊರಟಳು. ಆ ಸಂದರ್ಭದಲ್ಲಿ ಇಕೆಗೆ ಒಬ್ಬ ಪರಿಚಯ ಆದ… ಅವನಿಂದ ಒಂದು ಮಗು ಆದ ನಂತರ ತಿಳಿಯಿತು ಅವನು ಪರಮ ಕುಡುಕ ಅವನಿಗೆ ಮೊದಲೇ ಮದುವೆಯಾಗಿ ಎರಡು ಹೆಣ್ಣು ಮಕ್ಕಳು ಇದ್ದಾರೆ ಎಂದು. ಇದನ್ನು ತಿಳಿದು ನನ್ನಿಂದ ನನ್ನಂತಹ ಆ ಹೆಣ್ಣುಮಕ್ಕಳಿಗೆ ಅನ್ಯಾಯ ಆಗಬಾರದು ಅಂತ ತನ್ನ ಎರಡು ಪುಟ್ಟ ಕಂದಮ್ಮಗಳನ್ನು ಬೆನ್ನಿಗೇ ಕಟ್ಟಿಕೊಂಡು ಆ ಊರು ಬಿಟ್ಟು ನಮ್ಮ ಊರಿಗೆ ಬಂದವಳು. ಈಗ ಎರಡು- ಮೂರು ವರ್ಷಗಳಿಂದ ನಮ್ಮೂರವಳೆ ಆಗಿ ಜೀವನ ಸಾಗಿಸುತ್ತಿದ್ದಾರೆ.
ಏನೂ ಮಾಡುವುದು ರಾಮೇಶ್ವರಕ್ಕೆ ಹೋದರು ಶನೇಶ್ವರನ ಕಾಟ ತಪ್ಪಿದಲ್ಲ ಅನ್ನುವ ಹಾಗೆ ಇಲ್ಲಿ ಜೀವನ ಸರಿ ಆಗಿತ್ತು ಅನ್ನುವ ಹೊತ್ತಿಗೆ ಈ ಮಹಾ ಮಾರಿ ಕರೋನ ಮತ್ತು ಲಾಕ್ ಡೌನ್…
ಕೃಷಿ ಕೆಲಸಕ್ಕೆ ಕರೆಯುವರು ಯಾರು ಇಲ್ಲ..
ಕಟ್ಟಡ ಕೆಲಸ ಹತ್ತಿರದಲ್ಲಿ ಇಲ್ಲ .
ಹೊಟ್ಟೆ ಕೇಳಿತೆ…ನಮ್ಮ ಕಷ್ಟ………
ಬಡವರಾಗಿ ಹುಟ್ಟಬಾರದು ಬಾಳೆಮರವಾಗಿ ಬೆಳೆಯಬಾರದು ….
ಎರಡು ಕಣ್ಣೀರು ತರಿಸುವಂತ ಡೈಲಾಗ್ ಹೇಳಿ ಹೊರಟಳು……
ರಾಘವೇಂದ್ರ ಹಾರ್ಮಣ್
ಇಡೂರು ಕುಂಜ್ಞಾಡಿ