ಬೈಂದೂರು (ಮೇ, 27): ಮುರುಡೇಶ್ವರದ ಪ್ರಸಿದ್ಧ ಮರದ ಕಲಾಕ್ರತಿ ರಚಿಸುವ ಕಲೆಗಾರ ಸತೀಶ್ ದೇವಾಡಿಗ ಇವರ ಅದ್ಭುತವಾದ ಮರದ ಕೆತ್ತನೆಗೆ ಮನಸೋತ ಭಾರತೀಯ ಚಿತ್ರರಂಗದ ಪ್ರಸಿದ್ದ ನಟ ಅರ್ಜುನ್ ಸರ್ಜಾ ಅವರು ಚೆನ್ನೈ ನಲ್ಲಿರುವ ತನ್ನ ಆರಾಧ್ಯ ದೇವರಾದ ಆಂಜನೇಯ ದೇವಾಲಯದ ಪ್ರವೇಶದ್ವಾರದ ಬಾಗಿಲುಗಳ ಮರದ ಕೆತ್ತನೆಯ ಕೆಲಸವನ್ನು ಸತೀಶ್ ದೇವಾಡಿಗರಿಗೆ ಒಪ್ಪಿಸಿದ್ದಾರೆ. ಹಾಗೆಯೇ ಅರ್ಜುನ್ ಸರ್ಜಾರವರ ಅಳಿಯ ಚಿರಂಜೀವಿ ಸರ್ಜಾ ಹಾಗೂ ಅರ್ಜುನ್ ಸರ್ಜಾರ ಸಹೋದರ ಕಿಶೋರ್ ಸರ್ಜಾ ಮತ್ತು ತಂದೆ ಶಕ್ತಿಪ್ರಸಾದ್ ಇವರ ಭಾವಚಿತ್ರದ ಮೂರ್ತಿಯ ಮರದ ಕೆತ್ತನೆಯ ಕೆಲಸವನ್ನು ಸಹ ಸತೀಶ್ ದೇವಾಡಿಗರಿಗೆ ನೀಡಿರುತ್ತಾರೆ.
ಸತೀಶ್ ದೇವಾಡಿಗ ಇವರು ಮೂಲತಃ ಮುರುಡೇಶ್ವರ ಭಟ್ರುಹಿತ್ಲಿನವರು. ಸತೀಶ್ ದೇವಾಡಿಗ ಇವರ ರಚನೆಯ ಕಲಾಕ್ರತಿಗೆ ಮನಸೋತ ಅನೇಕ ರಾಜಕಾರಣಿಗಳು ಹಾಗೂ ಚಿತ್ರರಂಗದ ನಟರು ಮರದ ಕೆತ್ತನೆಯ ಕೆಲಸವನ್ನು ನೀಡಿದ್ದಾರೆ. ಇವರು ಧರ್ಮಸ್ಥಳ, ತಮಿಳುನಾಡು ಮತ್ತು ಕೇರಳದ ತಿರುವನಂತಪುರಂ ಮುಂತಾದ ಪ್ರಸಿದ್ಧ ಕ್ಷೇತ್ರಗಳಲ್ಲಿ ಮರದ ಕಲಾಕ್ರತಿಯ ಕೆತ್ತನೆಯ ಕೆಲಸವನ್ನು ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ಈಗಾಗಲೇ ಜಿಲ್ಲಾ ಹಾಗೂ ರಾಜ್ಯದಲ್ಲಿ ಹಲವಾರು ಪ್ರಶಸ್ತಿ ಪಡೆದುಕೊಂಡಿರುವ ಇವರು ಮರದ ಕೆತ್ತನೆಯ ಚಕ್ರವರ್ತಿ ಬಿರುದು ಕೂಡ ಪಡೆದಿದ್ದಾರೆ.













